ವಿದೇಶದಲ್ಲಿ ಭಾರೀ ಹಣ ಹೂಡಿಕೆ : ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ಇಡಿ ತನಿಖೆ

ವಿದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ತನಿಖೆ ಆರಂಭಿಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೇಮಾ) ಅಡಿ ಇಡಿ ಪ್ರಕರಣ ದಾಖಲಿಸಿದ್ದು, ಈಗ ಜಾರ್ಜ್ ಹೊಂದಿರುವ ಆಸ್ತಿಯ ಅಧಿಕೃತ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಜಾರ್ಜ್ ಅವರು 1985 ರಿಂದ 2019ರವರೆಗೆ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಹೀಗಾಗಿ ವಿಧಾನಸಭೆಗೆ ಆಯ್ಕೆಯಾದ ವರ್ಷದಿಂದ ಇಲ್ಲಿಯವರೆಗೆ ಲೋಕಾಯುಕ್ತದಲ್ಲಿ ಜಾರ್ಜ್ ಘೋಷಿಸಿಕೊಂಡಿರುವ ಆಸ್ತಿಯ ವಿವರವನ್ನು ಆಧಾರವಾಗಿಟ್ಟುಕೊಂಡು ತನಿಖೆ ಆರಂಭಿಸಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಲೋಕಾಯುಕ್ತದಲ್ಲಿ ಜಾರ್ಜ್ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ಇಡಿ ಈಗಾಗಲೇ ಪಡೆದುಕೊಂಡಿದೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ.ಜೆ.ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು. ಅಕ್ರಮವಾಗಿ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ, ಆಸ್ತಿ ವಿವರ ಘೋಷಣಾ ಪತ್ರದಲ್ಲಿ ಈ ಕುರಿತು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್ ಅವರು ಅಗಸ್ಟ್ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ರವಿ ಕೃಷ್ಣಾರೆಡ್ಡಿ, ಪ್ರಮುಖ ರಾಜಕೀಯ ನಾಯಕರು ತಮ್ಮ ಶಕ್ತಿ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾರೆ. ಈಗ ಇಡಿ ವಶದಲ್ಲಿರುವ ಡಿ.ಕೆ.ಶಿವಕುಮಾರ್ ಮೇಲೆ ಸಹ ಈ ಬಗ್ಗೆ ನಾವು ಇಡಿಗೆ ದೂರು ನೀಡಿದ್ದೆವು. ಎರಡು ವರ್ಷದ ಹಿಂದೆಯೇ ದೂರು ನೀಡಿದ್ದೆವು ಆದರೆ, ನಿಧಾನವಾಗಿ ತನಿಖೆ ನಡೆಸಿ ಇಡಿ ಕ್ರಮ ಕೈಗೊಂಡಿದೆ. ಇಂದೂ ಸಹ ಅನೇಕ ಮಂತ್ರಿಗಳ ಮಕ್ಕಳ ಹೆಸರಲ್ಲಿ ನೂರಾರು ಕೋಟಿ ರೂ. ಆಸ್ತಿ ಇದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ಮಕ್ಕಳ ಹೆಸರಿನಲ್ಲಿ ಬೇನಾಮಿ ಆಸ್ತಿಗಳಿವೆ ಎಂದು ಆರೋಪಿಸಿದ್ದರು.ಕೇರಳದಿಂದ ಕೊಡಗಿಗೆ ಬಂದು, ಸಣ್ಣ ಪುಟ್ಟ ಟಿಂಬರ್ ಕೆಲಸ ಮಾಡಿಕೊಂಡಿದ್ದ ಜಾರ್ಜ್ ನಂತರ ರಾಜಕಾರಣ ಮಾಡಿಕೊಂಡು ಬೆಂಗಳೂರಿಗೆ ಬಂದು ಇಷ್ಟೆಲ್ಲ ಆಸ್ತಿ ಸಂಪಾದಿಸಿದ್ದಾರೆ. ಕೆ.ಜೆ.ಜಾರ್ಜ್ ಇದೀಗ ಸಾವಿರಾರು ಕೋಟಿ ರೂ.ಗಳ ಆಸ್ತಿಯ ಒಡೆಯ. ಅವರ ಮಗನ ಹೆಸರಿನಲ್ಲಿ  ಬೇನಾಮಿ ಆಸ್ತಿ ಇದೆ. ಮಗಳ ಹೆಸರಿನಲ್ಲಿ ಅಮೆರಿಕದಲ್ಲಿ ಆಸ್ತಿ ಇದೆ.

ಲೋಕಾಯುಕ್ತಕ್ಕೆ ಆಸ್ತಿ ಘೋಷಣೆ ಮಾಡುವಾಗ ಸಲ್ಲಿಸಿರುವ ಅಫಿಡೆವಿಟ್‍ನಲ್ಲಿ ಆಸ್ಟ್ರೇಲಿಯಾದಲ್ಲಿ ಆಸ್ತಿ ಇದೆ ಎಂದು ನಮೂದಿಸಿದ್ದಾರೆ. ಆದರೆ, ಚುನಾವಣೆಗೆ ಸ್ಪರ್ಧಿಸುವಾಗ ಈ ಆಸ್ತಿಗಳನ್ನು ಘೋಷಿಸಿಲ್ಲ ಎಂದು ತಿಳಿಸಿದ್ದರು.ಜನ ಪ್ರತಿನಿಧಿಗಳು ಸಿಂಗಾಪುರ ಮಾರ್ಗವಾಗಿ ತಮ್ಮ ಎಲ್ಲ ವ್ಯವಹಾರಗಳನ್ನು ನಡೆಸುತ್ತಾರೆ. ಅಮೇರಿಕ, ಮಲೇಷ್ಯಾ, ಸಿಂಗಾಪುರ ಹೋಗುವುದು ಕೇವಲ ಕ್ಯಾಸಿನೋ ಆಡಿ ಮಜಾ ಮಾಡುವುದಕ್ಕಲ್ಲ. ತಮ್ಮ ಆಸ್ತಿಗಳನ್ನು ನಿರ್ವಹಿಸಿಕೊಂಡು ಬರಲು ಹೋಗುತ್ತಾರೆ. ತಾವು ಸಂಪಾದಿಸಿರುವ ಹಣವನ್ನು ಹವಾಲಾ ಮೂಲಕ ವಿದೇಶಗಳಿಗೆ ಸಾಗಿಸುತ್ತಾರೆ. ಹೀಗಾಗಿ ನೀವು ರಾಜಕಾರಣ ಮಾಡಿ ಇಲ್ಲವೇ ಕೈಗಾರಿಕೋದ್ಯಮಿ, ವ್ಯಾಪಾರಸ್ಥರಾಗುವುದು ಒಳ್ಳೆಯದು. ಆದರೆ ಎರಡೂ ಮಾಡುವುದು ಜನದ್ರೋಹದ ಕೆಲಸವಾಗಿದ್ದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಜನರ ದುಡ್ಡನ್ನು ವೈಯಕ್ತಿಕ ವಿಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ದೂರಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights