ದೆಹಲಿಯ ಅಕ್ವಿಲಾ ರೆಸ್ಟೋರೆಂಟ್ ನಲ್ಲಿ ಸೀರೆಗೆ ಅನುಮತಿ ಇಲ್ಲ : ಘಟನೆಯ ಸತ್ಯಾಸತ್ಯತೆ ಏನು?
ದೆಹಲಿಯ ಅಕ್ವಿಲಾ ರೆಸ್ಟೋರೆಂಟ್‌ನಲ್ಲಿ ಸೀರೆ ಉಟ್ಟ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಆದರೀಗ ಸಿಸಿಟಿವಿ ದೃಶ್ಯ ಹಾಗೂ ರೆಸ್ಟೊರೆಂಟ್ ನ ಪೋಸ್ಟ್ ನಿಂದ ನೈಜ ಘಟನೆ ಬೆಳಕಿಗೆ ಬಂದಿದೆ.
ಸೋಮವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ 16 ಸೆಕೆಂಡುಗಳ ಕ್ಲಿಪ್ ನಲ್ಲಿ, “ಮೇಡಂ, ನಾವು ಸ್ಮಾರ್ಟ್ ಕ್ಯಾಶುಯಲ್ ಅನ್ನು ಮಾತ್ರ ಅನುಮತಿಸುತ್ತೇವೆ ಮತ್ತು ಸೀರೆಗಳನ್ನು ಸ್ಮಾರ್ಟ್ ಕ್ಯಾಶುಯಲ್ ಎಂದು ಪರಿಗಣಿಸಲಾಗುವುದಿಲ್ಲ” ಎಂದು ರೆಸ್ಟೊರೆಂಟ್ ಸಿಬ್ಬಂದಿ ಹೇಳಿದ್ದಾರೆನ್ನುವ ವಿಡಿಯೋ ವೈರಲ್ ಆಗಿತ್ತು. ಫೇಸ್‌ಬುಕ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಅನಿತಾ ಚೌದರಿ ಎಂಬ ಮಹಿಳೆ ತಾನು ಸೀರೆಯುಟ್ಟಿದ್ದರಿಂದ ಭಾನುವಾರ ರೆಸ್ಟೋರೆಂಟ್‌ಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಶ್ರೀಮತಿ ಚೌದರಿ, ತಮ್ಮ ಫೇಸ್‌ಬುಕ್ ಪ್ರೊಫೈಲ್ ಪ್ರಕಾರ, ದೂರದರ್ಶನವೊಂದರಲ್ಲಿ ನಿರ್ದೇಶಕರಾಗಿದ್ದಾರೆ.
ಆಕೆಯ ಪೋಸ್ಟ್ ವೈರಲ್ ಆದ ನಂತರ ರೆಸ್ಟೋರೆಂಟ್ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಆದರೆ ಈ ಘಟನೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ. ಜೊತೆಗೆ ರೆಸ್ಟೊರೆಂಟ್ “ನಮ್ಮ ಭಾರತೀಯ ಸಂಪ್ರದಾಯವನ್ನು ನಮ್ಮ ರೆಸ್ಟೊರೆಂಟ್ ಗೌರವಿಸುತ್ತದೆ. ನಮ್ಮ ರೆಸ್ಟೊರೆಂಟ್ ಆಧುನಿಕದಿಂದ ಸಾಂಪ್ರದಾಯಿಕದವರೆಗೆ ಎಲ್ಲಾ ರೀತಿಯ ವಸ್ತ್ರ ತೊಟ್ಟು ಬರುವ ಅತಿಥಿಗಳನ್ನು ಗೌರವದಿಂದ ಸ್ವಾಗತಿಸುತ್ತದೆ” ಎಂದು ಹೇಳಿದೆ.
ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ರೆಸ್ಟೋರೆಂಟ್ ಈ ಘಟನೆಯನ್ನು ಸ್ಪಷ್ಟಪಡಿಸಿದೆ. ಶ್ರೀಮತಿ ಚೌದರಿ ಪೋಸ್ಟ್ ಮಾಡಿದ 10-ಸೆಕೆಂಡ್ ಕ್ಲಿಪ್ ಒಂದು ಗಂಟೆ ನಡೆದ ಸಂಭಾಷಣೆಯ ಭಾಗವಾಗಿದೆ ಎಂದು ರೆಸ್ಟೊರೆಂಟ್ ಹೇಳಿದೆ.
“ಅತಿಥಿ ಚೌದರಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು ಮತ್ತು ಅವರ ಹೆಸರಿನಲ್ಲಿ ಯಾವುದೇ ಮೀಸಲಾತಿ ಇಲ್ಲದ ಕಾರಣ ಅವರನ್ನು ಕಾಯುವಂತೆ ವಿನಮ್ರವಾಗಿ ವಿನಂತಿಸಲಾಯಿತು. ಆದರೆ, ನಾವು ಅವರನ್ನು ಎಲ್ಲಿ ಕೂರಿಸಬಹುದು ಎಂದು ಆಂತರಿಕವಾಗಿ ಚರ್ಚಿಸುತ್ತಿರುವಾಗ, ಅತಿಥಿ ರೆಸ್ಟೋರೆಂಟ್‌ಗೆ ಪ್ರವೇಶಿಸಿ ಸಿಬ್ಬಂದಿಯೊಂದಿಗೆ ಜಗಳವಾಡಲು ಮತ್ತು ನಿಂದಿಸಲು ಆರಂಭಿಸಿದರು. ನಂತರ ನಮ್ಮ ಕಲ್ಪನೆಗೂ ಮೀರಿ ಚೌದರಿ ನಡೆದುಕೊಂಡಿದ್ದಾರೆ. ಅವರು ನಮ್ಮ ಮ್ಯಾನೇಜರ್‌ನನ್ನು ಥಳಿಸಿದರು “ಎಂದು ರೆಸ್ಟೋರೆಂಟ್ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದೆ.
“ಘಟನೆಯ ಬಳಿಕ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ಅತಿಥಿಯನ್ನು ಹೊರಹೋಗುವಂತೆ ವಿನಂತಿಸಲು, ನಮ್ಮ ಗೇಟ್ ಮ್ಯಾನೇಜರ್ ಆಗಮಿಸಿದರು. ಈ ವೇಳೆ ಸಿಬ್ಬಂದಿಯೊಬ್ಬರು ಮಧ್ಯೆ ಪ್ರವೇಶಿಸಿ ಮ್ಯಾನೇಜರ್ ವೊಂದಿಗೆ ನಮ್ಮ ಸ್ಮಾರ್ಟ್ ಕ್ಯಾಶುಯಲ್ ಡ್ರೆಸ್ ಕೋಡ್ ಬಗ್ಗೆ ಮಾತನಾಡಿದ್ದಾರೆ. ಅಕ್ವಿಲಾ ಒಂದು ಸ್ವದೇಶಿ ಬ್ರಾಂಡ್ ಆಗಿದ್ದು, ತಂಡದ ಪ್ರತಿಯೊಬ್ಬ ಸದಸ್ಯರು ಹೆಮ್ಮೆಯ ಭಾರತೀಯರಾಗಿದ್ದಾರೆ. ಆದರೆ ಗೇಟ್ ಮ್ಯಾನೇಜರ್ ಸಿಬ್ಬಂದಿಯೊಂದಿಗೆ ಮಾತನಾಡಿದ್ದು ಸಿಬ್ಬಂದಿ ಡ್ರೆಸ್ ಕೋಡ್ ಬಗ್ಗೆ ಹೊರತಾಗಿ ಅತಿಥಿಗಳ ಡ್ರೆಸ್ ಕೋಡ್ ಬಗ್ಗೆ ಅಲ್ಲ” ಎಂದು ಸ್ಪಷ್ಟಪಡಿಸಿದೆ.
“ನಮ್ಮ ಕಂಪನಿಯ ನೀತಿಯಲ್ಲಿ ಎಲ್ಲಿಯೂ ನಾವು ಜನಾಂಗೀಯ ಉಡುಗೆಯಲ್ಲಿ ಪ್ರವೇಶವನ್ನು ನಿರಾಕರಿಸುತ್ತೇವೆ ಎಂದು ಹೇಳಿಲ್ಲ. ಹಾಗೊಂದು ವೇಳೆ ಮಾಡಿದ್ದು ಕಂಡು ಬಂದಲ್ಲಿ ನಮ್ಮ ಸಿಬ್ಬಂದಿಯ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕನ್ನು ನಾವು ಹೊಂದಿದ್ದೇವೆ. ನಾವು ಇಲ್ಲಿಯವರೆಗೆ ಸಿಬ್ಬಂದಿಗಳನ್ನು ಶಾಂತಿಯನ್ನು ಕಾಪಾಡಿಕೊಳ್ಳುವಂತ ನಿಟ್ಟಿನಲ್ಲಿ ಆಯ್ಕೆ ಮಾಡಿದ್ದೇವೆ. ಅದಕ್ಕೆ ಅನುಗುಣವಾಗಿ ನಮ್ಮ ಸಿಬ್ಬಂದಿಗಳನ್ನು ಪಾರದರ್ಶಕತೆ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುತ್ತೇವೆ. ತಮ್ಮದಲ್ಲದ ತಪ್ಪಿಗೆ ಗ್ರಾಹಕರ ಕ್ಷಮೆ ಕೇಳುವಂತೆ ಮಾಡಲಾಗಿದೆ “ಎಂದು ರೆಸ್ಟೋರೆಂಟ್ ಹೇಳಿದೆ.