ಯತ್ನಾಳ-ಜಿಗಜಿಣಗಿ ಮಧ್ಯೆ ಕೇಂದ್ರ ಸಚಿವರೆದುರೇ ಬಹಿರಂಗ ಸಭೆಯಲ್ಲಿ ಮಾತಿನ ಚಕಮಕಿ – ಯಾಕೆ ಗೊತ್ತಾ?

ಶಾಸಕ ಯತ್ನಾಳ ಮತ್ತು ಸಂಸದ ರಮೇಶ ಜಿಗಜಿಣಗಿ ಮಧ್ಯೆ ಕೇಂದ್ರ ಸಚಿವರು ಮತ್ತು ಶಾಸಕರ ಎದುರ ಅದೂ ಕೂಡ ಬಹಿರಂಗ ವೇದಿಕೆಯಲ್ಲಿಯೇ ಮಾತಿನ ಚಕಮಕಿ ನಡೆದಿದೆ.

ವಿಜಯಪುರ ನಗರದಲ್ಲಿ ವಿಜಯಪುರ- ಯಶವಂತಪುರ ನೂತನ ರೈಲು ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜಯಪುರ ಕೇಂದ್ರ ರೈಲು ನಿಲ್ದಾಣದ ಎದುರು ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕೇಂದ್ರ ರೇಲ್ವೆ ಖಾತೆ ಸಹಾಯಕ ಸಚಿವ ಸುರೇಶ ಅಂಗಡಿ ಕುಳಿತಿದ್ದರು. ಅವರ ಬಲಗಡೆ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ಲೋಕಸಭೆ ಬಿಜೆಪಿ ಸದಸ್ಯ ರಮೇಶ ಜಿಗಜಿಣಗಿ ಹಾಗೂ ಅವರ ಪಕ್ಕದಲ್ಲಿ ಕೇಂದ್ರ ಮಾಜಿ ಸಚಿವ ಮತ್ತು ವಿಜಯಪುರ ನಗರ ಬಿಜೆಪಿ ಶಾಸಕ ಬನಸಗೌಡ ರಾ. ಪಾಟೀಲ ಯತ್ನಾಳ ಆಸೀನರಾಗಿದ್ದರು. ಈ ಸಂದರ್ಭದಲ್ಲಿ ಯತ್ನಾಳ ಕೇಂದ್ರ ಸಚಿವ ಸುರೇಶ ಚ. ಅಂಗಡಿ ಅವರಿಗೆ ಏನೋ ಹೇಳುತ್ತಿದ್ದರು. ಆಗ ರಮೇಶ ಜಿಗಜಿಣಗಿ ಕೂಡ ಕೇಂದ್ರ ಸಚಿವರಿಗೆ ಏನೋ ಹೇಳಿದ್ದಾರೆ. ಆಗ ಯತ್ನಾಳ ಮತ್ತು ರಮೇಶ ಜಿಗಜಿಣಗಿ ಪರಸ್ಪರ ದುರುಗುಟ್ಟಿಕೊಂಡು ನೋಡಿದ್ದಾರೆ.

 

ಮೂಲಗಳ ಪ್ರಕಾರ ಜನರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ತಮಗೆ ಅವಕಾಶ ನೀಡುವಂತೆ ಯತ್ನಾಳ ಕೇಂದ್ರ ಸಚಿವ ಸುರೇಶ ಅಂಗಡಿ ಅವರನ್ನು ಕೇಳಿದ್ದಾರೆ. ಆಗ, ರಮೇಶ ಜಿಗಜಿಣಗಿ ಇದಕ್ಕೆ ಆಕ್ಷೇಪಿಸಿದರು ಎನ್ನಲಾಗಿದೆ. ಆಗ ಯತ್ನಾಳ ನಾನು ಕೇಂದ್ರ ಸಚಿವರನ್ನು ಕೇಳುತ್ತಿದ್ದೇವೆ. ಬೇಡ ಎನ್ನಲು ನೀವ್ಯಾರು ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಈ ವಿಚಾರ ದೀರ್ಘಕ್ಕೆ ಹೋಗುವುದನ್ನು ವೀರಣ್ಣ ಚರಂತಿಮಠ ಮತ್ತು ಸುರೇಶ ಅಂಗಡಿ ತಪ್ಪಿಸಿದ್ದಾರೆ.

ಆದರೆ, ಇದಕ್ಕೆ ಬೇರೆ ಇನ್ನೇನಾದರೂ ಕಾರಣವೂ ಇರಬಹುದು ಎನ್ನಲಾಗಿದೆ. ಯತ್ನಾಳ ಪಕ್ಕದಲ್ಲಿದ್ದ ಬಾಗಲಕೋಟೆ ಬಿಜೆಪಿ ವೀರಣ್ಣ ಚರಂತಿಮಠ ಯತ್ನಾಳ ಅವರ ಕೈ ಹಿಡಿದು ಸಮಾಧಾನ ಪಡಿಸಿದ್ದಾರೆ. ಇತ್ತ ರಜೇಶ ಜಿಗಜಿಣಗಿ ಅವರನ್ನು ಕೇಂದ್ರ ಸಚಿವ ಸುರೇಶ ಚ. ಅಂಗಡಿ ಸಮಾಧಾನ ಪಡಿಸಿದರು.

ಒಟ್ಟಾರೆ ಈ ಹಿಂದೆ ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ನ ದ್ವಿಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಉಂಟಾಗಿರುವ ಉಭಯ ಮುಖಂಡರ ಶೀತಲ ಸಮರ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೇ ಕಾರ್ಯಕ್ರಮದಲ್ಲಿ ಯತ್ನಾಳ ಕೇಂದ್ರ ಸಚಿವ ಸುರೇಶ ಚಂ. ಅಂಗಡಿ ಅವರಿಗೆ ನಾನಾ ರೈಲು ಸೇವೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೆ, ತಮ್ಮ ಸರದಿ ಬಂದಾಗ ಸಂಸದ ರಮೇಶ ಜಿಗಜಿಣಗಿ ನಾನೂ ಸಂಸದನಾದ ಮೇಲೆ ರೇಲ್ವೆ ಇಲಾಖೆಯ ನಾನಾ ಕೆಲಸಗಳನ್ನು ಮಾಡಿದ್ದೇನೆ ಎಂದು ಹೇಳಿದರು. ಅಲ್ಲದೇ, ತಮ್ಮ ಭಾಷಣದ ಮಧ್ಯೆಯೇ, ವೇದಿಕೆಯ ಕಡೆಗೆ ಬಂದ ಮಾಜಿ ಸಚಿವ ಮತ್ತು ಯತ್ನಾಳ ಕಡು ವಿರೋಧಿ ಅಪ್ಪು ಪಟ್ಟಣಶೆಟ್ಟಿ ಅವರನ್ನು ಅಪ್ಪು ಅಣ್ಣಾ ವೇದಿಕೆಯ ಮೇಲೆ ಬನ್ನಿ ಎಂದು ಹೇಳುವ ಮೂಲಕ ಯತ್ನಾಳ ಅವರಿಗೆ ಟಾಂಗ್ ನೀಡದ ಘಟನೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights