ಸುಸ್ಥಿರ ಅಭಿವೃದ್ದಿ ಪಟ್ಟಿಯಲ್ಲಿ ಭಾರತಕ್ಕೆ ಭಾರೀ ಕುಸಿತ; ನೇಪಾಳ, ಶ್ರೀಲಂಕಕ್ಕಿಂತ ಹಿಂದೆ ಸರಿದ ಭಾರತ!

2015ರಲ್ಲಿ ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು 2030ರ ಕಾರ್ಯಸೂಚಿಯ ಅನ್ವಯ ಸುಸ್ಥಿರ ಅಭಿವೃದ್ಧಿಯನ್ನು 17  ಅಂಕಗಳಿಗೆ ಏರಿಸುವ ಗುರಿಗಳನ್ನು (ಎಸ್‌ಡಿಜಿ-ಸಸ್ಟೇನಬಲ್‍ ಡೆವೆಲಪ್‍ಮೆಂಟ್‍ ಗೋಲ್ಸ್) ಅಂಗೀಕರಿಸಿದ್ದವು. ಈ ಪಟ್ಟಿಯಲ್ಲಿ ಭಾರತದ ಶ್ರೇಣಿ ಕಳೆದ ವರ್ಷದಕ್ಕಿಂತ ಎರಡು ಸ್ಥಾನ ಹಿಂದಕ್ಕೆ ಕುಸಿದಿದ್ದು, 117ನೇ ಸ್ಥಾನಕ್ಕೆ ಇಳಿದಿದೆ.

‘ಭಾರತದ ಪರಿಸರ ವರದಿ 2021’ ಅನ್ನು ಬಹಿರಂಗಪಡಿಸಿದ್ದು, ಕಳೆದ ವರ್ಷ ಭಾರತದ ಶ್ರೇಯಾಂಕ 115 ಇದ್ದುದು ಈಗ ಎರಡು ಸ್ಥಾನಗಳಿಂದ ಕೆಳಗಿಳಿದಿದೆ. ಮುಖ್ಯವಾಗಿ ಹಸಿವನ್ನು ಕೊನೆಗೊಳಿಸುವುದು ಮತ್ತು ಆಹಾರ ಭದ್ರತೆಯನ್ನು ಸಾಧಿಸುವುದು (ಎಸ್‌ಡಿಜಿ 2), ಲಿಂಗ ಸಮಾನತೆ (ಎಸ್‌ಡಿಜಿ 5), ಸುಸ್ಥಿರ ಮೂಲಸೌಕರ್ಯಗಳನ್ನು ನಿರ್ಮಿಸುವುದು, ಒಳಗೊಳ್ಳುವ ಮತ್ತು ಸುಸ್ಥಿರ ಕೈಗಾರಿಕೀಕರಣವನ್ನು ಉತ್ತೇಜಿಸುವುದು ಮತ್ತು ನಾವೀನ್ಯತೆ (ಎಸ್‌ಡಿಜಿ 9) – ಗುರಿಗಳಲ್ಲಿ ದೇಶವು ಹಿಂದುಳಿದಿದೆ ಎಂದು ವರದಿ ತಿಳಿಸಿದೆ.

ಭಾರತವು ದಕ್ಷಿಣ ಏಷ್ಯಾದ ನಾಲ್ಕು ರಾಷ್ಟ್ರಗಳಾದ ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತ ಕೆಳಗಿದೆ ಎಂದು ವರದಿ ಹೇಳಿದೆ. ಭಾರತದ ಒಟ್ಟಾರೆ ಎಸ್‌ಡಿಜಿ ಅಂಕ 100 ರಲ್ಲಿ 61.9 ಆಗಿದೆ.

ಜಾರ್ಖಂಡ್‍ ಮತ್ತು ಬಿಹಾರಗಳು 2030ರ ವೇಳೆಗೆ ಎಸ್‌ಡಿಜಿಗಳನ್ನು ಸಾಧಿಸಲು ಕನಿಷ್ಠ ಸಿದ್ಧತೆ ಮಾತ್ರ ಹೊಂದಿವೆ. ಐದು ಎಸ್‌ಡಿಜಿಗಳಲ್ಲಿ ಜಾರ್ಖಂಡ್ ಹಿಂದುಳಿದಿದ್ದರೆ, ಬಿಹಾರ ಏಳು ಎಸ್‍ಡಿಜಿಗಳಲ್ಲಿ ಹಿಂದುಳಿದಿವೆ.

ಎಸ್‌ಡಿಜಿಗಳನ್ನು ಸಾಧಿಸುವ ಹಾದಿಯಲ್ಲಿ ಒಟ್ಟಾರೆ ಅತ್ಯುತ್ತಮ ಅಂಕಗಳನ್ನು ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೆಂದರೆ ಕೇರಳ, ಹಿಮಾಚಲ ಪ್ರದೇಶ ಮತ್ತು ಚಂಡೀಗಢ.

ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು 2015ರಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಅಂಗೀಕರಿಸಿದವು. ಇದು ಜನರಿಗೆ ಮತ್ತು ವಿಶ್ವಕ್ಕೆ ಶಾಂತಿ ಮತ್ತು ಸಮೃದ್ಧಿ ಕುರಿತ ನೀಲನಕ್ಷೆಯನ್ನು ಒದಗಿಸುತ್ತದೆ.

ಜಾಗತಿಕ ಪಾಲುದಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಎಲ್ಲಾ ದೇಶಗಳ ಕ್ರಮಕ್ಕಾಗಿ ಕರೆ ನೀಡುವ 17 ಎಸ್‌ಡಿಜಿಗಳಿವೆ, ಅಂದರೆ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮಾನದಂಡಗಳಾಗಿ ಅಂಗೀಕರಿಲಾಗಿದೆ.

ಎಸ್‌ಡಿಜಿ 1- ಬಡತನ ನಿರ್ಮೂಲನೆ, ಎಸ್‌ಡಿಜಿ 2-ಶೂನ್ಯ ಹಸಿವು, ಎಸ್‌ಡಿಜಿ 3-ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಎಸ್‌ಡಿಜಿ 4- ಗುಣಮಟ್ಟದ ಶಿಕ್ಷಣ, ಎಸ್‌ಡಿಜಿ 5- ಲಿಂಗ ಸಮಾನತೆ, ಎಸ್‌ಡಿಜಿ 6- ಶುದ್ಧ ನೀರು ಮತ್ತು ನೈರ್ಮಲ್ಯ, ಎಸ್‌ಡಿಜಿ 7 – ಕೈಗೆಟುಕುವ ಶುದ್ಧ ಇಂಧನ, ಎಸ್‌ಡಿಜಿ 8 – ಯೋಗ್ಯ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಎಸ್‌ಡಿಜಿ 9- ಉದ್ಯಮ, ನಾವೀನ್ಯತೆ ಮತ್ತು ಮೂಲಸೌಕರ್ಯ,

ಎಸ್‌ಡಿಜಿ 10 – ಕಡಿಮೆ ಅಸಮಾನತೆಗಳು, ಎಸ್‌ಡಿಜಿ 11- ಸುಸ್ಥಿರ ನಗರಗಳು ಮತ್ತು ಸಮುದಾಯಗಳು, ಎಸ್‌ಡಿಜಿ 12- ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ, ಎಸ್‌ಡಿಜಿ 13- ಹವಾಮಾನ ಕ್ರಮಗಳು, ಎಸ್‌ಡಿಜಿ 14- ಜಲಾಚರ ಜೀವಿಗಳನ್ನು ಕಾಪಾಡುವುದು, ಎಸ್‌ಡಿಜಿ 15- ಭೂಮಿಯ ಮೇಲಿನ ಜೀವವೈವಿಧ್ಯತೆ ರಕ್ಷಣೆ, ಎಸ್‌ಡಿಜಿ 16- ಶಾಂತಿ, ನ್ಯಾಯಕ್ಕಾಗಿ ಪ್ರಬಲವಾದ ಸಂಸ್ಥೆಗಳು ಮತ್ತು ಕೊನೆಯದಾಗಿ ಎಸ್‌ಡಿಜಿ 17- ಗುರಿಗಳಿಗಾಗಿ ಜಾಗತಿಕ ಸಹಭಾಗಿತ್ವವನ್ನು ಬಲಪಡಿಸುವುದು.

ಪರಿಸರ, ಆರೋಗ್ಯ, ಹವಾಮಾನ, ವಾಯುಮಾಲಿನ್ಯ, ನೈರ್ಮಲ್ಯ ಮತ್ತು ಕುಡಿಯುವ ನೀರು, ಪರಿಸರ ವ್ಯವಸ್ಥೆಯ ಸೇವೆಗಳು, ಜೀವವೈವಿಧ್ಯತೆ ಸೇರಿದಂತೆ ವಿವಿಧ ಸೂಚಕಗಳ ಮೇಲೆ ಲೆಕ್ಕಹಾಕಲಾದ ಪರಿಸರ ಕಾರ್ಯಕ್ಷಮತೆ ಸೂಚ್ಯಂಕ (ಇಪಿಐ)ದ ಪ್ರಕಾರ ಭಾರತವು 180 ದೇಶಗಳಲ್ಲಿ 168ನೆ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ‘ಯೋಗಿ ಹುಟ್ಟಿದ ದಿನ’ ಶುಭಾಷಯ ಕೋರದ ಮೋದಿ; ಏನಿದರ ಹಿನ್ನೆಲೆ? ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.