ಮೋದಿ ನಿರ್ಧಾರ: ಅಡಿಕೆ ಬೆಳೆಗಾರರಿಗೆ ಸುಸೈಡ್​ ನೋಟ್​..!

ಪ್ರಧಾನಮಂತ್ರಿ ನರೇಂದ್ರ ಮೋದಿ ತೆಗೆದುಕೊಂಡ ನೋಟ್​ ಬ್ಯಾನ್​ ಹಾಗೂ ಜಿಎಸ್​ಟಿಯಂಥಾ ಕೆಲ ನಿರ್ಣಯಗಳು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ.. ಆಟೋಮೊಬೈಲ್​ ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಟೆಕ್ಸ್​ಟೈಲ್​ ಇಂಡಸ್ಟ್ರಿ ಸಂಪೂರ್ಣ ನೆಲಕಚ್ಚಿದೆ.. ಸಿಮೆಂಟ್​ ಇಂಡಸ್ಟ್ರಿ, ಸ್ಟೀಲ್​ ಇಂಡಸ್ಟ್ರಿ, ಪೆಟ್ರೋಲಿಯಂ ಇಂಡಸ್ಟ್ರಿ, ಫುಡ್​ ಅಂಡ್​ ಸಾಫ್ಟ್​ವೇರ್​ ಇಂಡಸ್ಟ್ರಿ ಹೀಗೆ ಎಲ್ಲವೂ ನಷ್ಟದ ದಾರಿ ಹಿಡಿದಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಜಾಬ್​ ಕಟಿಂಗ್​ ಆಗುತ್ತಿದೆ. ಮಾಧ್ಯಮ ಕ್ಷೇತ್ರವಂತೂ ಸಂಪೂರ್ಣ ನರಳಿ ಹೋಗಿದೆ. ಇವಿಷ್ಟೇ ಅಲ್ಲ, ಮೋದಿಯ ನಿರ್ಣಯಗಳಿಂದ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಲ್ಲೇ ವಿಜ್ಞಾನಿಗಳ ಸಂಬಳಕ್ಕೆ ಕೊಕ್ಕೆ ಬಿದ್ದಿದೆ. ಹೆಚ್​ಎಎಲ್​ನಂತಾ ಸಂಸ್ಥೆಗಳಲ್ಲಿ ಕಳೆದ ಮೂರು ವರ್ಷಗಳಿಂದ ಸಂಬಳ ಹೆಚ್ಚಳ ಮಾಡಿಲ್ಲ, (ಉದ್ಯೋಗಿಗಳು ಪ್ರತಿಭಟನೆ ಮಾಡಿದ್ದಾರೆ). ಹೀಗೆ ಬಿಜೆಪಿಯ ಒಂದೊಂದು ನಿರ್ಣಯಗಳು ದೇಶದ ಜನರ ತುತ್ತು ಅನ್ನಕ್ಕೆ ಕಲ್ಲು ಹಾಕುತ್ತಿವೆ.. ಎಲ್ಲವನ್ನೂ ಹಾಳು ಮಾಡಿದ ಮೋದಿ ಸರ್ಕಾರದ ಕಣ್ಣು ಈಗ ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಮೇಲೂ ಬಿದ್ದಿದೆ..

ಮೋದಿ ಸರ್ಕಾರ ಇದೇ ನವಂಬರ್​ 4ನೇ ತಾರೀಕು ಬ್ಯಾಂಕಾಕ್​ನಲ್ಲಿ RCEP (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ) ಕ್ಕೆ ಸಹಿ ಹಾಕುವ ಚಿಂತನೆಯಲ್ಲಿದೆ. ಆ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದ್ರೆ, ಮಲೆನಾಡಿನ ಅಡಿಕೆ ಬೆಳೆಗಾರರ ಬಾಯಿಗೆ ಮಣ್ಣು ಬಿದ್ದಂತೆಯೇ ಅರ್ಥ. ಯಾಕಂದ್ರೆ, ನಮ್ಮಲ್ಲಿ ಅಡಿಕೆ ಒಂದು ವಾಣಿಜ್ಯ ಬೆಳೆ. ಇಲ್ಲಿನ ರೈತರು ಬಂಡವಾಳ ಹಾಕಿ, ಬೆವರು ಸುರಿಸುತ್ತಾ ಉತ್ತಮ ಬೆಳೆಗಾಗಿ ಹತ್ತು ವರ್ಷಗಳ ಕಾಲ ಉಳುಮೆ ಮಾಡುತ್ತಾರೆ. ಆದರೆ ಚೀನಾ, ಇಂಡೋನೇಷ್ಯಾ, ಶ್ರೀಲಂಕಾ ಹಾಗೂ ಮ್ಯಾನ್ಮಾರ್​ನ ಕಾಡುಗಳಲ್ಲಿ ಅಡಿಕೆ ಹೇರಳಾಗಿ ಕಸ ಬೆಳೆದಂತೆ ಬೆಳೆದು ನಿಂತಿದೆ. ನಮ್ಮಲ್ಲಿ ಕ್ವಾಲಿಟಿ ಕ್ವಿಂಟಾಲ್​ ಅಡಿಕೆಗೆ 30 ರಿಂದ 35 ಸಾವಿರ ರೂಪಾಯಿ. ವಿದೇಶಿ ಅಡಿಕೆಗೆ ಹಿಂದಿನ ಕಾಂಗ್ರೆಸ್​ ಸರ್ಕಾರ 25,100 ರೂಪಾಯಿ ನಿಗದಿ ಮಾಡಿತ್ತು. ಈಗ ಮೋದಿ ಸರ್ಕಾರ RCEPಗೆ ಸಹಿ ಹಾಕಿದರೆ ಯಾವುದೇ ವಿದೇಶಿ ಪಾದಾರ್ಥ ಒಂದೇ ಒಂದು ರೂಪಾಯಿ ತೆರಿಗೆ ಇಲ್ಲದೇ ನೇರವಾಗಿ ಭಾರತೀಯ ಮಾರುಕಟ್ಟೆಯನ್ನ ಪ್ರವೇಶ ಮಾಡಬಹುದು. ಅಲ್ಲಿಗೆ ಕಳಪೆ ಗುಣಮಟ್ಟದ ವಿದೇಶಿ ಅಡಿಕೆ ಕೇವಲ 10 ರಿಂದ 12 ಸಾವಿರಕ್ಕೆ ಭಾರತದ ಮಾರುಕಟ್ಟೆಗೆ ಬಂದು ಬೀಳಲಿದೆ. ಅಲ್ಲಿಗೆ ಕರ್ನಾಟಕದ ಗುಣಮಟ್ಟದ ಅಡಿಕೆಯನ್ನ ಮಾರುಕಟ್ಟೆಯಲ್ಲಿ ಕೇಳುವವರೇ ಇರೋದಿಲ್ಲ..

ಕರ್ನಾಟಕದಲ್ಲಿ ಶಿವಮೊಗ್ಗದಿಂದ ತುಮಕೂರಿನವರೆಗೆ ಅಡಿಕೆ ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಬಿಜೆಪಿ ಸಂಸದರೇ ಗೆದ್ದು ಬಂದಿದ್ದಾರೆ. ಆದರೆ ಯಾರೊಬ್ಬರಿಗೂ ತಮಗೆ ಮತ ಹಾಕಿದ ಅಡಿಕೆ ಬೆಳೆಗಾರರ ಹಿತ ಕಾಯುವ ಜವಾಬ್ದಾರಿ ಇಲ್ಲ. ರೈತರು ಎದೆ ಮೇಲೆ ಬರೆದಿಟ್ಟುಕೊಳ್ಳಿ, ಅಡಿಕೆ ಬೆಳೆಗಾರರು ಸತ್ತರೂ ಆ ಯಾವೊಬ್ಬ ಸಂಸದ ಕೂಡ ಮೋದಿ ಮುಂದೆ ತುಟಿ ಬಿಚ್ಚೋದಿಲ್ಲ. ಉತ್ತರ ಕರ್ನಾಟಕ ಕೊಚ್ಚಿ ಹೋದಾಗಲೂ ಮಾತನಾಡದ 25 ಸಂಸದರು, ಅಡಿಕೆ ಬೆಳೆಗಾರ ಸತ್ತಾಗ ಮಾತನಾಡುತ್ತಾನೆ ಎನ್ನುವ ನಂಬಿಕೆ ನನಗಂತೂ ಇಲ್ಲ. ಎಲ್ಲಾ ಕನ್ನಡಿಗ ಸಂಸದರ ಜುಟ್ಟು ಜನಿವಾರಗಳು ಈಗಾಗಲೇ ಮಾರ್ವಾಡಿಗಳ ಹಿಡಿತದಲ್ಲಿವೆ. ಖುದ್ದು ಅಡಿಕೆ ತೋಟದ ಮಾಲೀಕರಾಗುತ್ತಿರುವ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ವಿಚಾರದಲ್ಲಿ ಹೆಲ್ಪ್​ಲೆಸ್​.

ಸ್ನೇಹಿತರೇ, ದೇಶದ ಅಡಿಕೆಯಲ್ಲಿ ಕರ್ನಾಟಕದ ಪಾಲು ಶೇಕಡಾ 60ರಷ್ಟು. ನಮ್ಮ ಮಲೆನಾಡಿನಲ್ಲಿ ಬೆಳೆಯುವಂತಾ ಗುಣಮಟ್ಟದ ಅಡಿಕೆ ಜಗತ್ತಿನ ಯಾವ ಮೂಲೆಯಲ್ಲೂ ಬೆಳೆಯಲು ಸಾಧ್ಯವಿಲ್ಲ. ರಾಜ್ಯವೊಂದರಲ್ಲೇ ವರ್ಷಕ್ಕೆ 4 ಲಕ್ಷ ಟನ್​ಗೂ ಅಧಿಕ ಅಡಿಕೆ ಉತ್ಪಾದನೆಯಾಗುತ್ತೆ. ಕೇರಳದಲ್ಲಿ 30 ರಿಂದ 40 ಸಾವಿರ ಟನ್​, ಗೋವಾದಲ್ಲಿ 6 ಸಾವಿರ ಟನ್​, ಅಸ್ಸಾಂನಲ್ಲಿ 25 ಸಾವಿರ ಟನ್​, ಮಹಾರಾಷ್ಟ್ರದಲ್ಲಿ 3 ರಿಂದ 4 ಸಾವಿರ ಟನ್​ ಅಡಿಕೆ ಉತ್ಪಾದನೆಯಾಗುತ್ತೆ. ಕರ್ನಾಟಕದ ಮಟ್ಟಿಗೆ ಶಿವಮೊಗ್ಗ, ಉತ್ತರ ಕನ್ನಡ, ಹಾಗೂ ದಾವಣಗೆರೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಡಿಮೆ ಬೆಳೆಯಲಾಗುತ್ತೆ. ಉಳಿದಂತೆ ಉಡುಪಿ, ಚಿಕ್ಕಮಗಳೂರು, ತುಮಕೂರು ಹಾಗೂ ದಕ್ಷಿಣ ಕನ್ನಡದಲ್ಲೂ ಅಡಿಕೆ ಬೆಳೆಗಾರರು ಇದ್ದಾರೆ. ಕಳೆದ ಕೆಲ ವರ್ಷಗಳಿಂದ ಅಡಿಕೆ ಬೆಳೆಗಾರರನ್ನ ಶ್ರೀಮಂತ ರೈತರು ಎಂದೇ ಬಿಂಬಿಸಲಾಗಿತ್ತು. ಆದರೆ ಆ ಶ್ರೀಮಂತಿಕೆ ಹೆಚ್ಚು ದಿನ ಉಳಿಯೋಲ್ಲ. ಯಾಕಂದ್ರೆ ಮೋದಿ ಕಣ್ಣು ಅಡಿಕೆ ಬೆಳೆಗಾರನ ಮೇಲೆ ಬಿದ್ದಿದೆ. ವಿದೇಶಗಳನ್ನ ಮೆಚ್ಚಿಸಲು ಹೊರಟಿರುವ, ವಿಶ್ವದ ಕಣ್ಣಿನಲ್ಲಿ ಸೂಪರ್​ ಹೀರೋ ಆಗೋಕೆ ಹೊರಟಿರುವ ಮೋದಿ, RCEPಗೆ ಸಹಿ ಬೀಳುತ್ತಿದ್ದಂತೆ, ರಾಜ್ಯದಲ್ಲಿ ಅಡಿಕೆ ಬೆಳೆಗಾರನ ಸುಸೈಡ್​ ನೋಟ್​ ಸಿದ್ಧವಾಯ್ತು ಅಂತಾನೇ ಅರ್ಥ.

ಈ RCEP ಒಪ್ಪಂದ ಪರಿಚಯವಾಗಿದ್ದು 2012ರಲ್ಲಿ. ಆದರೆ ಅಂದಿನ ಮನಮೋಹನ್​ ಸಿಂಗ್​ ಸರ್ಕಾರ ಅದು ದೇಶಕ್ಕೆ ಮಾರಕ ಎಂದು ತಳ್ಳಿ ಹಾಕಿತ್ತು. ಆದರೆ ವಿಶ್ವನಾಯಕ ಎನಿಸಿಕೊಳ್ಳುವ ಭರದಲ್ಲಿ ಮೋದಿ RCEPಗೂ ಜೈ ಎನ್ನುತ್ತಿದ್ದಾರೆ.

ಯೋಚನೆ ಮಾಡಿ, ಧರ್ಮದ ಭ್ರಮೆ ಹುಟ್ಟಿಸಿ, ದೇಶ ಪ್ರೇಮದ ನಶೆ ಹಚ್ಚಿ, ಗೆದ್ದು ಬಂದ ಬಿಜೆಪಿ ಈಗ ದೇಶದ ಅರ್ಥ ವ್ಯವಸ್ಥೆಯನ್ನೇ ವಿದೇಶಗಳಿಗೆ ಮಾರಲು ಹೊರಟಿದೆ. ಬಿಜೆಪಿಯ ಹಿಡನ್​ ಅಜೆಂಡಾ ಕೊನೆಗೂ ರೈತನ ಬುಡಕ್ಕೆ ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights