ಚಿದಂಬರಂ ಪರ ವಕೀಲರ ಮನವಿಗೆ ಸುಪ್ರೀಂಕೋರ್ಟ್ ಅಸ್ತು : ಸೆ.5ವರೆಗೂ ತಿಹಾರ್‌ ಜೈಲನಿಂದ ಪಾರು

ಐಎನ್‌ಎಕ್ಸ್‌ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಿಬಿಐ ವಶದಲ್ಲಿರುವ ಹಿರಿಯ ಕಾಂಗ್ರೆಸ್ಸಿಗ ಪಿ.ಚಿದಂಬರಂ, ದೆಹಲಿಯ ತಿಹಾರ್‌ ಜೈಲು ಪಾಲಾಗುವುದನ್ನು ಸೆ.5 ವರೆಗೂ ತಪ್ಪಿಸಿಕೊಂಡಿದ್ದಾರೆ.

ಚಿದಂಬರಂ ಅವರನ್ನು ಇನ್ನು ವಶದಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ಸಿಬಿಐ ವಾದ ಮಂಡಿಸಿದ ಹಿನ್ನೆಲೆಯಲ್ಲಿ, ಅವರನ್ನು ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿ, ತಿಹಾರ್‌ ಜೈಲಿಗೆ ಕಳುಹಿಸುವ ಭೀತಿ ಎದುರಾಗಿತ್ತು.

ಈ ವೇಳೆ ತಮ್ಮನ್ನು ತಿಹಾರ್‌ ಜೈಲಿಗೆ ಕಳುಹಿಸಬಾರದು ಎಂದು ಚಿದು ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡರು. ಒಂದು ವೇಳೆ ನ್ಯಾಯಾಂಗ ವಶದ ಹೆಸರಿನಲ್ಲಿ ಚಿದಂಬರಂ ಅವರನ್ನು ಜೈಲಿಗೆ ಕಳುಹಿಸಿದರೆ, ಸದ್ಯ ಸುಪ್ರೀಂಕೋರ್ಟ್‌ನ ವಿಚಾರಣೆ ಹಂತದಲ್ಲಿರುವ ಚಿದಂಬರಂ ಸಲ್ಲಿಸಿರುವ ಅರ್ಜಿಗಳು ನಿರರ್ಥಕವಾಗುತ್ತದೆ ಎಂದು ವಾದಿಸಿದರು.

ಈ ವಾದ ಆಲಿಸಿದ ಸುಪ್ರೀಂಕೋರ್ಟ್‌, ಚಿದಂಬರಂ ಅವರನ್ನು ಸೆ.5ವರೆಗೂ ಸಿಬಿಐ ವಶಕ್ಕೆ ನೀಡಿ ಆದೇಶಿಸಿತು. ಜೊತೆಗೆ ಅಲ್ಲಿಯವರೆಗೂ ಅವರನ್ನು ಜೈಲಿಗೆ ಕಳುಹಿಸದಂತೆ ಸೂಚಿಸಿತು. ಇದೇ ವೇಳೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ಆದೇಶ ಸೇರಿ ಚಿದಂಬರಂ ಸಲ್ಲಿಸಿರುವ ಇತರೆ ಮೇಲ್ಮನವಿ ಅರ್ಜಿಗಳ ಕುರಿತು ಗುರುವಾರ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್‌ ಹೇಳಿತು.

ಹೀಗಾಗಿ ಗುರುವಾರ ಚಿದು ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ. ಅಂದು ಅವರಿಗೆ ಜಾಮೀನು ಸಿಕ್ಕರೂ ಸಿಗಬಹುದು, ಇಲ್ಲವೇ ನ್ಯಾಯಾಂಗ ವಶಕ್ಕೆ ಒಪ್ಪಿಸಿದರೆ ತಿಹಾರ್‌ ಜೈಲಿನ ಪಾಲಾಗಲೂ ಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights