AAP ದಿಗ್ವಿಜಯ :ದೆಹಲಿ ಜನರ ನಡುವೆ ಅಲೆದಾಡಿ ಅರ್ಥ ಮಾಡಿಕೊಂಡ ಈ ಗೆಲುವಿನ ಅನಾಟಮಿ

ಕಳೆದ ಬಾರಿ ಭರ್ಜರಿಯಾಗಿ ಗೆದ್ದ ಪಕ್ಷ ಆರಂಭದ ದಿನಗಳಲ್ಲಿ ಆಂತರಿಕ ಕಚ್ಚಾಟ, ಕೆಲವು ಪ್ರಮುಖ ನಾಯಕರ ಉಚ್ಚಾಟನೆ, ಜನರ ನಿರೀಕ್ಷೆಯ ಭಾರದಿಂದ ಕುಸಿಯಬೇಕಾಗಿತ್ತು. ಆದರೆ, ಇದೆಲ್ಲಾ ಸಮಸ್ಯೆಗಳನ್ನು ನಿವಾರಿಸಿ ಅರವಿಂದ ಕೇಜ್ರಿವಾಲ್ ಬಳಗ ಮತ್ತೆ ದೆಹಲಿಯ ಗದ್ದುಗೆ ಏರಿದ್ದು ಹೇಗೆ? ಗೌರಿ ಮೀಡಿಯಾ ತಂಡ ದೆಹಲಿಯನ್ನು ಸುತ್ತು ಹೊಡೆದಾಗ ಸಿಕ್ಕ ಸಾಕ್ಷ್ಯಗಳು ಇಲ್ಲಿವೆ.

ಇಡೀ ದೇಶವೇ ಕಾತರದಿಂದ ಎದುರು ನೋಡುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕೊನೆಗೂ ಎಲ್ಲರ ನಿರೀಕ್ಷೆಯಂತೆ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಹ್ಯಾಟ್ರಿಕ್ ಗೆಲುವಿನೊಂದಿಗೆ ಮೂರನೇ ಬಾರಿಗೆ ದೆಹಲಿ ಗದ್ದುಗೆಗೆ ಏರಿದೆ. ಈ ಮೂಲಕ ದ್ವೇಷ ರಾಜಕಾರಣದ ವಿರುದ್ಧ ಅಭಿವೃದ್ಧಿ ರಾಜಕಾರಣ ಗೆಲುವು ಸಾಧಿಸಿದಂತಾಗಿದೆ.

ಕಳೆದ 5 ವರ್ಷದ ಅಧಿಕಾರದ ಅವಧಿಯಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದ ಕೇಜ್ರಿವಾಲ್ ಅವರನ್ನು ಸೋಲಿಸಿಯೇ ತೀರಬೇಕು ಎಂಬ ಬಿಜೆಪಿ ಪಕ್ಷದ ಸರ್ವಪ್ರಯತ್ನದ ನಡುವೆಯೂ ಸತತ ಮೂರನೇ ಬಾರಿಗೆ ದೆಹಲಿಯ ಮತದಾರ ಆಮ್ ಆದ್ಮಿಗೆ ಜೈ ಎಂದಿದ್ದಾನೆ.

ಅಸಲಿಗೆ ಆಪ್ ಪಕ್ಷದ ವಿರುದ್ಧ ಜನಾಭಿಪ್ರಾಯ ಕ್ರೋಢಿಕರಿಸುವ ಸಲುವಾಗಿಯೇ ದೆಹಲಿಯಲ್ಲಿ ಕೋಮು ಧೃವೀಕರಣಕ್ಕೆ ಮುಂದಾಗಿದ್ದ ಕೇಸರಿ ಪಡೆ ತನ್ನ ಪಕ್ಷದ 300 ಸಂಸದರನ್ನು ಪ್ರಚಾರಕ್ಕಾಗಿ ರಾಜಧಾನಿಯ ರಸ್ತೆಗೆ ಇಳಿಸಿತ್ತು. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಬಿಜೆಪಿ ಆಡಳಿತವಿರುವ 10 ರಾಜ್ಯದ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಪ್ರಚಾರ ನಡೆಸಿದ್ದರು. ಆದರೂ, ಮತದಾರರ ಮನ ಗೆಲ್ಲಲು ಸಾಧ್ಯವಾಗಲಿಲ್ಲ. ಬಿಜೆಪಿ ಪಡೆಯ ಈ ಎಲ್ಲಾ ತಂತ್ರಗಳಿಗೆ ರಾಜಧಾನಿಯ ಜನ ಮಣೆ ಹಾಕಲಿಲ್ಲ ಎಂಬುದು ವಿಶೇಷ.

ಇನ್ನು ಕೇಂದ್ರದಲ್ಲೇ ನಾಯಕತ್ವದ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ದೆಹಲಿ ಚುನಾವಣಾ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು ಮಾತ್ರ ವಿಪರ್ಯಾಸ.

ಪರಿಣಾಮ ಅಂತಿಮ ಫಲಿತಾಂಶದಲ್ಲಿ ದೆಹಲಿಯ 70 ಸ್ಥಾನಗಳ ಪೈಕಿ ಆಮ್ ಆದ್ಮಿ 62 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರೆ, ಆರಂಭದಿಂದಲೂ ಆಪ್ ವಿರುದ್ಧ ತೊಡೆತಟ್ಟಿ ತೋಳು ಏರಿಸಿ ನಿಂತಿದ್ದ ಭಾರತೀಯ ಜನತಾ ಪಕ್ಷಕ್ಕೆ ದೆಹಲಿಯ ಮತದಾರ ಕರುಣಿಸಿದ್ದು ಕೇವಲ ಎಂಟು ಸೀಟುಗಳನ್ನು ಮಾತ್ರ.

ಈ ಮೂಲಕ ಬಿಜೆಪಿ ಪಾಲಿಗೆ ದೆಹಲಿ ಚುನಾವಣಾ ಫಲಿತಾಂಶ ಎಂಬುದು ಗರ್ವಭಂಗದ ಪ್ರಶ್ನೆಯಾದರೆ ಇನ್ನೂ ಒಂದು ಕಾಲದಲ್ಲಿ ದೆಹಲಿಯ ಅಧಿಕಾರದ ಗದ್ದುಗೆ ಮೇಲೆ ದಶಕಗಳ ಕಾಲ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಪಕ್ಷದ್ದು ಶೂನ್ಯ ಸಂಪಾದನೆಯಲ್ಲಿ ಸ್ಥಿರವಾದ ಓಟ.

2015ರಲ್ಲಿ ದೇಶದ ಎಲ್ಲೆಡೆ ನರೇಂದ್ರ ಮೋದಿಯ ಅಲೆ ಇತ್ತು. ಒಂದೊಂದೇ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುತ್ತಾ ಸಾಗಿತ್ತು. ಹೀಗಾಗಿ ದೆಹಲಿಯಲ್ಲೂ ಮೋದಿ-ಶಾ ಟೀಮ್ ಕಮಾಲ್ ಮಾಡಲಿದೆ ಎಂದೇ ರಾಜಕೀಯ ತಜ್ಞರು ವಿಶ್ಲೇಷಿಸಿದ್ದರು. ಆದರೆ, ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ರೂಪ ತಳೆದ ಆಮ್ ಅದ್ಮಿ ಅಚ್ಚರಿ ಎಂಬಂತೆ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವತಃ ಪ್ರಧಾನಿ ಮೋದಿಗೆ ಆಘಾತ ನೀಡಿದ್ದು ಸುಳ್ಳಲ್ಲ.

ಇಡೀ ದೇಶದಲ್ಲಿ ಗೆಲುವಿನ ನಾಗಾಲೋಟದಲ್ಲಿ ಮುಂದುವರೆದಿದ್ದ ಮೋದಿ-ಶಾ ಟೀಮ್ ಅನ್ನು ದೆಹಲಿಯ ಮತದಾರ ಮೂರು ಸ್ಥಾನಗಳಿಗೆ ಸೀಮಿತ ಮಾಡಿದ್ದ. ಆಗಲೂ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆದಿರಲಿಲ್ಲ ಎಂಬುದು ಉಲ್ಲೇಖಾರ್ಹ.

ಪ್ರಸ್ತುತ ಭಾರತೀಯ ರಾಜಕೀಯ ಮತ್ತು ಮತದಾನದ ವ್ಯವಸ್ಥೆಯಲ್ಲಿ ಮತದಾರರನ್ನು ಒಂದು ಬಾರಿಗೆ ಒಲಿಸಿಕೊಳ್ಳುವುದೇ ದುಸ್ಸಾಧ್ಯ. ಅಂತದ್ದರಲ್ಲಿ ಆಮ್ ಆದ್ಮಿ ಹಾಗೂ ಅರವಿಂದ ಕೇಜ್ರಿವಾಲ್ ಸತತ ಮೂರು ಬಾರಿ ಮತದಾರನನ್ನು ಓಲೈಸಿಕೊಂಡದ್ದು ಹೇಗೆ? ದೆಹಲಿಯಲ್ಲಿ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿದ್ದು ಹೇಗೆ? ಮೊದಲ ಚುನಾವಣೆಯಲ್ಲಿ ಕೇವಲ 27 ಸ್ಥಾನಗಳನ್ನು ಪಡೆದಿದ್ದ ಆಪ್ ಮೋದಿ-ಶಾ ಅಲೆಯಲ್ಲಿ 67 ಸ್ಥಾನಕ್ಕೆ ಜಿಗಿದಿದ್ದು ಹೇಗೆ? ಎಂಬುದು ಇದೀಗ ಇಡೀ ದೇಶವನ್ನು ಕಾಡುತ್ತಿರುವ ಮೂಲ ಪ್ರಶ್ನೆ.

ಪವಾಡಗಳು ಆಗುತ್ತವೆ ಅಂದುಕೊಂಡರೂ ಸಹ 70 ಸ್ಥಾನಗಳಲ್ಲಿ 67 ಗೆದ್ದ ಪಕ್ಷ ಆರಂಭದ ದಿನಗಳಲ್ಲಿ ಆಂತರಿಕ ಕಚ್ಚಾಟ, ಕೆಲವು ಪ್ರಮುಖ ನಾಯಕರ ಉಚ್ಚಾಟನೆ, ಜನರ ನಿರೀಕ್ಷೆಯ ಭಾರದಿಂದ ಕುಸಿಯಬೇಕಾಗಿತ್ತು. ಆದರೆ, ಇದೆಲ್ಲಾ ಸಮಸ್ಯೆಗಳನ್ನು ನಿವಾರಿಸಿ ಅರವಿಂದ ಕೇಜ್ರಿವಾಲ್ ಬಳಗ ಮತ್ತೆ ದೆಹಲಿಯ ಗದ್ದುಗೆ ಏರಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳನ್ನೂ ಎತ್ತಿಕೊಂಡು ಗೌರಿ ಮೀಡಿಯಾ ತಂಡ ದೆಹಲಿಯನ್ನು ಸುತ್ತು ಹೊಡೆದಾಗ ಸಿಕ್ಕ ಸಾಕ್ಷ್ಯಗಳು ಇಲ್ಲಿವೆ.

ಸಾಂಪ್ರದಾಯಿಕ ರಾಜಕೀಯ ನೆಲೆಗಟ್ಟಿಲ್ಲದೆ, ವೃತ್ತಿಪರ ರಾಜಕೀಯ ನಾಯಕರಿಲ್ಲದೆ ಹೊಸ ಅಲೆಯ ಮೇಲೆ ಸ್ಥಾಪಿತವಾದ ಆಮ್ ಆದ್ಮಿ ಪಕ್ಷ ದೆಹಲಿಯ ಮತದಾರರಲ್ಲಿ ಆರಂಭದಲ್ಲೇ ಒಂದು ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಮತದಾರರಿಗೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಆದರೆ, ಅಧಿಕಾರ ದೊರೆತ ಆರಂಭದ ದಿನಗಳಲ್ಲಿ ಕೇಂದ್ರದೊಂದಿಗಿನ ಗುದ್ದಾಟ, ಲೆಫ್ಟಿನೆಂಟ್ ಗೌವರ್ನರ್ ಜೊತೆಗಿನ ತಿಕ್ಕಾಟಗಳಲ್ಲೆ ಕೇಜ್ರಿವಾಲ್ ಟೀಮ್ ಕಾಲ ಕಳೆದಿದ್ದು ಸುಳ್ಳಲ್ಲ. ಇದು ಸಾಮಾನ್ಯವಾಗಿ ದೆಹಲಿ ಮತದಾರರಲ್ಲಿ ನಿರಾಶೆಯನ್ನುಂಟುಮಾಡಿತ್ತು. ಅದೇ ಸಂದರ್ಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ ಸೋಲು, ಗೋವಾದಲ್ಲಿ ದೊರೆತ ಹೀನಾಯ ಪರಾಜಯ ಪಕ್ಷದ ನಾಯಕರಿಗೆ ಎಚ್ಚರಿಕೆಯ ಗಂಟೆ ಬಾರಿಸಿತು.

ಇದರ ಜೊತೆಗೆ ಸುಪ್ರೀಂಕೋರ್ಟ್ ದೆಹಲಿ ಲೆಫ್ಟಿನೆಂಟ್ ಗೌವರ್ನರ್ ಜೊತೆಗಿನ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಸ್ಥಿರ ಆಡಳಿತ ನಡೆಸುವಂತೆ ಕೇಜ್ರಿವಾಲ್ ಸರ್ಕಾರಕ್ಕೆ ಬೀಸಿದ್ದ ಚಾಟಿ ಆಮ್ ಆದ್ಮಿ ಎಚ್ಚೆತ್ತು ನಡೆಯಲು ಸಹಕಾರಿಯಾಗಿತ್ತು.

ಅಲ್ಲಿಂದ ಆರಂಭವಾದ ಅರವಿಂದ ಕೇಜ್ರಿವಾಲ್ ಅವರ ಅಭಿವೃದ್ಧಿ ರಾಜಕೀಯದ ರೈಲು ಇನ್ನೂ ಓಡುತ್ತಲೇ ಇದೆ. ಇತ್ತ ಸಂಪೂರ್ಣ ರಾಜ್ಯವೂ ಅಲ್ಲದ, ಅತ್ತ ಕೇಂದ್ರಾಡಳಿತ ಪ್ರದೇಶವೂ ಅಲ್ಲದ ದೆಹಲಿಯಲ್ಲಿ ಆಪ್ ಮಾಡಿದ ಮೊದಲ ಕೆಲಸ ಅಧಿಕಾರಿಗಳ ವಿಶ್ವಾಸ ಗಳಿಸಿ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಾರಂಭಿಸಿದ್ದು.

ಮೊದಲು ನೀರಿನ ದರ ಇಳಿಸಿದ್ದಲ್ಲದೆ, ಶೇ.90ಕ್ಕೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ನೀರು ಒದಗಿಸಿದ್ದು. ಸರ್ಕಾರಿ ಶಾಲೆಗಳಿಗೆ ಕೈಹಾಕಿದ ಕೇಜ್ರಿವಾಲ್ ಟೀಮ್ ಕೇವಲ 2 ವರ್ಷಗಳಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಯ ಮಟ್ಟಕ್ಕೆ ತಂದು ನಿಲ್ಲಿಸಿದ್ದು, ಖಾಸಗಿ ಶಾಲೆಗಳೂ ನಾಚುವಂತೆ ಫಲಿತಾಂಶ ನೀಡಿದ್ದು ಕಡಿಮೆ ಸಾಧನೆ ಏನಲ್ಲ.

ದೆಹಲಿ ಸರ್ಕಾರಿ ಶಾಲೆಯೊಂದರ ಒಳಾಂಗಣ ಕ್ರೀಡಾಂಗಣ

ಪ್ರತಿ ವಾರ್ಡ್‍ಗಳಿಗೆ ಮೊಹಲ್ಲಾ ಕ್ಲಿನಿಕ್, 200 ಯೂನಿಟ್‍ವರೆಗೆ ವಿದ್ಯುತ್ ಬಳಕೆ ಉಚಿತವಾಗಿ ನೀಡಿದ್ದು, ಜೊತೆಗೆ ಮಹಿಳೆಯರಿಗೆ ಉಚಿತ ಸಾರಿಗೆ ಸೇವೆ ಒದಗಿಸಿದ್ದು ರಾಜಧಾನಿಯ ಮತದಾರನ ಅದರಲ್ಲೂ ಪ್ರಮುಖವಾಗಿ ಮಧ್ಯಮ ವರ್ಗದ ಜನರ ಮನ ಗೆಲ್ಲುವಲ್ಲಿ ನೆರವಾಯಿತು.

ಈ ಎಲ್ಲಾ ಕೆಲಸಗಳ ರಿಪೋರ್ಟ ಕಾರ್ಡ್ ಹಿಡಿದು ಮತ ಬೇಟೆಗೆ ಹೊರಟ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಚುನಾವಣಾ ಅಂಗಳದಲ್ಲಿ ಮತ ಸೆಳೆಯುವುದು ಕಷ್ಟವೇನಾಗಿರಲಿಲ್ಲ. ಆದರೆ, ಬಿಜೆಪಿ ಪಾಳಯದಿಂದ ಆಘಾತವೊಂದು ಕಾದಿತ್ತು.

ಮೊಹಲ್ಲಾ ಕ್ಲಿನಿಕ್

ಏಕೆಂದರೆ ಅಭಿವೃದ್ಧಿ ವಿಷಯಗಳಿಲ್ಲದೆ ದಶಕಗಳ ಕಾಲ ಕೇವಲ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದ ಬಿಜೆಪಿ ಪಡೆ ದೆಹಲಿಯಲ್ಲೂ ಅದೇ ಸೂತ್ರವನ್ನು ಮುಂದಿಟ್ಟು ಚುನಾವಣೆಗೆ ಅಣಿಯಾಗಿತ್ತು. ಇನ್ನೂ ನವ ರಾಜಕಾರಣದ ಚಾಣಕ್ಯರು ಎನಿಸಿಕೊಂಡಿದ್ದ ಮೋದಿ-ಶಾ ಪಡೆ ಕೇಜ್ರಿವಾಲ್ ಟೀಂನ ಎಲ್ಲಾ ಸಾಧನೆಗಳನ್ನು ಚುನಾವಣಾ ಗಿಮಿಕ್ ಎಂದು ಅಪಪ್ರಚಾರಕ್ಕೆ ಇಳಿದಿತ್ತು.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಅಪಪ್ರಚಾರಕ್ಕೆ ಪ್ರತ್ಯುತ್ತರ ನೀಡಲು ಆಯ್ದುಕೊಂಡ ಅಸ್ತ್ರವೇ ಗ್ಯಾರಂಟಿ ಕಾರ್ಡ್. ಮುಂದಿನ 5 ವರ್ಷಗಳ ಅವಧಿಯಲ್ಲಿ ಆಮ್ ಆದ್ಮಿ ಪಕ್ಷ ನೆರವೇರಿಸಲಿರುವ ಅಭಿವೃದ್ಧಿ ಕುರಿತ 10 ಅಂಶಗಳ ಗ್ಯಾರಂಟಿ ಕಾರ್ಡ್ ಎಂದು ಮತದಾರರ ಎದುರು ಮಹತ್ವದ ಕೆಲಸಗಳ ಪಟ್ಟಿಯನ್ನು ಇಟ್ಟಿತ್ತು ಕೇಜ್ರಿವಾಲ್ ಅಂಡ್ ಟೀಮ್.

ಇದರ ಜೊತೆ ಜೊತೆಗೆ ಅರವಿಂದ್ ಕೇಜ್ರಿವಾಲ್ ಕೈ ಹಿಡಿದಿದ್ದು TINA ಸೂತ್ರ. there is no alternative ದೆಹಲಿಗೆ ಅರವಿಂದ ಕೇಜ್ರಿವಾಲ್ ಹೊರತುಪಡಿಸಿ ಮತ್ಯಾರು ಪರ್ಯಾಯ ನಾಯಕರಿಲ್ಲ ಎಂಬುದನ್ನು ಮುನ್ನಲೆಗೆ ತಂದ ಆಮ್ ಆದ್ಮಿ ಪಕ್ಷ ಬಿಜೆಪಿಯನ್ನು ಈ ಬಲೆಯಲ್ಲಿ ಸಿಕ್ಕಿಸುವಲ್ಲಿ ಸಫಲವಾಗಿತ್ತು.

ಅಭಿವೃದ್ಧಿಯ ಕಾರ್ಯಸೂಚಿ ಇಲ್ಲದೆ, ಎದುರಾಳಿಗಳನ್ನು ಕಟ್ಟಿಹಾಕಲು ಬೇಕಾದ ಸೂಕ್ತ ಪಟ್ಟುಗಳೂ ಇಲ್ಲದೆ ಕೇವಲ ಕೋಮು ಧ್ರುವೀಕರಣದಿಂದಲೇ ನಾವು ಸರ್ಕಾರ ರಚಿಸುತ್ತೇವೆ ಎಂದು ನಿಂತ ಮೋದಿ-ಶಾ ಜೋಡಿಯ ಭಾರತೀಯ ಜನತಾ ಪಕ್ಷಕ್ಕೆ ಕೊನೆಗೂ ಈ ತಂತ್ರ ಕೈ ಹಿಡಿಯಲಿಲ್ಲ.

ಶಾಹಿನ್ ಬಾಗ್, ಜಾಮಿಯಾ ವಿಶ್ವವಿದ್ಯಾಲಯ ಸೇರಿದಂತೆ ದೆಹಲಿಯ ವಿವಿಧ ಕಡೆ ಸಿಎಎ-ಎನ್‍ಆರ್‍ಸಿ ಮತ್ತು ಎನ್ಪಿಆರ್ ವಿರುದ್ಧ ಕುಳಿತ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ಮಾಡಿದ ಬಿಜೆಪಿಯ ಅಪಪ್ರಚಾರ ಕಮಲ ಪಾಳಯಕ್ಕೇ ದೊಡ್ಡ ಹೊಡೆತ ನೀಡಿತು.

ದೆಹಲಿಯ ಶಾಹೀನ್ ಬಾಗ್

ಯಾವಾಗಲೂ ಎದುರಾಳಿಯ ದೌರ್ಬಲ್ಯದ ಮೇಲೆ ಮಾಧ್ಯಮಗಳ ಸಹಾಯದಿಂದ ಯುದ್ಧ ಮಾಡಿ ಗೆಲ್ಲುತ್ತಿದ್ದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಜೋಡಿಯ ಸಿದ್ಧ ಸೂತ್ರಕ್ಕೆ ಇಲ್ಲಿ ಸಿಕ್ಕಿದ್ದು ಕೇವಲ ಮುಖಭಂಗ ಮಾತ್ರ.

ಇನ್ನೂ ನಾಯಕತ್ವರಹಿತ ಅತಂತ್ರವಾಗಿರುವ ಐತಿಹಾಸಿಕ ಕಾಂಗ್ರೆಸ್ ಪಕ್ಷ ಮಾಜಿ ಮುಖ್ಯಮಂತ್ರಿ ದಿವಂಗತ ಶೀಲಾ ದೀಕ್ಷಿತ್ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಬೇಟೆಗೆ ಇಳಿದಿತ್ತಾದರೂ ಚುನಾವಣಾ ಕಣದಲ್ಲಿ ಅರೆಮನಸ್ಸಿನಿಂದಲೇ ಹೋರಾಡಿ ಕೊನೆಗೂ ನಿರೀಕ್ಷೆಯಂತೆ ಖಾತೆ ತೆರೆಯದೆ ತೆರೆಗೆ ಸರಿದಿದೆ.

ಅಭಿವೃದ್ಧಿ ಮಂತ್ರ ಚುನಾವಣಾ ತಂತ್ರಗಳನ್ನು ಸಮಾನವಾಗಿ ಮಿಶ್ರಣ ಮಾಡಿ ದೆಹಲಿ ಚುನಾವಣಾ ಕಣದಲ್ಲಿ ಭಿತ್ತಿದ ಆಮ್ ಆದ್ಮಿ ಪಕ್ಷ ಭರ್ಜರಿ ಫಸಲನ್ನು ತೆಗೆದಿದೆ. ಅವರದೇ ಆಟದಲ್ಲಿ ಅವರದೇ ತಂತ್ರ ಬಳಸಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಿರುವ ಅರವಿಂದ ಕೇಜ್ರಿವಾಲ್ ಬಳಗದ ಮುಂದೆ ಪ್ರಸ್ತುತ ದೊಡ್ಡ ಸವಾಲಿದೆ. ಕೊಟ್ಟ ಭರವಸೆ ಉಳಿಸಿಕೊಳ್ಳುವುದರ ಜೊತೆಗೆ ಫ್ಯಾಸಿಸಂಗೆ ಪರ್ಯಾಯ ಕಟ್ಟಬೇಕಾದ ಗುರುತರ ಜವಾಬ್ದಾರಿಯೂ ಆಮ್ ಆದ್ಮಿ ಪಕ್ಷದ ಮೇಲಿದೆ.

ರೈತರ ಬೆಲೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡುವ ಸ್ವಾಮಿನಾಥನ್ ವರದಿಯನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಸರ್ಕಾರ ಎಂಬ ಹೆಗ್ಗಳಿಕೆ ಕೇಜ್ರಿವಾಲ್ ಸರ್ಕಾರಕ್ಕೆ ಇದೆ. ಇನ್ನೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕೇಜ್ರಿವಾಲ್ ಸರ್ಕಾರ ಮಾಡಿರುವ ಕಮಾಲ್ ಪ್ರಶ್ನಾತೀತ.

ಹೀಗೆ ತನಗೆ ಸಿಕ್ಕ 5 ವರ್ಷದ ಅಧಿಕಾರದ ಅವಧಿಯಲ್ಲಿ ಕೇಜ್ರಿವಾಲ್ ಇಡೀ ದೇಶಕ್ಕೆ ಸುಸ್ಥಿರ ಅಭಿವೃದ್ಧಿಯ ಹೊಸ ಮಾದರಿಯನ್ನು ಕಟ್ಟಿಕೊಟ್ಟಿದ್ದರು. ಆದರೆ, ಕಳೆದ 5 ವರ್ಷದ ಅವಧಿಯ ಅಭಿವೃದ್ಧಿಯ ಅಡಿಪಾಯದ ಮೇಲೆ ಮುಂದಿನ 5 ವರ್ಷ ಕಟ್ಟಬಹುದಾದ ಮಹಲಿನ ಕುರಿತು ಇದೀಗ ಎಲ್ಲೆಡೆ ಕುತೂಹಲ ಮನೆ ಮಾಡಿದೆ.

ಅಲ್ಲದೆ, ಅಮಿತ್ ಶಾ-ಮೋದಿ ಅಲೆಯ ನಡುವೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ಝಂಡಾವನ್ನು ಎತ್ತರ ಎತ್ತರಕ್ಕೆ ಹಾರಿಸುತ್ತಿರುವ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ ಮಾದರಿಯನ್ನು ಇಡೀ ದೇಶ ಬೆರಗುಗಣ್ಣಿನಿಂದ ನೋಡುತ್ತಿದೆ. ಆದರೆ, ಯಾವ್ಯಾವ ರಾಜ್ಯಗಳಲ್ಲಿ ಯಾವ ಯಾವ ಪಕ್ಷವು ಈ ಹೊಸ ಮಾದರಿಯನ್ನು ತಮ್ಮ ರಾಜ್ಯಗಳಿಗೆ ಒಗ್ಗಿಸಿಕೊಂಡು ಅಭಿವೃದ್ಧಿ ರಾಜಕೀಯಕ್ಕೆ ಮುನ್ನುಡಿ ಬರೆಯುತ್ತಾರೋ? ಎಂಬುದನ್ನು ಕಾದು ನೋಡಬೇಕಾಗಿದೆ.

                                                                                                             ಸುನೀಲ್ ಶರಸಂಗಿ