ಮಹಿಷಾಸುರ ಯಾರು? ಮಹಿಷ ಮರ್ಧನ ಪುರಾಣದ ಹುನ್ನಾರವೇನು?

ಅಕ್ಟೋಬರ್ 5ರಂದು ಮಹಿಷ ದಸರಾ ನಡೆಸಿಯೇ ಸಿದ್ಧ, ಜಿಲ್ಲಾಡಳಿತ ಅನುಮತಿ ಕೊಡಲಿ ಬಿಡಲಿ ಎಂದು ಮೈಸೂರಿನಲ್ಲಿ ಮಹಿಷ ದಸರಾದ ಸಂಘಟಕರು ಘೋಷಿಸಿದ್ದಾರೆ. ಏಳೆಂಟು ವರ್ಷಗಳಿಂದ ಮಹಿಷ ದಸರಾದ ಆಚರಣೆಯನ್ನು ದೃಢತೆಯಿಂದ ಆಚರಿಸುತ್ತಿದ್ದಾರೆ. ಚಾಮುಂಡಿ ಬೆಟ್ಟದ ಮೇಲಿನ ಮಹಿಷನ ವಿಗ್ರಹಕ್ಕೆ ಮಾಲೆ ಹಾಕಿ ಅಲ್ಲಿಯೇ ಆಚರಿಸಲಾಗುತ್ತಿದ್ದ ಮಹಿಷ ದಸರಾಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದ ಅನುಮತಿ ನೀಡಲಾಗುತ್ತಿಲ್ಲ. ಮೈಸೂರಿನ ಎಂಪಿ ಪ್ರತಾಪ ಸಿಂಹ, ಒಂದು ಕೋಮುವಾದಿ ಸೇನೆಯ ಮುಖ್ಯಸ್ಥ ಸೇರಿದಂತೆ ಆರ್‌ಎಸ್‌ಎಸ್ ಪಡೆ ಈ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವುದರಿಂದ, ಅವರ ಆಜ್ಞಾ ಪರಿಪಾಲಕರಾದ ಬಿಜೆಪಿ ಸರ್ಕಾರ ದಸರಾಕ್ಕೆ ಕೆಲ ದಿನಗಳ ಮೊದಲೇ ಚಾಮುಂಡಿ ಬೆಟ್ಟ ಹಾಗೂ ಸುತ್ತುಲಿನ ವಲಯಕ್ಕೆ ಸೆಕ್ಷನ್ 144ರಡಿ ನಿಷೇಧಾಜ್ಞೆ ಹೇರುತ್ತಾ ಬಂದಿದೆ. ಪೊಲೀಸ್ ಪಹರೆ ಹಾಕಿ ಬೆಟ್ಟಕ್ಕೆ ಪ್ರವೇಶವನ್ನು ನಿರ್ಬಂಧಿಸುತ್ತಿದೆ. ಮೈಸೂರು ನಗರದಲ್ಲಿಯೇ ಮಹಿಷ ದಸರಾ ಆಚರಿಸುತ್ತೇವೆಂದರೂ ಅದಕ್ಕೂ ಅನುಮತಿ ಕೊಡಲಾಗುತ್ತಿಲ್ಲ. ಆದರೂ ಲೆಕ್ಕಿಸದೆ ವಿಶ್ವ ಮೈತ್ರಿ ಬುದ್ಧ ವಿಹಾರದಿಂದ ಮಹಿಷನ ಮೆರವಣಿಗೆ ಮಾಡಿ ಅಶೋಕಪುರಂನ ಡಾ. ಅಂಬೇಡ್ಕರ್ ಉದ್ಯಾನದಲ್ಲಿ ವಿಚಾರಸಂಕಿರಣ ಮೊದಲಾದವುಗಳ ಮೂಲಕ ಮಹಿಷ ದಸರಾವನ್ನು ಆಚರಿಸಲಾಗುತ್ತಿದೆ.

ಮೈಸೂರಿನ ದಲಿತ ಚಳವಳಿ ಮತ್ತು ಇತರ ಪ್ರಗತಿಪರರು ಸಂಘ ಪರಿವಾರದ ಬೆದರಿಕೆ, ಜಿಲ್ಲಾಡಳಿತದ ನಿಷೇಧಗಳನ್ನು ಎದುರಿಸಿ ಮಹಿಷ ದಸರಾವನ್ನು ಸಂಘಟಿಸುತ್ತಿದ್ದಾರೆ. ಮಹಿಷ ದಸರಾ ಆಚರಣೆಯ ಹಿಂದೆ ಸಂಘಟನಾ ಕ್ರಿಯಾಶೀಲತೆ ಮತ್ತು ಸಂಘರ್ಷ ಇರುವಂತೆಯೇ ವೈಚಾರಿಕ ಸಿದ್ಧತೆಯೂ ಇದೆ. ಸಾವಿರಾರು ವರ್ಷಗಳ ಯಜಮಾನಿಕೆಯ ಕುಸಂಸ್ಕೃತಿ ಹೇರಿದ ಸುಳ್ಳುಗಳ ರಾಶಿಗೆ ತೆತ್ತ ಮೆದುಳನ್ನು ಬಿಡುಗಡೆಗೊಳಿಸಿಕೊಂಡು ನಿಜವನ್ನು ಕಂಡುಕೊಳ್ಳುವ ಹಾಗೂ ಜನ ಸಮುದಾಯವನ್ನು ಕೂಡಾ ಈ ಹೇರಿಕೆಯಿಂದ ಬಿಡುಗಡೆಗೊಳಿಸುವ ತವಕ ಇದೆ. ಈ ಕಾರ್ಯಕ್ರಮ ನಡೆಯುತ್ತಿರುವುದು ಕೇವಲ ಏಳೆಂಟು ವರ್ಷಗಳಿಂದಾದರೂ ಅದಕ್ಕೆ ನೂರಾರು ವರ್ಷಗಳ ವೈಚಾರಿಕ ಚರಿತ್ರೆ ಇದೆ. ನಮ್ಮ ದೇಶದಲ್ಲಿ ಪ್ರಚುರಪಡಿಸಲಾಗಿರುವ ಪುರಾಣಗಳ ಒಳಹೊಕ್ಕು ನಿಜವನ್ನು ಹೊರಗೆಳೆಯುವ ಅನ್ವೇಷಣೆಯ ಹಾದಿಯಿದೆ.

ಜ್ಯೋತಿಬಾ ಫುಲೆಯವರ ’ಗುಲಾಮಗಿರಿ’ಯಿಂದ ಆರಂಭವಾಗಿ ಡಾ. ಅಂಬೇಡ್ಕರ್‌ರವರು ತಮ್ಮ ಹಲವಾರು ಕೃತಿಗಳ ಮೂಲಕ ಮಾಡಿದ ಅಧ್ಯಯನ, ವಿಶ್ಲೇಷಣೆಗಳಿಂದ ಈ ಹಾದಿ ಬೆಳೆಯಿತು. ಡಿಡಿ ಕೊಸಾಂಬಿಯವರ ’ಪುರಾಣ ಮತ್ತು ವಾಸ್ತವ’, ದೇಬೀಪ್ರಸಾದರ ’ಲೋಕಾಯತ’, ಇರ್ಫಾನ್ ಹಬೀಬರ ’ಭಾರತದ ಜನ ಇತಿಹಾಸ ಮಾಲಿಕೆ’, ರೋಮಿಲಾ ಥಾಪರ್ ಮೊದಲಾದ ಪ್ರಗತಿಪರ ಇತಿಹಾಸಕಾರರಿಂದ ಅದು ಮತ್ತಷ್ಟು ಗಟ್ಟಿಯಾಯಿತು. ತುಳಿತಕ್ಕೊಳಗಾದ ಜನ ಸಮುದಾಯದ ಸ್ವಾತಂತ್ರ್ಯ ಹೋರಾಟ ತನ್ನ ಆರಂಭದ ದಿನಗಳಿಂದಲೇ ಆಳುವವರ ವೈಚಾರಿಕ ಹೇರಿಕೆಯನ್ನು ಧಿಕ್ಕರಿಸುವ ಹಾಗೂ ತನ್ನದೇ ವೈಚಾರಿಕತೆಯನ್ನು ರೂಪಿಸಿಕೊಳ್ಳುವ ತುರ್ತನ್ನು ಇದು ಎತ್ತಿ ತೋರಿಸುತ್ತದೆ. ವಚನ ಚಳವಳಿಯಲ್ಲಿಯೂ ಪರ್ಯಾಯ ವೈಚಾರಿಕತೆ ಮತ್ತು ಆಚರಣೆಗಳ ಸಮುಚ್ಚಯವನ್ನು ಕಾಣಬಹುದು. ಅಂತಹ ವೈಚಾರಿಕತೆ ಅಧ್ಯಯನ, ಶೋಧಗಳ ಮೂಲಕ ಎಲ್ಲ ವೈಚಾರಿಕ ಸವಾಲುಗಳನ್ನು ಎದುರಿಸುವ ಗಟ್ಟಿತನವನ್ನು ಪಡೆದುಕೊಳ್ಳಬೇಕು.

ಮಹಿಷಾಸುರ, ಮಹಿಷಾಸುರ ಮರ್ದಿನಿ ಚಾಮುಂಡಿ ಎಂಬ ಜೊಳ್ಳು ಪುರಾಣಗಳು

ಮಹಿಷ ದಸರಾ ಎಂಬ ಪ್ರತಿ ಸಂಸ್ಕೃತಿಯ ಆಚರಣೆ ಎದುರಾಗಬೇಕಾದ ಮೊತ್ತ ಮೊದಲ ಪರಿಕಲ್ಪನೆ ಮಹಿಷಾಸುರ ಎಂಬ ಸಂಯುಕ್ತ ಪದದ್ದು. ಮಹಿಷ ಅಸುರನೇ? ಅಸುರೆಂದರೆ ಯಾರು? ಮಹಿಷ ಎಂಬ ಪದದ ಅರ್ಥ, ಅದರ ಮೂಲ ಏನು? ಎಂಬ ಪ್ರಶ್ನೆಗಳು ಇದರಿಂದ ಉದ್ಭವಿಸುತ್ತವೆ. ಈ ಪ್ರಶ್ನೆಗಳಿಗೆ ಗಟ್ಟಿ ಆಧಾರಗಳ ಅಡಿಪಾಯದ ಮೇಲೆ ಪೌರಾಣಿಕ ಕಲ್ಪನೆಗಳಿಗೆ ಸಮರ್ಪಕವಾಗಿ ಎದುರಾಗಬಹುದಾದ ಉತ್ತರ ನೀಡಬೇಕು.

ಮಹಿಷನ ಮಧನಕ್ಕೆ ಆಧಾರವೇ ಅವನು ಅಸುರ ಎಂದು ಬಿಂಬಿಸಲಾಗಿರುವುದು. ಮಹಿಷ ದಸರಾದ ಆಚರಣೆಯನ್ನು ಆರಂಭಿಸಿದವರೆಲ್ಲ ಈ ಅಸುರ ಎಂಬ ಚಿತ್ರಣವನ್ನೇ ಪೂರ್ಣವಾಗಿ ತಳ್ಳಿ ಹಾಕಿದ್ದಾರೆ. ಭಾರತವನ್ನು ಪ್ರವೇಶಿಸಿದ ಆರ್ಯರು ಇಲ್ಲಿ ಮೂಲ ನಿವಾಸಿಗಳಾಗಿ ವಾಸಿಸುತ್ತಿದ್ದವರನ್ನೆಲ್ಲ ಅಸುರರನ್ನಾಗಿ ಬಿಂಬಿಸಿದ್ದಾರೆ. ಅದರ ಭಾಗವಾಗಿ ಮಹಿಷ ಅಸುರ ಎಂದು ಕತೆ ಕಟ್ಟಿದ್ದಾರೆ. ಅಸುರರೆಂದು ಹೆಸರಿಡುವುದೇ ಅವರನ್ನು ಕೊಲ್ಲಲು ನೆಪವಾಗಿ ಎಂಬುದು ದಲಿತ ಚಳವಳಿಯ ವಾದ.

ಮಹಿಷಾಸುರ ಯಾರು? ಕೋಣನ ಬಲಿಯ ಮೇಲೆ ಮಹಿಷ ಮರ್ಧನ ಪುರಾಣದ ಹೇರಿಕೆಯೇ?

ಪುರಾಣಗಳು, ರಾಮಾಯಣ, ಮಹಾಭಾರತಗಳಲ್ಲಿ ಹೇರಳವಾಗಿ ಅಸುರ, ರಾಕ್ಷಸ, ದಾನವ, ದೈತ್ಯ ಎಂಬ ಪದಗಳನ್ನು ಸಮಾನಾರ್ಥಕವಾಗಿ ಬಳಸಿದ್ದಾರೆ. ಎಲ್ಲ ದೇವತೆಗಳ ಮುಖ್ಯ ಕರ್ತವ್ಯವೇ ಇವರ ನಾಶ. ಅತ್ಯಂತ ಹೆಚ್ಚು ಜನಮನವನ್ನು ಹೊಕ್ಕಿರುವ ರಾಮಾಯಣದ ತಿರುಳೇ ಲಕ್ಷಾಂತರ ಅಸುರರ, ರಾಕ್ಷಸರ ನಾಶ. ರಾವಣ ಅವರಲ್ಲಿ ಮುಖ್ಯನಾದವನು. ವಿಷ್ಣು ದಶಾವತಾರವೆತ್ತಿದ್ದೇ ಅಸುರರ ಕೊಲೆಗಾಗಿ. ದುರ್ಗೆ, ಕಾಳಿ, ಚಾಮುಂಡಿ ಮೊದಲಾದ ದೇವಿಯರಿಗೂ ಅಸುರ ಸಂಹಾರಕ್ಕಾಗಿಯೇ ಅವತಾರವೆತ್ತಿದವರು.

ಈ ಅಸುರ ಎಂಬ ಪದದ ಅರ್ಥ ಏನು?

ವೇದಗಳ ಪ್ರಕಾರ ಅಸುರ ಎಂದರೆ ಬಲಶಾಲಿ, ಸಮರ್ಥ ಎಂದರ್ಥ. ಋಗ್ವೇದದಲ್ಲಿ ಅಸುರ, ಅಸುರೀ, ಅಸುರತ್ವ ಎಂಬ ಪದಗಳು 88 ಬಾರಿ ಪ್ರಸ್ತಾಪವಾಗಿದೆ ಎಂದು ಪಿ.ಎನ್ ಭಾರ್ಗವ ಎಂಬ ವಿದ್ವಾಂಸರು ಲೆಕ್ಕಿಸಿದ್ದಾರೆ. ಈ ಪದಗಳು ವರುಣ, ಇಂದ್ರ, ಅಗ್ನಿ ಮೊದಲಾದ ದೇವತೆಗಳನ್ನು ಹೊಗಳಲು ಬಳಸಲಾಗಿದೆ ಎಂಬುದು ವಿಶೇಷ. ಅಗ್ನಿಯನ್ನು 12 ಬಾರಿ, ವರುಣನ ಬಗ್ಗೆ 10, ಇಂದ್ರನ ಬಗ್ಗೆ 9 ಬಾರಿ, ರುದ್ರನನ್ನು 6 ಬಾರಿ ಸ್ತುತಿಸಲು ಬಳಸಲಾಗಿದೆ. ಅಸುರನಂತಹ ಮಗನನ್ನು ಕೊಡು ಎಂದು ಪ್ರಾರ್ಥಿಸುವ ಸಂದರ್ಭ ಕೂಡಾ ಇದೆ. ವೈದಿಕ ಆರ್ಯರು ಭಾರತಕ್ಕೆ ಪ್ರವೇಶಿಸುವ ಮೊದಲು ಇರಾನಿನಲ್ಲಿ ಸ್ವಲ್ಪ ಕಾಲ ತಂಗಿದ್ದಾಗ ಈ ಪದ ದೇವತೆ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಇರಾನಿನ ವೇದದ ಸಮಕಾಲೀನ ಗ್ರಂಥ ಜೆಂದ್ ಅವೆಸ್ತಾದಲ್ಲಿ ಅಹುರಾ ಎಂಬ ಪದ ಅಲ್ಲಿಯ ಪ್ರಧಾನ ದೇವತೆಯಾಗಿ ಬಳಕೆಯಾಗಿದೆ. ಅದರಲ್ಲಿ ಅಸುರ ಎಂದರೆ ಬಲಶಾಲಿ ಮಾತ್ರವಲ್ಲ ಅಸುರ ಮೇಧಾ ಎಂದರೆ ಬುದ್ಧಿಶಾಲಿ ಕೂಡಾ ಎಂದು. ಸಿರಿಯಾ ಎಂಬ ದೇಶದ ಹೆಸರನ್ನು ಕೇಳಿರಬಹುದು. ಅರಬ್ ಪ್ರದೇಶದ ಭಾಗವಾದ ಇದು ಮೊದಲು ಅಸ್ಸೀರಿಯಾ ಎಂಬ ಸಾಮ್ರಾಜ್ಯದ ಭಾಗವಾಗಿತ್ತು. ಅಸ್ಸೀರಿಯಾ ಎಂಬ ಪದವೇ ಅಸುರ ಪದದ ಮೂಲದ್ದು.

ಆದರೆ ಇರಾನಿನಿನ ಆರ್ಯರಿಂದ ಪ್ರತ್ಯೇಕಗೊಂಡು ಹಲವು ಆರ್ಯರ ಗುಂಪುಗಳು ಭಾರತಕ್ಕೆ ಬಂದ ಮೇಲೆ ಇರಾನಿನ ಆರ್ಯರಿಗೂ ಇವರಿಗೂ ಶತ್ರುತ್ವ ಬೆಳೆಯಿತು. ಅದರ ಫಲವಾಗಿ ಅಸುರ ಎಂಬ ಇರಾನಿನ ದೇವರು ಕೂಡಾ ಇವರಿಗೆ ಶತ್ರುವಾಗಿಬಿಟ್ಟ. ಅದಕ್ಕೆ ವಿರುದ್ಧವಾಗಿ ಇರಾನಿನ ಆರ್ಯರಿಗೆ ಭಾರತದ ಆರ್ಯರ ದೇವ ಶತ್ರುವಾಗಿಬಿಟ್ಟ. ನೋಡಿ ಹೇಗಿದೆ. ಹಾಗೆಯೇ ವಿಷ್ಣು ಪುರಾಣದ ಪ್ರಕಾರ ರಾಕ್ಷಸ ಎಂದರೆ ರಕ್ಷಿಸುವವನು ಎಂದು.

ಆದರೆ ಪುರಾಣಗಳ ಕಾಲದಲ್ಲಿ ಅಸುರ, ರಾಕ್ಷಸ ಎಂಬೆರಡೂ ಪದಗಳು ಶತ್ರುಗಳು ಎಂಬ ಅರ್ಥವನ್ನು ವ್ಯಾಪಕವಾಗಿಸಿದೆ. ಪುರಾಣಗಳ ಪ್ರಕಾರವೇ ಯಾರಿಗೆಲ್ಲ ಅಸುರ ಎಂದು ಹೆಸರಿಡಲಾಗಿದೆಯೋ ಅವರೆಲ್ಲರೂ ಬಲಶಾಲಿಗಳು. ಇಂದ್ರನನ್ನು, ಅವನ ದೇವತಾ ಪಡೆಯನ್ನೆಲ್ಲ ಮಣ್ಣು ಮುಕ್ಕಿಸಿದವರು. ಅವನು ಮತ್ತು ದೇವತೆಗಳೆಲ್ಲ ’ಕಾಪಾಡಿ, ಕಾಪಾಡಿ’ ಎಂದು ಅತ್ತುಕೊಂಡು ವಿಷ್ಣುವಿನ ಮತ್ತಿತರ ದೇವರುಗಳ ಬಳಿ ಓಡಿ ಹೋಗುವಂತೆ ಮಾಡಿದವರು.

ಈ ಮೇಲಿನ ಅಂಶಗಳಿಗಿಂತ ಮುಖ್ಯವಾದ ಮತ್ತು ವಿಶೇಷವಾದ, ಆದರೆ ಸಾಮಾನ್ಯವಾಗಿ ಗಮನ ಹರಿಸದ ಸಂಗತಿಯೊಂದಿದೆ.

ಅಸುರ, ರಾಕ್ಷಸರೆಂದು ಹೆಸರಿಸುವ, ಅವರನ್ನು ಕೊಲ್ಲುವ ಪ್ರಸಂಗಗಳು ವಿಪರೀತವಾಗಿದ್ದು, ಆರ್ಯರು ತಾವು ಮೊದಲು ಪಸರಿಸಿದ ಗಂಗಾ ನದೀ ಬಯಲಿನ ಪ್ರದೇಶಗಳ ಹೊರಗಿನ ವಿಶಾಲ ಭಾರತವನ್ನು ಮತ್ತು ಅಲ್ಲಿನ ಜನರನ್ನು ಅಧೀನಪಡಿಸಿಕೊಳ್ಳುವ ಪ್ರಯತ್ನದಲ್ಲಿ. ಈ ವಿಶಾಲ ಪ್ರದೇಶಗಳಲ್ಲಿ ಆರ್ಯರು ಇಲ್ಲಿಗೆ ಬರುವ ಮೊದಲೇ ಹಲವು ಸಮುದಾಯಗಳು ಹತ್ತಾರು ಸಾವಿರ ವರ್ಷಗಳಿಂದ ವಾಸಿಸುತ್ತಿದ್ದರು. ದ್ರಾವಿಡ, ಮಂಗೋಲಿಯನ್ ಸಮುದಾಯಗಳು ಇದರಲ್ಲಿ ಮುಖ್ಯ ಭಾಗ. ಗಂಗಾ ನದೀ ಬಯಲನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಆ ಆಕ್ರಮಣಗಳಲ್ಲಿ ಆರ್ಯರೇ ನೇರವಾಗಿ ಯುದ್ಧದಲ್ಲಿ ಪಾತ್ರ ವಹಿಸಿದ್ದರು. ಆದರೆ ಗಂಗಾ ನದಿ ಬಯಲಿನ ಹೊರಗೆ ಆರ್ಯರು ಆಕ್ರಮಣಗಳಲ್ಲಿ, ಯುದ್ಧಗಳಲ್ಲಿ ಭಾಗವಹಿಸದೆ ಬೇರೆಯವರನ್ನು ಬಳಸಿ ಆಕ್ರಮಣ ಮಾಡಿ ಆ ಪ್ರದೇಶಗಳು ಮತ್ತು ಅಲ್ಲಿನ ಜನರನ್ನು ಅಧೀನಕ್ಕೊಳಪಡಿಸಿಕೊಂಡರು.

ರಾಮಾಯಣದ ಪ್ರಕಾರ ವಿಶಾಲ ಭಾರತವನ್ನು ಆಕ್ರಮಿಸಿಕೊಳ್ಳಲು ರಾಮ, ಲಕ್ಷ್ಮಣರು ಮಾತ್ರ ಆರ್ಯ ಸಮುದಾಯದಿಂದ ಸಾಕಾಯಿತು. ಏಕೆಂದರೆ ಅವರು ಆರ್ಯೇತರ ಸಮುದಾಯಗಳ ಕೆಲವರನ್ನು ವಾನರರೆಂದು ಮತ್ತೆ ಕೆಲವರನ್ನು ರಾಕ್ಷಸರೆಂದು ವಿಭಜಿಸಿದರು. ಅವರಲ್ಲೂ ಸುಗ್ರೀವ, ಹನುಮಂತರನ್ನು, ವಿಭೀಷಣರುಗಳನ್ನು ಸೃಷ್ಟಿಸಿಕೊಂಡರು. ಮಹಾಭಾರತದಲ್ಲಿ ಎರಡು ಆರ್ಯ ವಂಶಗಳ ನಡುವಣ ಆಸ್ತಿ ಕಲಹಕ್ಕೆ ಇಡೀ ಭಾರತದ ಹಲವು ಜನ ಸಮುದಾಯಗಳು, ಬುಡಕಟ್ಟುಗಳು ಆ ಕಡೆ, ಈ ಕಡೆ ಎಂದು ವಿಭಜಿತವಾಗಿ ಸೇರಿಕೊಂಡರು. ಇದಕ್ಕಾಗಿ ವಿವಿಧ ಜನ ಸಮುದಾಯಗಳ ನಡುವೆ ಪ್ರಮುಖರಾದವರನ್ನು, ಬಲಶಾಲಿಗಳಾದವರನ್ನು ಅಸುರರು, ರಾಕ್ಷಸರೆಂದು ಮಾತ್ರವಲ್ಲ ಅವರು ಕ್ರೂರಿಗಳು, ಅನೀತಿವಂತರು ಎಂದು ಬಿಂಬಿಸಿದರು. ಆ ಸಮುದಾಯಗಳ ಸಾಮಾನ್ಯ ಜನರನ್ನು ಅವರ ನಾಯಕರಿಂದ ದೂರಮಾಡಲು ಅದನ್ನು ಬಳಸಿಕೊಂಡರು.

ಮಹಿಷ ಎಂದರೆ ಯಾರು?

ಇದು ಮೈಸೂರು ನಗರ, ಸಂಸ್ಥಾನದ ಹೆಸರಿಗೆ ಕೂಡಾ ಸಂಬಂಧಿಸಿದೆ. ಆದರೆ ಈ ಅಂಶದ ಬಗ್ಗೆ ಹೆಚ್ಚು ಆಕರಗಳು, ಆಧಾರಗಳಿಲ್ಲ. ಆದ್ದರಿಂದ ಹೆಚ್ಚು ಶೋಧ ಮತ್ತು ಚರ್ಚೆ ಅಗತ್ಯವಿದೆ. ಲಭ್ಯವಿರುವ ಆಕರಗಳಿಂದ ನಡೆದಿರುವ ಚರ್ಚೆಗಳನ್ನು ಗಮನಿಸೋಣ.

ಮಹಿಷ ಎಂದರೆ ಎಲ್ಲರಿಗೂ ಗೊತ್ತಿರುವಂತೆ ಕೋಣ. ಮನುಷ್ಯನನ್ನು ಸೂಚಿಸುವುದಿಲ್ಲ. ಈ ಪ್ರದೇಶಕ್ಕೆ ಮಹಿಷನ ಹೆಸರು ಅಂಟಿಕೊಂಡಿದೆ. ಅದಕ್ಕೆ ಕೆಲ ಪ್ರಾಚೀನ ಆಧಾರಗಳಿವೆ. ಅದನ್ನು ಷ. ಶೆಟ್ಟರ್ ವಿವಿಧ ಮೂಲಗಳಿಂದ ಸಂಗ್ರಹಿಸಿ ಮಂಡಿಸಿದ್ದಾರೆ. ಶ್ರೀಲಂಕಾದ ಬೌದ್ಧ ಸಾಹಿತ್ಯವಾದ ಮಹಾವಂಸದಲ್ಲಿ ಹೇಳಲ್ಪಟ್ಟ ಮಹಿಷ ಮಂಡಲ, ದೀಪವಂಸದಲ್ಲಿ ಹೇಳಲಾದ ಮಹಿಸ ಎಂಬುದು ಯಾವ ಪ್ರದೇಶವೆಂದು ಇತಿಹಾಸಕಾರರಲ್ಲಿ ದೀರ್ಘ ಕಾಲ ಚರ್ಚೆ ನಡೆದಿತ್ತು. ನಂತರ ಶಂಗಂ ಕಾಲದ ಸಾಹಿತ್ಯದ ಅಧ್ಯಯನದಲ್ಲಿ ಕಂಡುಬಂದ ಸಂಗತಿ ಮತ್ತು ಗುಲ್ಬರ್ಗ ಜಿಲ್ಲೆಯ ಸನ್ನತಿಯ ಬಳಿಯ ಕನಗನಹಳ್ಳಿಯ ಸ್ತೂಪದಲ್ಲಿ ಸಿಕ್ಕ ಶಾಸನಗಳು ಈ ಬಗೆಗಿನ ವಿವಾದವನ್ನು ಕೊನೆಗೊಳಿಸಲು ನೆರವಾಗಿವೆ. ಶಂಗಂ ಕಾಲದ ’ಅಹನಾನೂರು’ ಸಂಕಲನದ ಕವಿಗಳು ತಮಿಳುನಾಡಿನ ಉತ್ತರದ ಜನರು ವಾಸಿಸುವ ಪ್ರದೇಶವನ್ನು ಎರುಮೈಯ್ಯೂರು, ಎರುಮೈಕುಡುನಾಡು, ಎರುಮೈ ನಲ್ನಾಡು ಎಂದು ಕರೆದಿದ್ದಾರೆ. ಇದು ಎಮ್ಮೆ ಎಂಬ ದ್ರಾವಿಡ ಪದದ ಬಳಕೆಯಿಂದ ಬಂದದ್ದು ಮತ್ತು ತಮಿಳುನಾಡಿನ ಉತ್ತರದ ಮೈಸೂರು ಸುತ್ತ ಮುತ್ತಲಿನ ಪ್ರದೇಶ ಅದು ಎಂದು ಸೂಚಿತವಾಗುತ್ತದೆ.

ಕನಗನಹಳ್ಳಿಯ ಬೌದ್ಧ ಸ್ತೂಪದಲ್ಲಿನ ಆರು ಶಾಸನಗಳು ಮಹೀಸಕ, ಮಾಹಿಸಕೆ ಎಂಬ ಪ್ರದೇಶದವರು ಕೊಟ್ಟ ದಾನಗಳನ್ನು ಉಲ್ಲೇಖಿಸುತ್ತವೆ. ಅದರಲ್ಲಿ ಕೆಲವು ಮಹೀಸಕ ಪ್ರದೇಶದ ತೋಡುಪಸಾಕ, ತೋಡಕಾಡ, ತೋಡ ಕುಲಸ ಎಂಬ ಹೆಸರುಗಳನ್ನು ಹೇಳಿವೆ. ಇದವು ಮಹೀಸಕ ಎಂಬ ಪ್ರದೇಶ ಯಾವುದೆಂಬುದನ್ನು ಗುರುತಿಸಲು ಇಂಬು ಕೊಡುತ್ತವೆ. ಏಕೆಂದರೆ ತೋಡರೆಂಬ ಬುಡಕಟ್ಟು ನೀಲಗಿರಿಯ ಬೆಟ್ಟವಾಸಿಗಳು.

ಇದರಿಂದಾಗಿ ಬೌದ್ಧ ಸಾಹಿತ್ಯದಲ್ಲಿ ಸೂಚಿತವಾದ ಮಹೀಸಕ ಎಂಬುದು ನೀಲಗಿರಿಯ ಸುತ್ತಮುತ್ತಲ ಪ್ರದೇಶ ಎಂಬುದು, ಅದರ ಸ್ವಲ್ಪ ಉತ್ತರಕ್ಕಿರುವ ಮೈಸೂರು ಈ ಪ್ರದೇಶಕ್ಕೆ ಸೇರುತ್ತದೆ ಎಂಬುದು ಸ್ಪಷ್ಟವಾಗುತ್ತದೆ.

ಹೀಗೆ ಶಂಗಂ ಸಾಹಿತ್ಯ ಹಾಗೂ ಕನಗನಹಳ್ಳಿಯ ಶಾಸನಗಳು ಮಹಿಷ ಮಂಡಲವೆಂದರೆ ಮುಂದೆ ಮಹಿಷೂರಾಗಿ ಈಗ ಮೈಸೂರಾಗಿರುವ ಪ್ರದೇಶ ಎಂದು ಸ್ಪಷ್ಟವಾಗುತ್ತದೆ. ಈ ಪ್ರದೇಶಕ್ಕೆ ಅಶೋಕನ ಕಾಲದಲ್ಲಿ ಬೌದ್ಧ ಸಂಘದಿಂದ ಧರ್ಮ ಪ್ರಚಾರಕ್ಕೆ ಶ್ರಮಣರನ್ನು ಕಳುಹಿಸಲಾಗಿತ್ತು. ಅದರ ಫಲವಾಗಿ ಹಲವರು ಈ ಪ್ರದೇಶದಲ್ಲಿ ಬೌದ್ಧರಾಗಿ ದೂರದ ಕನಗನಹಳ್ಳಿಯ ಸ್ತೂಪಕ್ಕೆ ಕೊಡುಗೆಗಳನ್ನು ಕೊಟ್ಟಿದ್ದರು ಎಂಬುದೂ ತಿಳಿಯಬರುತ್ತದೆ.

ಮಹಿಷ ಮಂಡಲಕ್ಕೆ ಈ ಹೆಸರು ಬರಲು ಕಾರಣವೇನೆಂಬ ಸೂಚನೆಯೂ ಮೇಲಿನ ಆಕರಗಳಿಂದ ದೊರೆಯುತ್ತದೆ. ಶಂಗಂ ಸಾಹಿತ್ಯದಲ್ಲಿ ಹೇಳಿರುವಂತೆ ಇದು ಎಮ್ಮೆಗಳ ಊರು, ಎಮ್ಮೆಗಳ ನಲ್ನಾಡು. ಅದರಿಂದಾಗಿಯೇ ಇದು ಮಹಿಷ ಮಂಡಲ.

ಎಮ್ಮೆ, ಕೋಣಗಳಿಂದಾಗಿಯೇ ಈ ಪ್ರದೇಶಕ್ಕೆ ಮಹಿಷ ಮಂಡಲ, ಮಹಿಷೂರು ಎಂದು ಹೆಸರು ಬಂದಿತೆನ್ನುವುದಕ್ಕೆ ಮತ್ತೂ ಹಲವು ಆಧಾರಗಳಿವೆ.

ಮೇಲೆ ಉಲ್ಲೇಖಿಸಲಾದ ನೀಲಗಿರಿಯ ತೋಡರು ಎಮ್ಮೆ ಸಾಕಾಣಿಕೆಯನ್ನೇ ಜೀವನವನ್ನಾಗಿ ಮಾಡಿಕೊಂಡ ಬುಡಕಟ್ಟು ಜನರು. ಅವು ಅವರ ಜೀವನ ಮಾತ್ರವಲ್ಲ ಅವರ ಎಲ್ಲ ನಂಬಿಕೆಗಳು, ಆಚರಣೆಗಳು ಎಮ್ಮೆಯ ಸುತ್ತವೇ ಸುತ್ತುತ್ತದೆ. ತೋಡರ ವಸತಿಯಲ್ಲಿ ನಾಲ್ಕೈದು ಮನೆಗಳ ಗುಂಪು. ಅದರ ಮಧ್ಯದಲ್ಲೊಂದು ದೈವದ ಮನೆ. ಅದರಲ್ಲಿಯೇ ಹಾಲು ಕರೆಯುವುದು, ಮೊಸರು ಕಡೆಯುವುದು, ಬೆಣ್ಣೆ ಮಾಡುವುದೆಲ್ಲಾ. ಒಬ್ಬ ದೇವರಗುಡ್ಡ. ಎಮ್ಮೆ, ಕೋಣಗಳು, ಹಾಲು ತುಂಬಿಸುವ ಬೊಂಬಿನತುಂಡು, ಮೊಸರು ಕಡೆಯುವ ಮಂತು ಇವೇ ದೈವಗಳು.

ಎಮ್ಮೆ ಭಾರತದ ಹೆಮ್ಮೆ

ಭಾರತದಲ್ಲಿ ಗೋಮಾತೆ ಎಂದೂ, ಮಕ್ಕಳಿಗೆ, ಮನುಷ್ಯರಿಗೆ ಹಾಲನ್ನಿತ್ತು ಪೊರೆದದ್ದು ಅದೇ ಎಂಬ ತಪ್ಪು, ಆರ್ಯ ಪ್ರೇರಿತ ಕಲ್ಪನೆಯನ್ನು ಹೇರಲಾಗಿದೆ. ಶೂದ್ರರೂ ಸೇರಿದಂತೆ ಭಾರತದ ಬಹುಸಂಖ್ಯಾತ ಜನ ಅದನ್ನು ನಂಬುವಂತೆ ಮಾಡಲಾಗಿದೆ. ಆದರೆ ಭಾರತದ ಜನರಿಗೆ ಹಾಲನ್ನಿತ್ತು ಸಾಕಿದ್ದು ಎಮ್ಮೆ. 21ನೆಯ ಶತಮಾನದಲ್ಲಿ ಸೀಮೆ ತಳಿ ಹಸುಗಳಿಂದ ಹೆಚ್ಚು ಹಾಲು ಉತ್ಪನ್ನವಾಗುತ್ತಿರುವ ಸಮಯದಲ್ಲೂ ಭಾರತದ ಹಾಲಿನ ಉತ್ಪಾದನೆಯಲ್ಲಿ ಶೇ.55 ಭಾಗ ಎಮ್ಮೆಗಳಿಂದಲೇ. ಸೀಮೆ ಹಸುಗಳು ಜನಪ್ರಿಯವಾಗುವ ಮೊದಲು ಶೇ.70ರವರೆಗೆ ಎಮ್ಮೆ ಹಾಲೇ ಭಾರತದ ಜನರಿಗಾಧಾರ.

ಅಷ್ಟೇ ಅಲ್ಲ ಹಸುಗಳ ತಳಿಗಳಲ್ಲಿ ಬಹಳಷ್ಟು ಭಾರತದ ಹೊರಗೆ ಉಗಮಗೊಂಡು, ಅಲ್ಲಿಯೇ ಪಳಗಿಸಲ್ಪಟ್ಟು ಭಾರತಕ್ಕೆ ಸಾವಿರಾರು ವರ್ಷಗಳ ಕಾಲದಲ್ಲಿ ಆಮದುಗೊಂಡವು. ಆದರೆ ಎಮ್ಮೆ ಭಾರತದಲ್ಲಿ, ಗುಜರಾತ್, ಮಹಾರಾಷ್ಟ್ರದ ಪಶ್ಚಿಮದಲ್ಲಿ ಹಲವು ಸಾವಿರ ವರ್ಷಗಳ ಹಿಂದೆ ಉಗಮಗೊಂಡು ಇಲ್ಲಿಯೇ ಪಳಗಿಸಲ್ಪಟ್ಟದ್ದು. ನಂತರ ಕರಾವಳಿಗುಂಟ ಹಬ್ಬಿ ಮಂಗಳೂರು, ಅಲ್ಲಿಂದ ನೀಲಗಿರಿ, ಮೈಸೂರುಗಳಿಗೆ ಪಸರಿಸಿದವು ಎಂದು ಎಮ್ಮೆ ತಳಿಗಳ ಡಿಎನ್‌ಎ ಪರೀಕ್ಷೆಯಿಂದ ತಿಳಿದುಬಂದಿದೆ. ಮತ್ತೊಂದು ದಾರಿಯಲ್ಲಿ ಮಹಾರಾಷ್ಟ್ರದಿಂದ ಉತ್ತರ ಕರ್ನಾಟಕಕ್ಕೆ ಬಂದವು.

ಮೈಸೂರು ಪ್ರದೇಶದಲ್ಲಿ ಇರುವ ಕೋಣನೂರು, ಕೋಣನ ಕುಂಟೆ, ಎಮ್ಮಿಗನೂರು, ಎಮ್ಮೆಗಾಲ ಇತ್ಯಾದಿ ಊರಿನ ಹೆಸರುಗಳು ಇಲ್ಲಿನ ಜನಜೀವನದಲ್ಲಿ ಅವು ವಹಿಸಿದ ಪಾತ್ರದ ಸೂಚಕಗಳು. ಇಲ್ಲಿನ ಅನೇಕ ಜಾತಿಗಳ ಬಳಿ, ಬೆಡಗು ಅಥವಾ ಗೋತ್ರಗಳ ಹೆಸರು ಕೂಡ ಎಮ್ಮೆ, ಕೋಣ ಮೂಲದ್ದು.

ಎಮ್ಮೆ ಸಾಕು ಪ್ರಾಣಿಯಾಗುವ, ಹಾಲಿನ ಆಧಾರವಾಗುವ ಮೊದಲೂ ಕೂಡ ಈ ಪ್ರದೇಶದಲ್ಲಿ ಎಮ್ಮೆ, ಕೋಣಗಳೇ ಇಲ್ಲಿಯ ಜನರನ್ನು ಜೀವ ಉಳಿಸಿಕೊಳ್ಳಲು, ವಂಶಾಭಿವೃದ್ಧಿ ಮಾಡಿಕೊಳ್ಳಲು ಅನುವು ಮಾಡಿದ್ದು. ಇಲ್ಲಿಯ ಬುಡಕಟ್ಟುಗಳಿಗೆ ಎಮ್ಮೆ ಕೋಣಗಳ ಬೇಟೆ, ಅದರ ಮಾಂಸವೇ ಜೀವನಾಧಾರ. ಏಕೆಂದರೆ ಅವುಗಳೇ ವಿಫುಲವಾಗಿ ಮತ್ತು ಬೇರೆ ದೊಡ್ಡ ಪ್ರಾಣಿಗಳಿಗಿಂತ ಹೆಚ್ಚು ಸುಲಭವಾಗಿ ಬೇಟೆಯಾಡಲು ಸಾಧ್ಯವಾಗುತ್ತಿದ್ದದ್ದು. ಒಂದು ಎಮ್ಮೆ ಅಥವಾ ಕೋಣನ ಬೇಟೆಯಾಯಿತೆಂದರೆ ಸರಿಯಾದ ಆಹಾರ ಸಿಗದೆ ಹಸಿವಿನಿಂದ ನರಳುತ್ತಿದ್ದ ಬುಡಕಟ್ಟು ಜನಕ್ಕೆ ಹಬ್ಬದೂಟ. ಅವರೇ ಇಲ್ಲಿಯ ಮೂಲ ನಿವಾಸಿಗಳು.

ಅದರ ಸೂಚಕವಾಗಿಯೇ ಈ ಪ್ರದೇಶದಲ್ಲಿ ಸರಿಸುಮಾರು ಎಲ್ಲ ಊರಮ್ಮಗಳೂ ಮಾರಮ್ಮಗಳು. ಕೆಲವು ಊರುಗಳಲ್ಲಿ ಜಾತಿ ಜಾತಿಗೊಂದು ಮಾರಮ್ಮನ ಗುಡಿ. ಈ ಮಾರಮ್ಮ ಮತ್ತು ಇನ್ನೂ ಹಲವು ದೇವತೆಗಳು ಬೇಡುವುದೇ ಕೋಣದ ಬಲಿ. ಏಕೆಂದರೆ ಆ ಅಮ್ಮನ ಕುಲಕ್ಕೆ ಜೀವ ಉಳಿಸುತ್ತಿದ್ದುದೇ ಎಮ್ಮೆ ಕೋಣಗಳ ಮಾಂಸ. ಇಲ್ಲಿ ಬೌದ್ಧ ಧರ್ಮ ಪ್ರಸಾರದ ಪರಿಣಾಮ ಈ ಸಮುದಾಯಗಳ ಮೇಲೆ ಯಾವ ರೀತಿ ಎಷ್ಟು ಪ್ರಮಾಣದಲ್ಲಿ ಆಯಿತು ಎಂಬ ಬಗ್ಗೆ ಮಾಹಿತಿಗಳಿಲ್ಲ. ಈ ಸಮುದಾಯಗಳಲ್ಲಿ ಮುಂದೆ ಕೃಷಿ ಆರಂಭವಾಗಿ, ಜನರ ಆಹಾರಕ್ಕೆ ಅದು ಮುಖ್ಯ ಆಧಾರವಾಗುವವರೆಗೆ, ತಮ್ಮ ಬುಡಕಟ್ಟು ಬದುಕನ್ನು ಹಾಗೂ ಎಮ್ಮೆ ಕೋಣಗಳ ಮತ್ತಿತರ ಕೆಲವು ಪ್ರಾಣಿಗಳ ಬೇಟೆಗಾರಿಕೆ, ಅಲ್ಪ ಸ್ವಲ್ಪ ಪಶುಸಂಗೋಪನೆಯನ್ನು ಅವಲಂಬಿಸಿದ್ದರು ಎಂಬುದಕ್ಕೆ ಪ್ರಾಚೀನ ಮಾನವ ವಸತಿಗಳ ಪ್ರದೇಶದ ಮೂಳೆಗಳ ಅಧ್ಯಯನದಿಂದ ತಿಳಿಯಬರುತ್ತದೆ.

ಆದರೆ ಮುಂದೆ ಕೃಷಿ ಹಬ್ಬಿ ಪುನ್ನಾಟ, ಗಂಗ ಮೊದಲಾದ ಮೊದಲ ರಾಜ್ಯಗಳು ಸ್ಥಾಪನೆಯಾದವು. ಅದರೊಡನೆಯೇ ವೈದಿಕ ಧರ್ಮ, ಜಾತಿ ಪದ್ದತಿ, ಪುರಾಣಗಳ ಹೇರಿಕೆಯ ನಂತರ ಮಾರಮ್ಮ ಬ್ರಾಹ್ಮಣಿಯಾದಳು. ತನ್ನ ಗಂಡನಿಗೇ ಶಾಪ ಕೊಟ್ಟು ಕೋಣನ ಬಲಿ ಪಡೆದಳು. ಅದು ಬೇರೆಯೇ ಕತೆ. ಆದರೆ ಎಮ್ಮೆ ಕೋಣನ ಮಾಂಸ ಉತ್ತಮ ಜಾತಿ ಎಂದು ಭ್ರಮಿಸಿಕೊಂಡವರಿಗೆ ವರ್ಜ್ಯವಾಯಿತು. ಕೇವಲ ಕಷ್ಟಕರ ದುಡಿಮೆಯ ಜೀತಗಾರರಿಗೆ ಸೀಮಿತವಾಯಿತು.

ಚಾಮುಂಡಿಯ ಪುರಾಣ ಹೇಳುವುದೂ ಮಹಿಷನ ರೂಪ ಧರಿಸಿದ ರಾಕ್ಷಸನ ವಧೆ ಎಂದು. ಈ ಮಹಿಷ ಮಧನದಲ್ಲೂ ಕೂಡಾ ಮುಖ್ಯ ಪಾತ್ರ ಉತ್ತನಹಳ್ಳಿ ಉರಿಮಾರಿಯದು. ಚಾಮುಂಡಿ ಈ ಉರಿಮಾರಿಯ ಅಕ್ಕ. ಹೀಗೆ ಬುಡಕಟ್ಟು ಮೂಲದ ಅಮ್ಮಗಳಿಗೆ ಮಾಡುತ್ತಿದ್ದ ಕೋಣ ಬಲಿಯ ಮೇಲೆಯೇ ಮಹಿಷಾಸುರ ಮರ್ದನ ಎಂಬ ಪುರಾಣದ ಹೇರಿಕೆಯಾಯಿತೇ? ಇಲ್ಲಿಯ ಬುಡಕಟ್ಟು ಅಮ್ಮ ಒಂದರ ಮೇಲೆಯೇ ಚಾಮುಂಡಿ ಎಂಬ ರಾಜ ಮನೆತನದ ಕುಲದೇವತೆಯ ಹೇರಿಕೆಯಾಯಿತೇ?

ಇದು ಲಭ್ಯವಾಗುವ ಆಕರಗಳ ಆಧಾರದ ಮೇಲೆ ತಿಳಿಯಬರುವ ಸಂಗತಿಗಳು. ಹೆಚ್ಚಿನ ಸಂಶೋಧನೆಯ ಮೂಲಕ ಮಾತ್ರ ಹೆಚ್ಚಿನ ವಿಷಯಗಳನ್ನು ತಿಳಿಯಲು ಸಾಧ್ಯ.

– ಜಿ. ಎನ್. ನಾಗರಾಜ್

ಇದನ್ನೂ ಓದಿ: ಬಿಜೆಪಿ ಶೀಘ್ರವೇ ‘ಸಾವರ್ಕರ್‌ರನ್ನು ರಾಷ್ಟ್ರಪಿತ’ ಎಂದು ಘೋಷಿಸುತ್ತದೆ: ಓವೈಸಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights