ಲಾಕ್ಡೌನ್ ದಿನಗಳು-2 : ಕೊರೋನ ಮೇಷ್ಟ್ರು ಹೇಳುವ ಪಾಠ…

“ನಮ್ಮ ಜೀವಿತಾವಧಿಯಲ್ಲಿ ಇಂಥ ದಿನಗಳನ್ನೂ ನೋಡಬೇಕಾಗುತ್ತದೆ ಎಂದು ನಾವು ಕನಸು-ಮನಸಿನಲ್ಲೂ ಅಂದುಕೊಂಡಿರಲಿಲ್ಲ”
ಇಂಥ ಉದ್ಘಾರಗಳು ಮಧ್ಯ ವಯಸ್ಕರು, ವೃದ್ಧರಾದಿಯಾಗಿ ಎಲ್ಲರ ಬಾಯಿಯಿಂದಲೂ ಈಗ ಹೊರಡುತ್ತಿವೆ.
ಪ್ರಾಣಿಗಳಿಗೂ ಮನುಷ್ಯರಿಗೂ ಒಂದು ವ್ಯತ್ಯಾಸವಿದೆ. ಮನುಷ್ಯ ಸಮಾಜ ಜೀವಿ, ಪ್ರಾಣಿಗಳಂತೆ ಒಬ್ಬಂಟಿಯಾಗಿ ಬಾಳಲಾರ ಎಂಬ ಮಾತುಗಳಿಂದ ಆರಂಭವಾಗಿದ್ದ ಮನುಷ್ಯನ ಬದುಕು, ಈಗ ಮನುಷ್ಯ ಬದುಕುಳಿಯಬೇಕಾದರೆ ಇತರ ಮನುಷ್ಯರಿಂದ ದೂರವಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಒಬ್ಬರನ್ನೊಬ್ಬರು ಸ್ಪರ್ಷಿಸಬಾರದು, ಪರಸ್ಪರ ಭೇಟಿಯಾದರೂ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು ಎಂಬಲ್ಲಿಗೆ ಬಂದು ನಿಂತಿರುವುದು ವಿಪರ್ಯಾಸ.
ವಿಜ್ಞಾನ, ತಂತ್ರಜ್ಞಾನದಲ್ಲಿ ಊಹಿಸಲಸಾಧ್ಯವೆಲ್ಲವನ್ನೂ ಸಾಧಿಸಿ ಚಂದ್ರನ ಅಂಗಳಕ್ಕೆ ಕಾಲಿಟ್ಟು ಬೀಗುತ್ತಿದ್ದ ಮನುಷ್ಯ, ಈಗ ತನ್ನ ಮನೆಯ ಅಂಗಳದಲ್ಲೇ ಕಾಲಿಡಲು ಹೆದರುವಂತೆ ಮಾಡಿದೆ ಕಣ್ಣಿಗೆ ಕಾಣದ ಒಂದು ವೈರಸ್.

ಭಯದ ನೆರಳಿನಲ್ಲಿ ಬದುಕು:

ನಾವು ಕಾಲ್ಪನಿಕ ಕಾದಂಬರಿಗಳಲ್ಲಿ ಮಾತ್ರ ಓದುತ್ತಿದ್ದ ಮತ್ತು ಕಾಲ್ಪನಿಕ ಸಿನೇಮಾಗಳಲ್ಲಿ ಮಾತ್ರ ನೋಡುತ್ತಿದ್ದ ಇಂಥ ಸಂಗತಿಗಳನ್ನು ಈಗ ಖುದ್ದಾಗಿ ಅನುಭವಿಸುವಂತಾಗಿದೆ.


ಗಾಳಿಯಲ್ಲಿನ ಹರಡುವಂಥ, ಸ್ಪರ್ಶ ಮಾತ್ರದಿಂದ ಮನುಷ್ಯನಿಂದ ಮನುಷ್ಯನಿಗೆ ಹರಡುವ, ಸಾಂಕ್ರಾಮಿಕ ರೋಗದಿಂದ ಮನುಕುಲವೇ ನಾಶವಾಗುವಂಥ ವೈರಸ್ ಸೃಷ್ಟಿಸಿ ಒಂದು ರಾಷ್ಟ್ರ ಶತ್ರುರಾಷ್ಟ್ರದ ಮೇಲೆ ಅದೃಶ್ಯ ಯುದ್ಧ ಸಾರುವ ಸಿನಿಮಾಗಳನ್ನು ನಾವು ನೋಡಿದ್ದೇವೆ. ಜನ ಹುಳು ಹುಪ್ಪಡಿಯಂತೆ ಪಟಪಟನೇ ಒದ್ದಾಡಿ ಸಾಯುವುದನ್ನೂ ಕಂಡು ಬೆರಗಾಗಿದ್ದೇವೆ. ಈ ಕೊರೋನ ವೈರಸ್ ನಿಂದಾಗಿ ಈಗ ನಾವೂ ಅಂಥದೇ ಸ್ಥಿತಿಯಲ್ಲಿದ್ದೇವೆ.
ಮನೆಯ ಹೊರಗೆ ಕಾಲಿಡುವಂತಿಲ್ಲ, ನಾಲ್ಕು ಜನರನ್ನು ಭೇಟಿ ಮಾಡುವಂತಿಲ್ಲ, ಎಲ್ಲವನ್ನೂ ಸಹಿಸಿಕೊಂಡು ಮನೆಯಲ್ಲೇ ಇದ್ದರೂ ಕರೋನ ವೈರಸ್ ನ ಭಯ, ಆತಂಕ ಮಾತ್ರ ದೂರವಾಗಲೊಲ್ಲದು. ಮನೆಗೆ ತರುವ ದಿನಸಿ, ತರಕಾರಿ ಮುಟ್ಟಲು ಭಯ, ಮನೆಯ ಬಾಗಿಲಿನ ಹಿಡಿಕೆ, ಲಿಫ್ಟ್ ನ ಬಟನ್, ಮನೆ ಮುಂದೆ ಬಿದ್ದಿರುವ ಪೇಪರು ಮುಟ್ಟಲು ಭಯ. ಒಟ್ನಲ್ಲಿ ಕುಂತರೂ ಭಯ, ನಿಂತರೂ ಭಯ. ನಮ್ಮನ್ನು ಈಗ ಭಯವೇ ಆಳುತ್ತಿದೆ ಎನ್ನುವಷ್ಟರ ಮಟ್ಟಿಗಿನ ಭಯ.

ಕೊರೋನ ಯಾರ ಸೃಷ್ಟಿ:?

ಹಿಂದಿಯಲ್ಲಿ ಒಂದು ಮಾತಿದೆ. “ಇನ್ಸಾನ್ ಲಾಖ್ ಬುರಾ ಚಾಹೆತೊ ಕ್ಯಾ ಹೋತಾ ಹೈ, ವಹೀ ಹೋತಾ ಹೈ, ಜೊ ಮಂಜೂರೇ ಖುದಾ ಹೋತಾ ಹೈ”. ಏನೇ ಆಗಲಿ ಭಗವಂತನ ಆಜ್ಞೆ ಇಲ್ಲದೇ ಏನೂ ಆಗುವುದಿಲ್ಲ. ಮನುಷ್ಯ ಮಾತ್ರರಿಂದ ಏನೂ ಸಾಧ್ಯವಿಲ್ಲ ಎಂಬರ್ಥದ ಈ ಮಾತುಗಳನ್ನು ದೇವರನ್ನು ನಂಬುವವರು ಆಡುತ್ತಾರೆ.
ಹಾಗಾದರೆ, ಕೊರೋನ ವೈರಸ್ ಹಬ್ಬುವುದಕ್ಕೂ ದೇವರ ಆಜ್ಞೆಯೇ ಕಾರಣವೇ? ಸಾವಿರಾರು ಸಂಖ್ಯೆಯಲ್ಲಿ ಅಮಾಯಕರು ಸಾಯುವುದಕ್ಕೆ ದೇವರು ಅನುಮತಿ ಕೊಟ್ಟಿರುವುದು ಯಾವ ನ್ಯಾಯ? ಎಂಬ ಪ್ರಶ್ನೆಗಳನ್ನು ದೇವರನ್ನು ನಂಬದ ನಿರೀಶ್ವರವಾದಿಗಳು, ವಿಜ್ಞಾನದಲ್ಲಿ ನಂಬಿಕೆ ಇರಿಸಿದ ಜನ ಕೇಳುತ್ತಿದ್ದಾರೆ.
ಇಂಥ ಚರ್ಚೆ ಸದಾ ಕಾಲಕ್ಕೆ ಇದ್ದುದೇ. ಈ ಪ್ರಶ್ನೆಗೆ ಉತ್ತರ ಎಂದಿಗೂ ಸಿಗದು. ಏಕೆಂದರೆ, ವೈರಸ್ ಬಂತೆಂಬ ಕಾರಣಕ್ಕಾಗಿ ಮಂದಿರ, ಮಸೀದಿ, ಚರ್ಚ್ ಗಳ ಬಾಗಿಲುಗಳನ್ನೇ ಜಡಿದುಕೊಂಡು ದೇವರು ನಾಟ್ ರೀಚೇಬಲ್ ಆಗಿರುವಾಗ ಮನುಕುಲವನ್ನು ಸಂಕಷ್ಟದಿಂದ ಪಾರು ಮಾಡಲು ಶ್ರಮಿಸುತ್ತಿರುವುದು ವಿಜ್ಞಾನಿಗಳೇ ಹೊರತು ದೇವರಲ್ಲ ಎಂದು ನಿರೀಶ್ವರವಾದಿಗಳು ಹೇಳಿದರೆ, ಇದೆಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತಿದೆ ಎಂದು ಆಸ್ತಿಕರು ಸುಲಭವಾಗಿ ಹೇಳಿಬಿಡುತ್ತಾರೆ. ಇಂಥ ಚರ್ಚೆಯಲ್ಲಿ ವಾದ ಮಾಡುವುದು ಆಸ್ತಿಕರಿಗೆ ಬಹಳ ಸುಲಭದ ಕೆಲಸ. ಏಕೆಂದರೆ, ಅದು ನಂಬಿಕೆಯ ಪ್ರಶ್ನೆ. ಅಲ್ಲಿ ಸಾಕ್ಷಿ, ಪುರಾವೆ, ತರ್ಕಕ್ಕೆ ಜಾಗವಿಲ್ಲ. ಎಲ್ಲವೂ ದೇವರ ಇಚ್ಛೆಯಂತೆಯೇ ನಡೆಯುತ್ತಿದೆ. ಕೊರೋನ ವೈರಸ್ ಹುಟ್ಟಿದ್ದೂ ದೇವರ ಇಚ್ಛೆ. ಅದಕ್ಕೆ ಔಷಧ ಸಿಗುವುದೂ ದೇವರು ಬಯಸಿದಾಗ ಮಾತ್ರ ಎಂಬುದು ನಂಬಿಕೆ.
ಆದರೆ, ವಿಜ್ಞಾನಿಗಳದು ತುಸು ಕಷ್ಟದ ಕೆಲಸ. ತಾವು ಆಡುವ ಪ್ರತಿಯೊಂದು ಮಾತನ್ನೂ ವೈಜ್ಞಾನಿಕವಾಗಿ, ತರ್ಕಬದ್ಧವಾಗಿ ಸಾಬೀತು ಮಾಡುವ ಜವಾಬ್ದಾರಿ ಅವರ ಮೇಲೆ ಇರುತ್ತದೆ.


ಈಗ ಮನುಕುಲಕ್ಕೆ ಕೊರೋನ ತಂದೊಡ್ಡಿರುವ ಸವಾಲಿಗೆ ಜವಾಬು ಹುಡುಕಲು ಆಸ್ತಿಕರು ಮತ್ತು ನಾಸ್ತಿಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನವನ್ನೇನೋ ಮಾಡುತ್ತಿದ್ದಾರೆ.

ಕೊರೋನ ಹೇಳ್ತಿದೆ ಕೇಳಿ:

ಆದರೆ, ಈ ಕೊರೋನ ಮಹಾಮಾರಿ ಜಗತ್ತಿಗೆ ಏನೋ ಒಂದು ಪಾಠ ಕಲಿಸಲು ಬಂದಿದೆ ಎಂಬುದಂತೂ ಸತ್ಯ.
ಅದು ನಮ್ಮ ಸ್ವಾರ್ಥ ಜೀವನ ಶೈಲಿ, ಅತಿಯಾದ ಯಾಂತ್ರಿಕತೆ, ಪ್ರಕೃತಿಯನ್ನು ಕಡೆಗಣಿಸಿದ ಮನುಷ್ಯನ ದುರಾಸೆ, ಅಪಘಾತಕ್ಕೆ ಕಾರಣವಾಗುವಷ್ಟು ವೇಗ, ದೇಶ ದೇಶಗಳ ನಡುವಿನ ಅನಾರೋಗ್ಯಕರ ಪೈಪೋಟಿ ಹೀಗೆ ಏನಾದರಿರಬಹುದು. ಖಂಡಿತವಾಗಿಯೂ ಇಂಥ ಅನಗತ್ಯ ವೇಗಕ್ಕೆ ಎಲ್ಲೋ ಒಂದು ಕಡೆ ಬ್ರೇಕ್ ಹಾಕಲು ಈ ಮಹಾಮಾರಿ ಬಂದಿರುವುದಂತೂ ಸತ್ಯ.
ಈ ಕೊರೋನ ಮಹಾಮಾರಿಯ ಅಟ್ಟಹಾಸ ಮುಗಿದು ಇಡೀ ಜಗತ್ತು ನಿಟ್ಟುಸಿರು ಬಿಡಲು ಇನ್ನೂ ಹಲವು ತಿಂಗಳುಗಳೇ ಬೇಕು. ಆಗ ಜಗತ್ತು‌ ಕೊರೋನ ಮುಕ್ತವಾದರೂ ಕೊರೋನ ಮಾಡಿಹೋಗಬಹುದಾದ ಅನಾಹುತವನ್ನು, ಹಾನಿಯನ್ನು ಸರಿದೂಗಿಸಲು ಹಲವು ವರ್ಷಗಳೇ ಬೇಕು. ಕೊರೋನೋತ್ತರ ಜಗತ್ತು ಕೊರೋನ ಪೂರ್ವ ಜಗತ್ತಿಗಿಂತ ಬಹಳ ವಿಭಿನ್ನವಾಗಿರುವುದಂತೂ ಸತ್ಯ.


ಮನುಷ್ಯನ ಬದುಕುವ ವಿಧಾನ, ಮನುಷ್ಯರ ನಡುವಿನ ಸಂಬಂಧ, ನಮ್ಮ ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ- ತೊಡುಗೆ, ಜಾಗತಿಕ ರಾಜಕಾರಣ, ರಾಷ್ಟ್ರ- ರಾಷ್ಟ್ರಗಳ ನಡುವಿನ ಸಂಬಂಧ ಸೇರಿದಂತೆ ಎಲ್ಲವೂ ಸಹ ಕೊರೋನೋತ್ತರ ಜಗತ್ತಿನಲ್ಲಿ ಭಾರಿ ಪ್ರಮಾಣದಲ್ಲಿ ಬದಲಾವಣೆ ಕಾಣಲಿವೆ.
ಈ ಮಹಾಮಾರಿ ಕಲಿಸಬಹುದಾದ ಪಾಠಗಳೆನೇನು ಇರಬಹುದು? ಒಮ್ಮೆ ಯೋಚಿಸಬಾರದೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights