ವಿಘ್ನೇಶ್ವರನಿಗೂ ತಟ್ಟಿದ ಭೀಕರ ಪ್ರವಾಹದ ಬಿಸಿ : ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿಗಳ ಅಭಾವ

ಭೀಕರ ಪ್ರವಾಹದ ಬಿಸಿ ವಿಘ್ನೇಶ್ವರನಿಗೂ ತಟ್ಟಿದೆ. ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿಗಳ ಅಭಾವ ಸೃಷ್ಟಿಯಾಗಿದೆ. ಮಾರುಕಟ್ಟೆಯಲ್ಲಿ ರಾರಾಜಿಸುತ್ತಿದ್ದ ಗಣಪನ ಮೂರ್ತಿಗಳಲ್ಲಿ ಇಳಿಕೆಯಾಗಿದೆ. ನೆರೆ ಹಾವಳಿಯಿಂದಾಗಿ ಹಬ್ಬದ ಉತ್ಸಾಹಕ್ಕೆ ಸ್ವಲ್ಪ ಬ್ರೇಕ್ ಬಿದ್ದಿದ್ದು, ಸರಳವಾಗಿ ಹಬ್ಬ ಆಚರಿಸಲು ಗಣೇಶೋತ್ಸವ ಸಮಿತಿಗಳು ತೀರ್ಮಾನಿಸಿವೆ.
ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಪ್ರತಿವರ್ಷ ಅತ್ಯಂತ ವಿಜ್ರಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತೆ. ಸೆಪ್ಟೆಂಬರ್‌ 2ರಿಂದ ಗಣೇಶ ಚತುರ್ಥಿ ಇದ್ದು ವಿಘ್ನನಾಶಕನ ಆರಾಧನೆಗೆ ಜನರು ಸಜ್ಜಾಗಿದ್ದಾರೆ. ಆದರೆ ಇತ್ತೀಚೆಗೆ ಉತ್ತರ ಕರ್ನಾಟಕದಾದ್ಯಂತ ಸುರಿದ ಭೀಕರ ಮಳೆ ಈ ಬಾರಿಯ ಗಣೇಶೋತ್ಸವದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಕಂಡುಕೇಳರಿಯದ ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿದ್ದು ಗಣೇಶ ಹಬ್ಬದ ಉತ್ಸಾಹಕ್ಕೆ ಕೊಂಚ ಬ್ರೆಕ್‌ ಬಿದ್ದಿದೆ. ಜನಜೀವನ ಸಂಕಷ್ಟದಲ್ಲಿದ್ದು ಬಡವರು ಬದುಕು ಕಟ್ಟಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಮಳೆ ತಂದ ಅವಾಂತರದಿಂದ ಹೊರಬರಲು ಜನರು ಹೆಣಗಾಡುತ್ತಿದ್ದಾರೆ. ಹೀಗಾಗಿ ಅತ್ಯಂತ ಸರಳವಾಗಿ ಗಣೇಶ ಹಬ್ಬವನ್ನು ಆಚರಿಸಲು ಗಣೇಶೋತ್ಸವ ಸಮಿತಿಗಳು ತೀರ್ಮಾನಿಸಿವೆ.
ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿಯೂ ತೀವ್ರ ಇಳಿಕೆಯಾಗಿದೆ. ವಿಭಿನ್ನ ಮಾದರಿಯ ಗಣೇಶ ಮೂರ್ತಿಗಳನ್ನು ತಿಂಗಳುಗಟ್ಟಲೆ ಮೊದಲೇ ಸಿದ್ಧಪಡಿಸಲಾಗುತ್ತಿತ್ತು. ಆದರೆ ವರುಣನ ಅವಕೃಪೆಯಿಂದ ಮಣ್ಣಿನ ಮೂರ್ತಿಗಳು ನೀರಲ್ಲಿ ಹೋಮವಾಗಿವೆ. ಮೂರ್ತಿ ತಯಾರಕರಿಗೂ ಸಾಕಷ್ಟು ನಷ್ಟ ಸಂಭವಿಸಿದೆ. ಪ್ರವಾಹದಿಂದಾಗಿ ಮೂರ್ತಿ ತಯಾರಿಕೆಗೆ ಬೇಕಾದ ಮಣ್ಣು ಮತ್ತು ಇತರ ಪರಿಕರಗಳು ಹಾಳಾಗಿವೆ. ಅನೇಕ ಮೂರ್ತಿ ತಯಾರಕರು ತಮ್ಮ ವೃತ್ತಿಗೆ ಬಿಡುವು ನೀಡಿದ್ದಾರೆ. ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಜನರಿಗೆ ಬೇಕಾದಷ್ಟು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸಲು ತಯಾರಕರಿಗೆ ಆಗಿಲ್ಲ. ಅಳಿದುಳಿದ ಮೂರ್ತಿಗಳ ಬೆಲೆಯೂ ದುಪ್ಪಟ್ಟಾಗಿದೆ. ಗಣೇಶ ಮೂರ್ತಿಗಳು ಸೋಲ್ಡ್‌ಔಟ್‌ ಎನ್ನುವ ಬೋರ್ಡ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ.
ಪಿಓಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಜಿಲ್ಲಾಡಳಿತ ಸೂಚಿಸಿದೆ. ಅದಕ್ಕೆ ಪೂರಕವಾಗುವಂತೆ ಮಣ್ಣಿನ ಗಣಪ ಮೂರ್ತಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಮನೆ ಮನೆಯಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಜನರಿಗೆ ಮಣ್ಣಿನ ಗಣೇಶ ಮೂರ್ತಿಗಳು ಸಿಗುತ್ತಿಲ್ಲ. ಒಟ್ಟಾರೆ ನೂರಾರು ಸಂಕಷ್ಟಗಳ ನಡುವೆಯೂ ಜನರು ಸಂಕಷ್ಟ ಹರನ ಆರಾಧನೆಗೆ ಸಜ್ಜಾಗುತ್ತಿದ್ದಾರೆ.
ಪರಶುರಾಮ್ ತಹಶೀಲ್ದಾರ್ ನ್ಯೂಜ್‌18 ಕನ್ನಡ ಹುಬ್ಬಳ್ಳಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights