ಮೋದಿ ವಿರುದ್ಧ ಹರಿಹಾಯ್ದ ರಾಹುಲ್ : ಅರ್ಥಶಾಸ್ತ್ರದ ಬಗ್ಗೆ ನಮೋಗಿಲ್ಲ ತಿಳುವಳಿಕೆ

ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಥಶಾಸ್ತ್ರದ ಬಗ್ಗೆ ತಿಳುವಳಿಕೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಹರಿಯಾಣದ ಮಹೇಂದ್ರಘರ್ ನಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, 2014ರ ನಂತರ ಯುಎಸ್‍ನ 2-3 ಪ್ರಸಿದ್ಧ ಅರ್ಥಶಾಸ್ತ್ರಜ್ಞರನ್ನು ಭೇಟಿಯಾಗಿದ್ದೆ. 2004-2014ರ ಅವಧಿಯಲ್ಲಿ ಭಾರತದ ಆರ್ಥಿಕತೆಯ ವೇಗದ ಬೆಳವಣಿಗೆಗೆ ಕಾರಣ ಮನ್ರೆಗಾ (ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಹಾಗೂ ಕೃಷಿ ಸಾಲ ಮನ್ನಾ ಎಂದು ಅವರು ನನಗೆ ಮನವರಿಕೆ ಮಾಡಿದರು ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ರಾಹುಲ್, ಮೋದಿಯವರಿಗೆ ಅರ್ಥಶಾಸ್ತ್ರದ ಬಗ್ಗೆ ತಿಳುವಳಿಕೆ ಇಲ್ಲ ಎಂದರು.

ಹರಿಯಾಣದ ಮಹೇಂದ್ರಘರ್ ನಲ್ಲಿ ಸೋನಿಯಾ ಗಾಂಧಿಯವರ ರ‍್ಯಾಲಿಯನ್ನು ರದ್ದುಪಡಿಸಿರುವುದಾಗಿ ಹಠಾತ್ತನೆ ಘೋಷಿಸಲಾಗಿತ್ತು. ನಂತರ ಅವರ ಪುತ್ರ ರಾಹುಲ್ ಗಾಂಧಿ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಯುದ್ಧ ಸಾರಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕಾಗಿ ರ‍್ಯಾಲಿಯಲ್ಲಿ ನೆರೆದಿದ್ದ ಜನರ ಕ್ಷಮೆಯಾಚಿಸಿದ ರಾಹುಲ್, ಕಾಂಗ್ರೆಸ್ಸಿನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಈ ರ‍್ಯಾಲಿಗೆ ಬರದಿರುವ ಕಾರಣವನ್ನು ವಿವರಿಸಿದರು. ಸೋನಿಯಾ ಗಾಂಧಿ ಅವರು ಈ ಕಾರ್ಯಕ್ರಮಕ್ಕೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಿಲ್ಲ. ಹೀಗಾಗಿ ನನ್ನನ್ನು ಈ ರ್ಯಾಲಿಗೆ ಕಳುಹಿಸಿದ್ದಾರೆ. ಕೊನೆಯ ಕ್ಷಣದಲ್ಲಿ ನನ್ನನ್ನು ಇಲ್ಲಿಗೆ ಹೋಗುವಂತೆ ಹೇಳಿದರು. ನಾನು ಇಲ್ಲಿಗೆ ಬಂದಿದ್ದೇನೆ ತಿಳಿಸಿದರು.

ಮಧ್ಯಂತರ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಸೋನಿಯಾ ಗಾಂಧಿ ಅವರು ಭಾಗವಹಿಸುತ್ತಿರುವ ಮೊದಲ ಸಾರ್ವಜನಿಕ ರ‍್ಯಾಲಿ ಇದಾಗಿತ್ತು. ಡಿಸೆಂಬರ್ ನಲ್ಲಿ 73ನೇ ವರ್ಷಕ್ಕೆ ಕಾಲಿಡುತ್ತಿರುವ ಸೋನಿಯಾ ಗಾಂಧಿ ಅನಾರೋಗ್ಯದ ಕಾರಣ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲಿಲ್ಲ. ಶುಕ್ರವಾರ ನಡೆದ ರ್ಯಾಲಿಗಾಗಿ ಕಾಂಗ್ರೆಸ್ ವಿವರವಾದ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿತ್ತು. ಮಹೇಂದ್ರಘರ್‍ನ ಸರ್ಕಾರಿ ಕಾಲೇಜು ಖೇಲ್ ಪ್ಯಾರಿಸಾರ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸೋನಿಯಾ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿ ರಾವ್ ದಾನ್ ಸಿಂಗ್ ಪರ ಪ್ರಚಾರ ಮಾಡಬೇಕಿತ್ತು.

ಹರಿಯಾಣದಲ್ಲಿ ಅಕ್ಟೋಬರ್ 21ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಹಾಗೂ ಐಎನ್‍ಎಲ್‍ಡಿ ಪ್ರಮುಖ ರಾಜಕೀಯ ಪಕ್ಷಗಳು ಸೆಣಸಾಡುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights