ಮಾಜಿ ಸಿಎಂಗಳ ನಡುವೆ ಟ್ವೀಟ್ ವಾರ್ : ಯಾರು ಹದ್ದು? ಯಾರು ಗಿಳಿ?

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದು-ಎಚ್.ಡಿ.ಕೆ ನಡುವೆ ಗಲಾಟೆ ಜೋರಾಗಿದೆ. ಉಪಚುನಾವಣೆ ದಿನಾಂಕ ನಿಗಧಿಯಾದ ಕೂಡಲೇ ಇವರಿಬ್ಬರ ಜಗಳ ತಾರಕಕ್ಕೇರಿದ್ದು ಮೈತ್ರಿ ಮುಗಿದ ಮಾತು ಎಂಬುದನ್ನು ತೋರಿಸುತ್ತಿದೆ.

ಇದು ನಿನ್ನೆ ಕುಮಾರಸ್ವಾಮಿಯವರು ಬೆಂಗಳೂರಿನಲ್ಲಿ ಪತ್ರಕರ್ತರೊಡನೆ ಮಾತನಾಡುತ್ತಾ ಕೊಟ್ಟ ಹೇಳಿಕೆಗಳಿಂದ ಆರಂಭವಾಯಿತು. “ಮಂಡ್ಯ, ತುಮಕೂರು ಮತ್ತು ಕೋಲಾರದಲ್ಲಿನ ಮೈತ್ರಿ ಅಭ್ಯರ್ಥಿಗಳ ಸೋಲಿಗೆ ಸಿದ್ದರಾಮಯ್ಯನವರು ಸಾಕಿದ್ದ ಮುದ್ದಿನ ಗಿಳಿಗಳು ಕುಕ್ಕಿದ್ದೇ ಕಾರಣ” ಎಂದು ಎಚ್.ಡಿ.ಕೆ ಹೇಳಿಕೆ ನೀಡಿದ್ದರು.

ಮುಂದುವರೆದು ಮೈಸೂರಿನಲ್ಲಿ ಸಿದ್ದರಾಮಯ್ಯನವರ ಸ್ವಯಂಕೃತ ಅಪರಾಧದಿಂದ ಸೋಲಾಗಿದೆ ಅಷ್ಟೇ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ನಾನು ಶಕ್ತಿಮೀರಿ ಕೆಲಸ ಮಾಡಿದ್ದೆವು ಆದರೂ ಸಿದ್ದರಾಮಯ್ಯನವರು ಹೊಸಕೋಟೆಯಲ್ಲಿ ಮಾತನಾಡುತ್ತಾ ಮಂಡ್ಯದಲ್ಲಿ ಸ್ವಾಭಿಮಾನಕ್ಕೆ ಗೆಲುವಾಗಿದೆ ಎಂದು ಹೇಳುವ ಮೂಲಕ ನಮ್ಮನ್ನು ಸೋಲಿಸಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ಎಚ್.ಡಿ.ಕೆ ಕಿಡಿ ಕಾರಿದ್ದರು.

ಇದಕ್ಕೆ ಇಂದು ಟ್ವಿಟ್ಟರ್ ನಲ್ಲಿ ಉತ್ತರ ನೀಡಿದ್ದ ಸಿದ್ದರಾಮಯ್ಯನವರು, ಹೌದು ಕುಮಾರಸ್ವಾಮಿಯವರೆ, ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪು, ನಾಲ್ಕು ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಮತ್ತೆ ತಿರುಗೇಟು ನೀಡಿದ ಎಚ್.ಡಿ ಕುಮಾರಸ್ವಾಮಿಯವರು ಸಿದ್ದರಾಮಯ್ಯನವರು ಸಾಕಿದ ಗಿಳಿಯಲ್ಲ ನಾನು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಗಿಣಿಯೆಂದು ತಪ್ಪು ತಿಳಿದು ಹದ್ದನ್ನು ಅಪ್ಪಿಕೊಂಡಿದ್ದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಸಾವಿರ ಗಿಣಿಗಳನ್ನು ಬೆಳೆಸಿದ್ದೇ ದೇವೇಗೌಡರು. ಅವರಿಗೇ ಆ ಗಿಣಿಗಳು ಹೇಗೆ ಕುಕ್ಕುತ್ತಿವೆ ಎಂದು ನೋಡುತ್ತಿದ್ದೇನೆ.. ಸಿದ್ದರಾಮಯ್ಯನವರು ಸಹ ಕುಕ್ಕುತ್ತಿದ್ದಾರೆ.

ಸಿದ್ದರಾಮಯ್ಯನವರಿಂದ ನಾನು ಮುಖ್ಯಮಂತ್ರಿ ಆಗಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಮುಖ್ಯಮಂತ್ರಿ ಆಗಿದ್ದೆ. ನಾನು ಮುಖ್ಯಮಂತ್ರಿ ಆದುದ್ದನ್ನು ಸಿದ್ದರಾಮಯ್ಯನವರು ಸಹಿಸಿಕೊಳ್ಳಲ್ಲಿಲ್ಲ. ನನ್ನನ್ನು ರಾಮನಗರದ ಜನ ಸಾಕಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ಕೂಡಲೇ ಈ ಸರ್ಕಾರ ಬೀಳುತ್ತದೆ ಎಂದು ಅವರು ಎಲ್ಲಾ ಕಡೆ ಹೇಳುತ್ತಾ ತಿರುಗಾಡುತ್ತಿದ್ದರು.

ಸಿದ್ದರಾಮಯ್ಯನವರು ಸಾಕಿದ ಗಿಳಿಯಲ್ಲ ನಾನು, ಅವರು ತಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು ಎಂದು ಎಚ್.ಡಿ.ಕೆ ಹೇಳಿದ್ದಾರೆ.

ಇದಕ್ಕೆ ಫೇಸ್ ಬುಕ್ ನಲ್ಲಿ ಸಿದ್ದರಾಮಯ್ಯನವರು ಉತ್ತರ ನೀಡಿದ್ದಾರೆ.

ಸನ್ಮಾನ್ಯ ಕುಮಾರಸ್ವಾಮಿ ಅವರೇ, ನಿಮ್ಮನ್ನು ನಾನು ಸಾಕಿದ್ದೇನೆ ಎಂದು ಎಲ್ಲಿ ಹೇಳಿದ್ದೆ? ನಿಮ್ಮನ್ನು ಸಾಕಿದ್ದು ದೇವೇಗೌಡರು, ಬಳಸಿಕೊಂಡದ್ದು ಮಾತ್ರ ನಮ್ಮಂತಹವರನ್ನು. ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ. ಈ ಬಗ್ಗೆ ಯಡಿಯೂರಪ್ಪ ಅವರನ್ನು ಕೇಳಿ, ಹೇಳ್ತಾರೆ.

ಕುಮಾರಸ್ವಾಮಿ ಅವರೇ, ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ. ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ‌ ನೀವು, ನಿಮ್ಮ ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲೂ ಎಂದಾದರೂ ಸಾಧ್ಯವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಸಿದ್ದರಾಮಯ್ಯನವರು, “ಕುಮಾರಸ್ವಾಮಿಯವರು ಪ್ರಜ್ಞೆ ಇಟ್ಟುಕೊಂಡು ಮಾತಾಡುತ್ತಾರೆ ಅನ್ನಿಸುತ್ತಿಲ್ಲ. ಜಿ.ಟಿ ದೇವೇಗೌಡ ಯಾವ ಪಾರ್ಟಿ? ಅವರೇ ಮೈಸೂರಿನಲ್ಲಿ, ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಗೆ ಓಟು ಹಾಕಿ ಎಂದು ಕುಮಾರಸ್ವಾಮಿಯವರೆ ಹೇಳಿದ್ದಾರೆ ಎಂದಿದ್ದರು. ಇದರ ಏನರ್ಥ” ಎಂದು ಟೀಕಿಸಿದ್ದಾರೆ.

ಒಟ್ಟಿನಲ್ಲಿ ಇವರಿಬ್ಬರ ನಡುವೆ ನಡೆಯುತ್ತಿರು ವಾದ-ಪ್ರತಿವಾದಗಳು ಎಲ್ಲಿಗೆ ಮುಟ್ಟುತ್ತವೆ ಎಂದು ತಿಳಿಯುತ್ತಿಲ್ಲ. ಆದರೆ ಉಪಚುನಾವಣೆಯಲ್ಲಿ ಮೈತ್ರಿ ಸಾಧ್ಯವಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights