ನನ್ನ ಧ್ವನಿಯನ್ನು ಹತ್ತಿಕ್ಕಲಾಗದು – ಮೋದಿಗೆ ಕನ್ಹಯ್ಯ ಕುಮಾರ್ ಸವಾಲು

ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ಹಯ್ಯ ಕುಮಾರ್ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆ.ಎನ್.ಯು. ಮಾಜಿ ವಿದ್ಯಾರ್ಥಿ ಮುಖಂಡ, ಸಿಪಿಐ ನಾಯಕ ಕನ್ಹಯ್ಯ ಕುಮಾರ್, ನಮ್ಮ ಧ್ವನಿಯನ್ನು ಹೇಗಾದರೂ ಮಾಡಿ ಹತ್ತಿಕ್ಕಬೇಕೆನ್ನೋದು ಮೂರ್ಖತನದ್ದು ಎಂದಿದ್ದಾರೆ. ಪ್ರಧಾನಿ ಮೋದಿ ವಿದೇಶಗಳಿಗೆ ತೆರಳಿದರೆ ಬುದ್ಧನ ಹೆಸರು ಪ್ರಸ್ತಾಪಿಸಿ ಶಾಂತಿ ಮಂತ್ರ ಜಪಿಸುತ್ತಾರೆ, ಸ್ವದೇಶಕ್ಕೆ ಬಂದರೆ ಯುದ್ಧದ ಮಾತನಾಡುತ್ತಾರೆ. ಮೋದಿ ಹೇಳೋದು ಒಂದು ರೀತಿ, ಮಾಡೋದು ಇನ್ನೊಂದು ರೀತಿ, ನಡೆದುಕೊಳ್ಳೋದು ಮಗದೊಂದು ರೀತಿ ಎಂದು ಲೇವಡಿ ಮಾಡಿದ್ದಾರೆ.

ಜೆ.ಎನ್.ಯು. ಮಾಜಿ ವಿದ್ಯಾರ್ಥಿ ನಾಯಕ, ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಕಲಬುರ್ಗಿ ಭೇಟಿ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರವೇ ಕನ್ಹಯ್ಯ ಕುಮಾರ್ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸುವ ಮೂಲಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಅಂಬೇಡ್ಕರ್ ಭವನದಲ್ಲಿ ಕನ್ಹಯ್ಯ ಕುಮಾರ್ ಉಪನ್ಯಾಸ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪರಿಮಣ ಅಂಬೇಕರ್ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದರು. ಆದರೆ ರಾಜ್ಯ ಸರ್ಕಾರದ ಮೌಖಿಕ ಆದೇಶದ ಮೇರೆಗೆ ಕಾರ್ಯಕ್ರಮಕ್ಕೆ ನೀಡಿದ ಅನುಮತಿಯನ್ನು ರಾತ್ರೋರಾತ್ರಿ ವಾಪಸ್ ಪಡೆಯಲಾಗಿದೆ. ಜೊತೆಗೆ ವಿಶ್ವೇಶ್ವರಯ್ಯ ಭವನದಲ್ಲಿ ಅದನ್ನು ಸ್ಥಳಾಂತರಿಸಲೂ ಅನುಮತಿ ನಿರಾಕರಿಸಲಾಗಿದೆ. ವಿಶ್ವವಿದ್ಯಾಲಯದಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದಕ್ಕೆ ಕನ್ಹಯ್ಯ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ನನ್ನ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ಯಾಕೆ ಈ ರೀತಿಯ ಸಮಸ್ಯೆ ಸೃಷ್ಟಿಸುತ್ತಿದ್ದಾರೋ ಗೊತ್ತಿಲ್ಲ. ಸಾರ್ವಜನಿಕ ಹಣದಿಂದ ನಡೆಯುವ ವಿಶ್ವವಿದ್ಯಾಲಯದಲ್ಲಿ ಬೇರೆ ಯಾವುದೇ ಪಕ್ಷದ ನಾಯಕರು ಮಾತನಾಡೋದಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ಹೀಗಿರಬೇಕಾದರೆ ನನಗೇಕೆ ಅನುಮತಿ ನಿರಾಕರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ. ಹಾಗೂ ಒಂದು ವೇಳೆ ಮಾತನಾಡೋದನ್ನು ನಿಲ್ಲಿಸದೇ ಇದ್ದಲ್ಲಿ ಎಂ.ಎಂ.ಕಲಬುರ್ಗಿ ರೀತಿಯಲ್ಲಿ ಹತ್ಯೆ ಮಾಡುವ ಮೂಲಕ ಸಂಪೂರ್ಣವಾಗಿ ಧ್ವನಿ ಹತ್ತಿಕ್ಕುವ ಕಾರ್ಯ ನಡೆಯಲಿದೆ ಎಂದಿದ್ದಾರೆ.

ಸಿಬಿಐ ಮತ್ತು ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರನ್ನು ಬಗ್ಗುಬಡಿಯಲು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕನ್ಹಯ್ಯ ಕುಮಾರ್ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ. ನಿರಾಧಾರ ಆರೋಪ ಹೊರಿಸೋದು, ಹೆದರಿಸೋದು ಸರಿಯಾದ ಕ್ರಮವಲ್ಲ. ಆಧಾರಗಳಿದ್ದರೆ ಬಂಧಿಸಿ, ನ್ಯಾಯಾಲಯದಲ್ಲಿ ವಿಚಾರಣೆಯಾಗಲಿ. ಅದನ್ನು ಬಿಟ್ಟು ವಿರೋಧಿಗಳನ್ನು ತೇಜೋವಧೆ ಮಾಡುವ ಒಂದಂಶ ಕಾರ್ಯಕ್ರಮ ಸರಿಯಲ್ಲ. ಪ್ರಧಾನಿ ಮೋದಿ ಇಡೀ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಕ್ಕಕ್ಕೆ ಸರಿಸಿ, ಪೊಲೀಸ್ ವ್ಯವಸ್ಥೆಯನ್ನು ಜಾರಿಗೆತರಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ವಿದೇಶಗಳಿಗೆ ತೆರಳಿದಾಗ ಬುದ್ಧನ ಹೆಸರು ಪ್ರಸ್ತಾಪಿಸಿ ಶಾಂತಿಯ ಮಾತಗಳನ್ನಾಡುತ್ತಾರೆ. ಆದರೆ ಸ್ವದೇಶಕ್ಕೆ ವಾಪಸ್ಸಾದ ನಂತರ ಯುದ್ಧದ ಮಾತನಾಡೋದು ಸರಿಯಲ್ಲ. ದೇಶದ ಭದ್ರತೆ ವಿಷಯದಲ್ಲಿ ಯಾರೂ ಮಾತನಾಡೋದಿಲ್ಲ. ಆದರೆ ಯುದ್ಧೋನ್ಮಾದದ ಮಾತುಗಳು ಸರಿಯಾದವಲ್ಲ. ಪ್ರಧಾನಿ ಮೋದಿ ಇರೋದೆ ಒಂದು ರೀತಿ, ಹೇಳೋದೆ ಒಂದು ರೀತಿ, ನಡೆದುಕೊಳ್ಳೋದೆ ಒಂದು ರೀತಿ ಎಂದು ಕನ್ಹಯ್ಯಕುಮಾರ್ ಲೇವಡಿ ಮಾಡಿದರು.
ಪೂರ್ವನಿಗದಿಯಂತೆ ಅಂಬೇಡ್ಕರ್ ಕಾಲೇಜಿನ ಆವರಣದಲ್ಲಿ ಮಾತ್ರ ಕನ್ಹಯ್ಯ ಕುಮಾರ್ ಭಾಷಣಕ್ಕೆ ಅನುಮತಿ ನೀಡಲಾಗಿದೆ. ಸರ್ಕಾರದ ಧೋರಣೆಗೆ ಎಡ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು, ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights