ದೋಸ್ತಿ ನಾಯಕರು ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ – ಯತ್ನಾಳ ಗರಂ

ರಾಜ್ಯ ಖಜಾನೆ ಖಾಲಿಯಾಗಿದೆ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಮಾತನಾಡಿದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಂದ ರಾಜ್ಯ ಖಜಾನೆ ಖಾಲಿಯಾಗಿಲ್ಲ. ಹಿಂದಿನವರು ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ. ರೂ‌ 54 ಸಾವಿರ ಕೋಟಿ ಸಾಲ ಮನ್ನಾ ಅಂತಾ ಮಾಡಿ ಎಚ್. ಡಿ. ಕುಮಾರಸ್ವಾಮಿ ಓಡಿ ಹೋಗಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ ಹೇಳ್ತಾರೆ ದಿವಾಳಿ ಆಗಿದೆ ಅಂತಾ. ಅವರೆಲ್ಲ 6 ವರ್ಷ ಸೇರಿ ದಿವಾಳಿ ಮಾಡಿದ್ದಾರೆ. ಯಡಿಯೂರಪ್ಪ ಜಾದು ಮಂತ್ರ ಮಾಡಲು ಬರಲ್ಲ ಎಂದು ದೋಸ್ತಿಗಳ ವಿರುದ್ಧ ಯತ್ನಾಳ್ ಕೆಂಡ ಕಾರಿದ್ದಾರೆ.

ಇದರ ಜೊತೆಗೆ ಮತ್ತೆ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ ಯತ್ನಾಳ. ಕೇಂದ್ರಅಧಿಕಾರಿಗಳ ವರದಿಗಾಗಿ ಕಾಯದೇ ಕೂಡಲೇ ಪ್ರವಾಹ ಪೀಡಿತರಿಗೆ ಮಧ್ಯಂತರ ಪರಿಹಾರ ನೀಡಬೇಕು.

ನಿನ್ನೆ ತಾವು ಎಚ್ಚರಿಸಿದ ಬಳಿಕ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸದಾನಂದಗೌಡ ಬೆಂಗಳೂರಿಗೆ ತೆರಳಿದ್ದಾರೆ. ಕೇಂದ್ರ ಸರಕಾರ ತಕ್ಷಣ ರೂ.5000 ಕೋ. ಮಧ್ಯಂತರ ಪರಿಹಾರ ನೀಡಲಿ. ಪ್ರವಾಹ ಪರಿಹಾರ ವರದಿಯ ಬಗ್ಗೆ ಕೇಂದ್ರದ ತಂಡ ವ್ಯಕ್ತಪಡಿಸಿರುವ ಆಕ್ಷೇಪದ ಬಗ್ಗೆ ನಂತರ ನಿರ್ಧರಿಸಿ, ಅಧಿಕಾರಿಗಳು ನಂತರ ಈ ಬಗ್ಗೆ ಚರ್ಚೆ ನಡೆಸಲಿ.

ಪ್ರಧಾನಿಗೆ ರಾಜ್ಯದ ಪ್ರವಾಹ ಸಂತ್ರಸ್ಥರ ಸಮಸ್ಯೆಯ ಗಂಭೀರತೆ ಅರ್ಥವಾಗಿದೆ. ಕೇಂದ್ರ ಗೃಹ ಮತ್ತು ಹಣಕಾಸು ಸಚಿವರು ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ತಮ್ಮ ಕಾರಿನಿಂದ ಇಳಿದು ಬಡ ಮಹಿಳೆಯ ಕಣ್ಣೀರು ಆಲಿಸಿದ್ದಾರೆ.

ಆದರೂ ಅಧಿಕಾರಿಗಳ ಮಾತನ್ನು ನಂಬಿ ಹಣ ಬಿಡುಗಡೆ ಮಾಡಿಲ್ಲ. ತಕ್ಷಣ ಮಧ್ಯಂತರ ಪರಿಹಾರ ನೀಡಲಿ. ನಂತರ ಸಂಪೂರ್ಣ ವರದಿ ಬಂದ ಬಳಿಕ ಪೂರ್ಣ ಪರಿಹಾರ ನೀಡಲಿ. ಒಂದೆರಡು ದಿನದಲ್ಲಿ‌ ಕೇಂದ್ರ ಪರಿಹಾರ ಬಿಡುಗಡೆ ಮಾಡಲಿದೆ. ಪ್ರಧಾನಿಗಳು ಕನ್ನಡಿಗಿಗೆ ಅವಮಾನ‌ ಮಾಡುವುದಿಲ್ಲ ಎಂಬ ನಂಬಿಕೆಯಿದೆ. ರಾಜ್ಯದ ವರದಿ ತಿರಸ್ಕಾರವಾಗಿದೆಯೋ, ಸುಡುಗಾಡಾಗಿದೆಯೋ ಅದಯ ಬೇರೆ ಮಾತು ಎಂದಿದ್ದಾರೆ.

ಕೇಂದ್ರ ಸರಕಾರ ಸರಿಯಾಗಿ ಸ್ಪಂದಿಸಿಲ್ಲ ಎಂಬ ಭಾವನೆಯಿಂದ ಸಿಎಂ‌ ಆ ರೀತಿ ಹೇಳಿದ್ದಾರೆ. ಕೆಲವು ಜನರು ಈ ವಿಷಯದಲ್ಲಿ ಹಸಿರು ಟಾವೆಲ್ ಹಾಕಿಕೊಂಡು ರಾಷ್ಟ್ರ ನಾಯಕರಂತೆ ಫೋಜು ಕೊಡುತ್ತಿದ್ದಾರೆ. ರಾಜ್ಯ ಸರಕಾರದ ಬಳಿ ಹಣವಿದೆ. ಪ್ರವಾಹ ಪರಿಹಾರ ನೀಡುವಂತೆ ಪ್ರಧಾನಿ ಭೇಟಿಗೆ ಅವಕಾಶ ಕೋರಿ‌ ಇಂದು ಪತ್ರ ಬರೆಯುತ್ತೇನೆ ಎಂದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights