“ಅಮೂಲ್ಯ ಲಿಯೋನಾಳನ್ನು ಎನ್‍ಕೌಂಟರ್ ಮಾಡಿದವರಿಗೆ 10 ಲಕ್ಷ ಬಹುಮಾನ”

ಪಾಕ್ ಪರ ಘೋಷಣೆ ಕೂಗಿ ನ್ಯಾಯಾಂಗ ಬಂಧನಕ್ಕೊಳಗಾದ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಮೂಲ್ಯ ಲಿಯೋನಾಳಿಗೆ ತಕ್ಕ ಶಿಕ್ಷೆ ವಿಧಿಸುವಂತೆ ಜೆಲ್ಲೆಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಅಮೂಲ್ಯ ಲಿಯೋನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಶ್ರೀರಾಮಸೇನೆ ತಾಲ್ಲೂಕು ಅಧ್ಯಕ್ಷ ಸಂಜೀವ್ ಮರಡಿ ಎಂಬುವರು ಪ್ರಚೋದನಾಕಾರಿ ಹೇಳಿಕೆ ನೀಡಿ, ವಿವಾದಕ್ಕೆ ಗುರಿಯಾಗಿದ್ದಾರೆ.

ಹೌದು… ಎನ್‍ಕೌಂಟರ್ ಮಾಡಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಶ್ರೀರಾಮಸೇನೆ ಮುಖಂಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾದ್ಯಮದೊಂದಿಗೆ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡುತ್ತಿದ್ದ ಮರಡಿ, ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಪರ ಯಾರೊಬ್ಬರೂ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು. ಜಾಮೀನು ಸಿಗಬಾರದೆಂದು ಆಗ್ರಹಿಸಿದರು.  ಒಂದು ವೇಳೆ ನ್ಯಾಯಾಲಯ ಅಮೂಲ್ಯಳಿಗೆ ಜಾಮೀನು ಕೊಟ್ಟರೆ ನಾವೇ ಎನ್‍ಕೌಂಟರ್ ಮಾಡಲು ಹಿಂದೆಮುಂದೆ ನೋಡುವುದಿಲ್ಲ. ಆಕೆಯನ್ನು ಯಾರಾದರೂ ಹತ್ಯೆ ಮಾಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.

ಪ್ರತಿಭಟನೆ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಅಮೂಲ್ಯ ಲಿಯೋನಾಳ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ದಹಿಸಿದರು.