ಬಿಜೆಪಿ, ಜೆಡಿಎಸ್, ಅನರ್ಹರಿಗೂ ಟಾರ್ಗೆಟ್ ನಾನೇ – ಸಿದ್ದರಾಮಯ್ಯ ಗರಂ

ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು.. ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾವತ್ತು ನಮ್ಮ ಜೊತೆ ಇಲ್ಲ. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಯಾವತ್ತು ಕೇಂದ್ರ ನಮ್ಮ‌ ಜೊತೆ ಬಂದಿಲ್ಲ. ಕಳಸಾ ಬಂಡೂರಿ ವಿಚಾರದಲ್ಲಿ ನಾನು ನಿಯೋಗ ಕರೆದುಕೊಂಡು ಹೋಗಿದ್ದೆ. ನೀವು ಮಧ್ಯಪ್ರವೇಶ ಮಾಡಿ ಅಂತ ಮನವಿ ಮಾಡಿದ್ದೆ. ಒಂದೆ ಒಂದು ಮಾತು ಸಹ ಆಡಲಿಲ್ಲ. ಈಗಲೂ ಕೇಂದ್ರ ನಮ್ಮ ಪರ ಇಲ್ಲ ಎಂದಿದ್ದಾರೆ.

ಇದೇ ವೇಳೆ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,  ಶ್ರೀರಾಮುಲು ವೆರಿ ವೆರಿ ವೆರಿ ಪಾಪ್ಯಲರ್ ಲೀಡರ್. ನಾನು ಅಷ್ಟು ಪಾಪ್ಯಲರ್ ಅಲ್ಲ. ಅವರು ಯಾರ ಮೇಲಾದರೂ ತೊಡೆ ತಟ್ಟುತ್ತಾರೆ ನಮಗೆ ಆ ರೀತಿ ತಟ್ಟಲು ಸಾಧ್ಯವಿಲ್ಲ. ಅಷ್ಟು ಪಾಪುಲರ್ ಲಿಡರ್ ಜೊತೆ ಸ್ಪರ್ಧೆ ಮಾಡಲು ಆಗೋಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಚಿವ ಮಾಧುಸ್ವಾಮಿ ಸಮುದಾಯದ ವಿರುದ್ದ ಹೇಳಿಕೆ ವಿಚಾರ ಮಾತನಾಡಿ, ಎಲ್ಲರಿಗೂ ಒಂದು ಸಂಸ್ಕೃತಿ ಇರಬೇಕು. ಬಿಜೆಪಿಯ ಯಾವ ನಾಯಕರಿಗೂ ಒಳ್ಳೆಯ ಸಂಸ್ಕೃತಿ ಇಲ್ಲ. ಅವರದು ಪ್ಯಾಸಿಸಿಸ್ಟ್ ಪಕ್ಷ. ನೈಜ ಮಾತುಗಳನ್ನು ಆಡಲ್ಲ. ಸುಳ್ಳನ್ನೇ ಪ್ರಸಾರ ಮಾಡೋದು ಅವರ ಕೆಲಸ. ಸತ್ಯ ಸುಳ್ಳು ಮಾಡೋಡು ಸುಳ್ಳನ್ನು ಸತ್ಯ ಮಾಡೋದು ಅವರು. ಇದು ಹಿಟ್ಲರ್ ಮನಸ್ಥಿತಿ ಎಂದಿದ್ದಾರೆ.

ಉಪಚುನಾವಣೆಯಲ್ಲಿ ಅನರ್ಹರು ಸೋಲುವ ಕಡೆ ಕಾಂಗ್ರೆಸ್‌ಗೆ ಬೆಂಬಲ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಉದ್ದೇಶವು ಅನರ್ಹರು ಸೋಲಬೇಕು ಎಂಬುವುದು. ಇಬ್ಬರ ಉದ್ದೇಶ ಒಂದೆ. ಸಮ್ಮಿಶ್ರ ಸರ್ಕಾರ ಬೀಳಲು ಇವರೇ ಕಾರಣ. ಅದಕ್ಕಾಗಿ ಅವರು ಸೋಲಬೇಕು. ಈ ಮೂಲಕ ರಾಜ್ಯಾದ್ಯಂತ ಒಂದು ಸಂದೇಶ ರವಾನೆಯಾಗಬೇಕು. ಪಕ್ಷಾಂತರಿಗಳ ವಿರೋಧಿ ಸಂದೇಶ ರವಾನೆಯಾಗಬೇಕು. ಈ ವಿಚಾರವಾಗಿ ಕಾಂಗ್ರೆಸ್ ಜೆಡಿಎಸ್ ಇಬ್ಬರ ಉದ್ದೇಶ ಒಂದೇ. ಆದರೆ ಅವರ ದಾರಿ ನಮ್ಮ ದಾರಿ ಒಂದಲ್ಲ ಎಂದು ಅನರ್ಹರ ವಿರುದ್ಧ ಕಿಡಿ ಕಾರಿದ್ದಾರೆ.

ಉಪಚುನಾವಣೆ ಗಲಾಟೆಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ಥರನ್ನು ಮರೆತಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಯಾವ ಜಿಲ್ಲಾ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇಲ್ಲ. ರಾಜ್ಯ ಸರ್ಕಾರಕ್ಕೂ ಜವಾಬ್ದಾರಿ ಇಲ್ಲ. ಯಡಿಯೂರಪ್ಪ ಹಣ ತರಲು ವಿಫಲರಾಗಿದ್ದಾರೆ. ಪ್ರಧಾನಿ ಕರ್ನಾಟಕದ ಕಡೆ ತಿರುಗಿ ನೋಡಿಲ್ಲ. ಇವರು ಜನ ವಿರೋಧಿ ಪ್ರಧಾನಿ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿಯವರಿಗೆ ಟಾರ್ಗೆಟ್ ನಾನೇ. ಜೆಡಿಎಸ್ ಅವರ ಟಾರ್ಗೆಟ್ ನಾನೇ. ಅನರ್ಹರ ಟಾರ್ಗೆಟ್ ಸಹಾ ನಾನೇ. ಇದನ್ನು ನೋಡಿದರೆ ಅವರಿಗೆಲ್ಲಾ ನನ್ನ ಮೇಲೆ ಭಯ ಇರಬೇಕು. ಅವರೆಲ್ಲಾ ಹತಾಶರಾಗಿದ್ದಾರೆ.  ಅದಕ್ಕಾಗಿ ನನ್ನನ್ನ ಟಾರ್ಗೆಟ್ ಮಾಡ್ತಾರೆ. ನಾನು ಕಾಂಗ್ರೆಸ್‌ನಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಪಕ್ಷ ಯಾವತ್ತು ಯಾರನ್ನು ಏಕಾಂಗಿ ಮಾಡಲ್ಲ. ಯಡಿಯೂರಪ್ಪರಿಗೆ ನಾನು ಏಕಾಂಗಿ ಆಗಬೇಕು ಅನಿಸಿರಬಹುದು. ಆದರೆ ಅವರ ಆಸೆ ಈಡೇರುವುದಿಲ್ಲ.

ಇಂದಿನಿಂದ ನಾನು ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ. ನಾವು 15 ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆ. 12 ಕ್ಷೇತ್ರ ನಮ್ಮ ಪಕ್ಷದವರೇ ಇದ್ದರು. ಅವರು ಪಕ್ಷಕ್ಕೆ ದ್ರೋಹ ಮಾಡಿ ಹೋದರು. ಮಹಾರಾಷ್ಟ್ರ ಹರಿಯಾಣದಲ್ಲಿ ಪಕ್ಷಾಂತರಿಗಳಿಗೆ ಪಾಠ ಕಲಿಸಿದ್ದಾರೆ. ಇಲ್ಲೂ ಪಕ್ಷಾಂತರ ಸಹಿಸಲ್ಲ ಜನ ಅವರನ್ನು ಸೋಲಿಸುತ್ತಾರೆ. ಅವರೆಲ್ಲಾ ಅನರ್ಹ ಶಾಸಕ ಹಣೆಪಟ್ಟಿ ಹೊತ್ತಿದ್ದಾರೆ. ಅವರು ಅನರ್ಹರೇ ಇದು ನಾನು ಹೇಳಿದ್ದಲ್ಲ. ಸುಪ್ರೀಂಕೋರ್ಟ್ ಹೇಳಿದೆ ಅವರು ಅನರ್ಹರು ಅಂತಾ. ಸುಪ್ರೀಂಕೋರ್ಟ್ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. ಅನರ್ಹರನ್ನು ರಾಜ್ಯದ ಜನ ಸೋಲಿಸುತ್ತಾರೆ. ಲೋಕಸಭೆ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಪಕ್ಷಾಂತರ ಮಾಡಿರಲಿಲ್ಲ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights