ದರ್ಶನ್​, ಯಶ್​ ಜೊತೆ ಗಿರ್ಮಿಟ್​ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ ಮಕ್ಕಳು : ಬಸ್ರೂರು ಸಾಹಸಕ್ಕೆ ಶಿವಣ್ಣ ಮೆಚ್ಚುಗೆ

ನಿರ್ದೇಶಕ, ಸಂಗೀತ ನಿದೇಶಕ ಬಸ್ರೂರು ಹೊಸ ಪ್ರಯತ್ನಕ್ಕೆ ಪ್ರೇಕ್ಷಕ ವಾಹ್​ ಎಂದಿದ್ದಾನೆ.  ರವಿ ಬಸ್ರೂರು ಮತ್ತು ತಂಡದ ಪ್ರಯತ್ನದ ಫಲವಾದ ಮಕ್ಕಳ ಮೊದಲ ಕಮರ್ಷಿಯಲ್​ ಚಿತ್ರ ಗಿರ್ಮಿಟ್​ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ ಮಕ್ಕಳು ದೊಡ್ಡವರ ದಿರಿಸಿನಲ್ಲಿ ಮನೋಜ್ಞವಾಗಿ ಅಭಿನಿಯಿಸಿದ್ದಾರೆ. ಇವರಿಗೆ ಸ್ಟಾರ್​ ನಟರು ಹಿನ್ನಲೆ ದನಿ ನೀಡಿರುವುದು ಚಿತ್ರಕ್ಕೆ ಅಂದವಾದ ಚೌಕಟ್ಟು ಒದಗಿಸಿದೆ.

ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಮಕ್ಕಳಿಗೆ ರಾಕಿಂಗ್​ ಸ್ಟಾರ್​ ಯಶ್​ ಮತ್ತು ನಟಿ ರಾಧಿಕಾ ಪಂಡಿತ್​ ದನಿ ನೀಡಿದ್ದಾರೆ. ಉಳಿದಂತೆ ಹಿರಿಯ ನಟಿ ತಾರಾ, ಅಚ್ಯುತ್ ಕುಮಾರ್​, ರಂಗಾಯಣ ರಘು, ಸಾಧು ಕೋಕಿಲಾ ಮೊದಲಾದ ಹಿರಿಯ ಕಲಾವಿದರು ತಮ್ಮ ಕಂಠ ನೀಡಿದ್ದಾರೆ.

ಈಗ ಹೊಸ ವಿಷುವೇನೆಂದರೆ ಚಿತ್ರದಲ್ಲಿ ಅಭಿನಯಿಸಿರುವ ಮಕ್ಕಳು ಹೊಸ ಆಸೆಯೊಂದನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರಗಳಿಗೆ ದನಿ ನೀಡಿರುವ ನಟ ಯಶ್​ ಮತ್ತು ರಾಧಿಕಾ ಜೊತೆ ಚಿತ್ರ ವೀಕ್ಷಿಸಬೇಕು ಎಂಬ ಅಭಿಲಾಷೆ ಹೊರಹಾಕಿದ್ದಾರೆ. ಟಿವಿ ವಾಹಿನಿಗಳ ಸಂದರ್ಶನಗಳಲ್ಲೂ ತಮ್ಮ ಆಸೆ ಹೇಳಿಕೊಂಡಿದ್ದಾರೆ. ಆದರೆ ಚಿತ್ರಕ್ಕೆ ಡಬ್​ ಮಾಡಿರುವ ಯಶ್​ ಮಕ್ಕಳ ಆಸೆ ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಲ್ಲದೆ ಬಾಲ ನಟರು ಮತ್ತೊಂದು ಆಸೆಯನ್ನು ಹೊರ ಹಾಕಿದ್ದಾರೆ. ಅದು ಏನೆಂದರೆ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕುಂದಾಪುರದ ಮಕ್ಕಳು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳಾಗಿದ್ದಾರೆ. ತಮ್ಮ ನೆಚ್ಚಿನ ನಟ ಡಿ ಬಾಸ್​ ಜೊತೆಯೂ ಚಿತ್ರ ನೋಡಬೇಕು ಎಂಬ ತಮ್ಮ ಬಯಕೆ ಹೊರಹಾಕಿದ್ದಾರೆ. ನಟ ದರ್ಶನ್​ ತಮ್ಮ ಬಿಡುವಿಲ್ಲದ ಶೂಟಿಂಗ್​ ಸಮಯದ ಮಧ್ಯೆ ಮಕ್ಕಳ ಆಸೆಯನ್ನು ಹೇಗೆ ಈಡೇರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.  ‘ನಾನೂ ಡಬ್​ ಮಾಡುತ್ತಿದ್ದೆ’

ಈ ಮಧ್ಯೆ ಚಿತ್ರಕ್ಕೆ ಮತ್ತೊಂದು ಅಚ್ಚರಿ ಸಂಗತಿ ಎದುರಾಗಿದೆ. ಚಿತ್ರದ ಟ್ರೈಲರ್​ ನೋಡಿ ಮೆಚ್ಚಿಕೊಂಡಿದ್ದ ಹ್ಯಾಟ್ರಿಕ್​ ಹೀರೊ ಶಿವರಾಜ್​ ಕುಮಾರ್​ ಚಿತ್ರ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
“ತೆಲುಗು, ತಮಿಳು ಚಿತ್ರರಂಗಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುತ್ತವೆ. ಕನ್ನಡದ ಈ ಪ್ರಯತ್ನ ಮೆಚ್ಚುವಂತಹದ್ದು, ಇಂತಹ ಪ್ರಯತ್ನಗಳು ಹೆಚ್ಚಾಗಲಿ. ಚಿತ್ರಕ್ಕೆ ಡಬ್​ ಮಾಡುವಂತೆ ನನಗೆ ಕೇಳಿದ್ದರೆ ಖಂಡಿತ ಮಾಡುತ್ತಿದ್ದೆ”, ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ತಮ್ಮ ಜೊತೆ ಸಿನಿಮಾ ನೋಡಬೇಕು ಎಂದು ಆಸೆ ಪಟ್ಟಿರುವ ಮಕ್ಕಳನ್ನು ರಾಕಿಸ್ಟಾರ್​ ಯಶ್​ ಮತ್ತು ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಈಡೇರಿಸುತ್ತಾರಾ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸುವ ಈ ಚಿತ್ರವು ಓಂಕಾರ್ ಮೂವೀಸ್ ಬ್ಯಾನರ್ ನಡಿ ನಿರ್ಮಾಣವಾಗಿದೆ. ಚಿತ್ರಕ್ಕೆ ಎನ್ ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸೂರಜ್ ಚೌಧರಿ ಮತ್ತು ನರೇನ್ ಚಂದ್ರ ಚೌಧರಿಯು ಸಹ ನಿರ್ಮಾಪಕರಾಗಿದ್ದಾರೆ.

ಪ್ರಮೋದ್ ಮರವಂತೆ, ಕಿನ್ನಲ್ ರಾಜ್, ಸಂದೀಪ್ ಶಿರಸಿ, ಸುಚನ್ ಶೆಟ್ಟಿ ಮತ್ತು ಮಂಜುನಾಥ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಅಶ್ಲೇಷ್ ರಾಜ್, ಶ್ಲಾಘಾ ಸಾಲಿಗ್ರಾಮಾ, ಆರಾಧ್ಯ ಶೆಟ್ಟಿ, ತನಿಶಾ ಕೋನಿ, ಜಯೇಂದ್ರ, ನಾಗರಾಜ್ ಜಪ್ತಿ, ಆದಿತ್ಯ ಕುಂದಾಪುರ ಮತ್ತು ಸಿಂಚನಾ ಕೋಟೇಶ್ವರ ಮೊದಲಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಅವರ ತಂಡ ಭಿನ್ನ ಪ್ರಯತ್ನದ ಮೂಲಕ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನ್ನು ತಯಾರಿಸಿದ್ದಾರೆ.  ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಏಕಕಲಾದಲ್ಲಿ ನವೆಂಬರ್​ 8 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights