ವೇದಾವತಿಯ ಅಬ್ಬರಕ್ಕೆ ಅನ್ನದಾತರು ಕಂಗಾಲು : ನದಿ ಸೃಷ್ಟಿಸಿದ ಅವಾಂತರ…!

ಕಂಡ ಕಂಡ ದೇವರಿಗೆ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದ ಚಿಕ್ಕಮಗಳೂರಿನ ಬಯಲುಸೀಮೆ ರೈತರು ಇದೀಗ ಮಳೆಯ ಸಹವಾಸವೇ ಸಾಕಪ್ಪ ಅನ್ನುವಷ್ಟು ಮಳೆಯಿಂದ ರೋಸಿ ಹೋಗಿದ್ದಾರೆ. ಹಿಂಗಾರು ಮಳೆಯ ಆರ್ಭಟಕ್ಕೆ ಜೀವಗಳು ಬಲಿಯಾಗೋದ್ರ ಜೊತೆಗೆ ಒಂದು ಕಡೆ ರಸ್ತೆ, ಸೇತುವೆಗಳೇ ಕೊಚ್ಚಿ ಹೋಗ್ತಿವೆ. ಮತ್ತೊಂದು ಕಡೆ ರೈತರು ಬೆಳೆದಿದ್ದ ಬೆಳೆಗಳು ವೇದಾವತಿ ಪ್ರವಾಹಕ್ಕೆ ಸಿಲುಕಿ ದಿಕ್ಕಾಪಾಲಾಗಿದೆ. ಎಲ್ಲಿ ನೋಡಿದ್ರು ಎದೆ ಮಟ್ಟಕ್ಕೆ ನೀರು ತುಂಬಿದ ತೋಟ, ಹೊಲಗಳದ್ದೆ ದೃಶ್ಯ. ಅಷ್ಟಕ್ಕೂ ವೇದಾವತಿ ನದಿ ಸೃಷ್ಟಿಸಿರೋ ಅವಾಂತರ ಹೇಗಿದೆ ಗೊತ್ತಾ, ಈ ವರದಿ ನೋಡಿ.

ನದಿಯ ಪ್ರವಾಹಕ್ಕೆ ಕೊಚ್ಚಿ ಹೋಗಿರೋ ವೃದ್ಧೆ.. ಇಲ್ಲಿ ಸೇತುವೆ ಇತ್ತು ಅನ್ನೋದಕ್ಕೂ ಕುರುಹು ಇಲ್ಲದ ಹಾಗೆ ಕೊಚ್ಚಿ ಹೋಗಿರೋ ಸೇತುವೆ. ಮುಳುಗಡೆ ಆಗಿರೋ ಜಮೀನು ಹಾಗೂ ಬೆಳೆದ ಬೆಳೆಗಳು. ಬರೋಬ್ಬರಿ ಕಳೆದ ಒಂದು ದಶಕದಿಂದ ಮಳೆಯಿಲ್ಲದೆ ಬಳಲಿ ಬೆಂಡಾಗಿ ಹೋಗಿದ್ದ ಕಾಫಿನಾಡಿನ ಬಯಲುಸೀಮೆ ಭಾಗದ ರೈತರು ಮಳೆಗಾಗಿ ಆಕಾಶ ನೋಡಿ ನಮ್ಮೂರಿಗೆ ಮಳೆ ಯಾವಾಗ ಬರುತ್ತೆ ಅಂತಾ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ರು. ಈ ವರ್ಷವೂ ಮಳೆಗಾಲ ಇನ್ನೇನೂ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಈ ಭಾಗದಲ್ಲಿ ಸುರಿದಿದ್ದು ಅಕ್ಷರಶಃ ರಣಮಳೆ. ಹೌದು ಚಿಕ್ಕಮಗಳೂರಿನ ಕಡೂರು ತಾಲೂಕಿನ ಮಲ್ಲಿದೇವರಹಳ್ಳಿ, ಹಡಗಲು, ಆಸಂದಿ, ಹಿರೇನಲ್ಲೂರು, ಬಾಸೂರು ಗ್ರಾಮಗಳಲ್ಲಿ ವೇದಾವತಿ ನದಿ ಪ್ರವಾಹಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಮಲ್ಲಿದೇವರಹಳ್ಳಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿ ನೀರನ್ನ ನೋಡಲು ಹೋದ ವೃದ್ಧೆ ನದಿ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಜೀವಮಾನದಲ್ಲೇ ನೋಡದ ಮಳೆಯ ಅಬ್ಬರವನ್ನ ನೋಡಲು ಹೋದ ವೃದ್ಧೆ ಕೊನೆಗೆ ಸಿಕ್ಕಿದ್ದು ಶವವಾಗಿ ಅನ್ನೋದು ಮಾತ್ರ ನಿಜಕ್ಕೂ ದುರಂತ..

ಅನೇಕ ದಶಕಗಳಿಂದ ಬಳಲಿ ಬೆಂಡಾಗಿದ್ದ ಈ ಭಾಗದಲ್ಲಿ ಇದೀಗ ನೋಡ ನೋಡ್ತಿದಂತೆ ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿದ್ದವೆ, ಮತ್ತೊಂದು ಕಡೆ ರಾತ್ರೋ ರಾತ್ರಿ ಸಾವಿರಾರು ಎಕರೆ ತೆಂಗಿನ ತೋಟಗಳು ಮಳುಗಡೆಯಾಗಿ ಅಲ್ಲಿ ಬೆಳೆದಿದ್ದ ಈರುಳ್ಳಿ, ಜೋಳ, ನವಣೆ, ಸೇರಿದಂತೆ ಹತ್ತಾರು ಬೆಳೆಗಳು ರೈತರ ಕಣ್ಣೆದುರೆ ಕೊಚ್ಚಿ ಹೋಗಿವೆ. ಹಡಗಲು ಹಾಗೂ ಆಸಂದಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸೋ ಪ್ರಮುಖ ಎರಡು ಸೇತುವೆ ವೇದಾವತಿಯ ಅಬ್ಬರಕ್ಕೆ ಕೊಚ್ಚಿ ಹೋಗಿದ್ದು ಸೇತುವೆಗೆ ಅಳವಡಿಸಿದ್ದ ದೊಡ್ಡ-ದೊಡ್ಡ ಪೈಪ್ಗಳು ಕಿಲೋ ಮೀಟರ್ಗಟ್ಟಲೆ ತೇಲಿ ಹೋಗಿವೆ. ಈ ನಡುವೆ ಕೆಲವರು ಉಕ್ಕಿ ಹರಿಯುತ್ತಿರುವ ನೆರೆ ನೀರಲ್ಲಿ ಮೀನುಗಳನ್ನ ಹಿಡಿದು ಯುವಕರು ಖುಷಿಪಟ್ತಿದ್ದಾರೆ.

ಕಳೆದ 10 ವರ್ಷದಿಂದ ತನ್ನ ನೆಲೆಯೇ ಇಲ್ಲದಂತೆ ಕಾಣೆಯಾಗಿದ್ದ ವೇದಾವತಿ ನದಿ ಇದ್ದಕ್ಕಿದ್ದಂತೆ ಜೀವ ಪಡೆದು, ವೃದ್ಧೆಯ ಜೀವವನ್ನೂ ಬಲಿಪಡೆದು ನದಿ ಪಾತ್ರದ ಸಾವಿರಾರು ಎಕರೆ ರೈತರ ತೋಟಗಳನ್ನು ಮುಳುಗಿಸಿದ್ದಾಳೆ. ಸಿಕ್ಕ-ಸಿಕ್ಕ ಕಡೆ ನೀರು ನುಗ್ಗಿದ ಪರಿಣಾಮ ತೋಟಗಳಲ್ಲಿದ್ದ ಪಂಪ್ ಸೆಟ್ಗಳು, ರಾಶಿರಾಶಿ ತೆಂಗಿನ ಕಾಯಿ ನದಿ ಪಾಲಾಗಿದೆ. ಸದ್ಯ ಮಹಾ ಮಳೆಗೆ ಈ ಭಾಗದ ರೈತರು ಅಕ್ಷರಶಹಃ ನಲುಗಿ ಹೋಗಿದ್ದು ನಾವಂತೂ ಇಂತಾ ಮಳೆಯನ್ನ ಜೀವಮಾನದಲೇ ನೋಡಿಲ್ಲ. ಈ ತರಹದ ಮಳೆ ಬಂದ್ರೇನು ಬಿಟ್ರೇನೂ ಅಂತಾ ರೈತರು ಎಲ್ಲವನ್ನು ಕಳೆದುಕೊಂಡು ಕಣ್ಣೀರು ಹಾಕ್ತಿದ್ದಾರೆ. ಒಟ್ಟಿನಲ್ಲಿ ಮಳೆಗಾಗಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದ ಈ ಭಾಗದ ಜನತೆ ಮಳೆ ಬಾರದಿದ್ರೆ ಸಾಕಪ್ಪ ಅಂತಾ ವರುಣ ದೇವನಿಗೆ ಹಿಡಿ ಶಾಪ ಹಾಕ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights