ನಾವೇನು ತಿನ್ನಬೇಕು ಎಂದು ನೀವೇಕೆ ನಿರ್ಧರಿಸುತ್ತೀರಿ?: ಮಾಂಸಾಹಾರ ಮಾರಾಟ ನಿಷೇಧಿಸಿದ್ದ ಪಾಲಿಕೆಗೆ ಗುಜರಾತ್ ಹೈಕೋರ್ಟ್‌ ಚಾಟಿ!

ಮಾಂಸಾಹಾರಿ ಆಹಾರವನ್ನು ಮಾರಾಟ ಮಾಡುವ ಬೀದಿ ವ್ಯಾಪಾರಿಗಳ ವಿರುದ್ದ ಕ್ರಮ ತೆಗೆದುಕೊಂಡಿದ್ದ ಅಹಮದಾಬಾದ್ ಮುನ್ಸಿಪಲ್‌ ಕಾರ್ಪೋರೇಷನ್‌ಅನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಅಧಿಕಾರದಲ್ಲಿರುವ ಪಕ್ಷ ನಿರ್ದಿಷ್ಟ ಆಹಾರದ ವಿರುದ್ಧ ಇದೆ” ಎಂಬ ಕಾರಣಕ್ಕಾಗಿ “ಕೆಲವು ಜನರ ಅಹಂಕಾರ”ವನ್ನು ಕಸಿದುಕೊಳ್ಳುವ ಯತ್ನ ಮಾಡಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.

ವ್ಯಾಪಾರಿಗಳ ವಿರುದ್ದ ಯಾವುದೇ ನಿರ್ಧಾರವನ್ನು ಜಾರಿಗೆ ತರಬಾರದು ಎಂದು ಹೈಕೋರ್ಟ್‌ ವರ್ನಿಂಗ್‌ ನೀಡಿದೆ.

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ತಮ್ಮ ಗಾಡಿಗಳನ್ನು ವಶಪಡಿಸಿಕೊಂಡಿದೆ ಎಂದು 25 ಬೀದಿ ವ್ಯಾಪಾರಿಗಳು ಗುಜರಾತ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಬೀದಿ ವ್ಯಾಪಾರಿಗಳ ಮನವಿ ಆಲಿಸಿದ ಆಲಿಸಿದ ಗುಜರಾತ್ ಹೈಕೋರ್ಟ್, ಮುನ್ಸಿಪಲ್‌ ಕಾರ್ಪೋರೇಷನ್‌‌ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣಗಳನ್ನು ತ್ವರಿತವಾಗಿ ಪರಿಗಣಿಸುವಂತೆ ಸೂಚನೆ ನೀಡಿದ ನ್ಯಾಯಾಲಯ, ಬೀದಿ ವ್ಯಪಾರಿಗಳು ತಮ್ಮ ಸರಕುಗಳನ್ನು ಬಿಡುಗಡೆ ಮಾಡಲು ಸಂಪರ್ಕಿಸಿದರೆ 24 ಗಂಟೆಗಳ ಒಳಗೆ ಅದನ್ನು ಅವರಿಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ.

ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಬಿರೇನ್ ವೈಷ್ಣವ್, “ಮಾಂಸಾಹಾರದಿಂದ ನಗರಸಭೆಗೆ ಏನು ತೊಂದರೆಯಾಗುತ್ತದೆ?” ಎಂದು ಪ್ರಶ್ನಿಸಿದ್ದಾರೆ.

ಸರ್ಕಾರಿ ವಕೀಲರನ್ನು ಉದ್ದೇಶಿಸಿ ನ್ಯಾಯಾಲಯವು , “ನಿಮ್ಮ ಸಮಸ್ಯೆ ಏನು? ಮಾಂಸಾಹಾರ ನಿಮಗೆ ಇಷ್ಟವಿಲ್ಲ, ಅದು ನಿಮ್ಮ ಇಷ್ಟ. ಆದರೆ ನಾನು ಹೊರಗೆ ಏನು ತಿನ್ನಬೇಕು ಎಂದು ನೀವು ಹೇಗೆ ನಿರ್ಧರಿಸುತ್ತೀರಿ…ಇದ್ದಕ್ಕಿದ್ದಂತೆ ಅಧಿಕಾರದಲ್ಲಿರುವವರು ಇದನ್ನೇ ಮಾಡಬೇಕೆಂದು ಹೇಳುತ್ತಾರೆ? ನಾಳೆ ನೀವು ನನ್ನ ಮನೆಯ ಹೊರಗೆ ನಾನು ಏನು ತಿನ್ನಬೇಕೆಂದು ನಿರ್ಧರಿಸಿ…ಕಬ್ಬಿನ ರಸ ಮಧುಮೇಹಕ್ಕೆ ಕಾರಣವಾಗುತ್ತದೆ ಅಥವಾ ಕಾಫಿ ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣದಿಂದ ನಾನು ಅವುಗಳನ್ನು ಸೇವಿಸಬಾರದು ಎಂದು ಅವರು ನನಗೆ ಹೇಳುತ್ತಾರೆ. ಪಾಲಿಕೆ ಆಯುಕ್ತರಿಗೆ ಫೋನ್ ಮಾಡಿ ನೀವು ಏನು ಮಾಡುತ್ತಿದ್ದೀರಿ ಎಂದು ಕೇಳಿ” ಎಂದು ಹೇಳಿದೆ.

ಯಾವುದೇ ಅಧಿಕೃತ ಆದೇಶವಿಲ್ಲದೆ ಮತ್ತು ವಡೋದರಾ, ಸೂರತ್, ಭಾವನಗರ, ಜುನಾಗಢ ಮತ್ತು ಅಹಮದಾಬಾದ್‌ನಲ್ಲಿನ ಮುನ್ಸಿಪಲ್‌ ಕಾರ್ಪೋರೇಷನ್‌ಗಳು ಈ ನಿರ್ಧಾರ ತೆಗೆದುಕೊಂಡು ಬೀದಿಬದಿ ವ್ಯಾಪಾರಿಗಳ ಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವ್ಯಾಪಾರಿಗಳ ಪರವಾಗಿ ವಕೀಲ ರೋನಿತ್ ಜಾಯ್ ನ್ಯಾಯಾಲಯಕ್ಕೆ ಹೇಳಿಕೆ ನೀಡಿದರು.

ಕಳೆದ ತಿಂಗಳು ರಾಜ್‌ಕೋಟ್ ಮೇಯರ್ ಮಾಂಸಾಹಾರ ಮಾರಾಟ ಮಾಡುವ ಗಾಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ಹೇಳಿಕೆ ನೀಡಿದ್ದರು.

ಬೀದಿ ವ್ಯಾಪಾರಿಗಳ ಅರ್ಜಿಯ ಮೊದಲ ವಿಚಾರಣೆ ಮುಗಿದ ನಂತರ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ ಸ್ಥಾಯಿ ವಕೀಲ ಸತ್ಯಂ ಛಾಯಾ ಅವರಿಗೆ ನ್ಯಾಯಾಲಯವು ಹಾಜರಾಗುವಂತೆ ಸೂಚಿಸುವುದರೊಂದಿಗೆ, ಪ್ರಕರಣವನ್ನು ದ್ವಿತೀಯಾರ್ಧದಲ್ಲಿ ಹೆಚ್ಚಿನ ವಿಚಾರಣೆ ನ್ಯಾಯಾಲಯ ನಡೆಸಿತು.

ಇದನ್ನೂ ಓದಿ: ಗುಜರಾತ್: ಕಾಂಗ್ರೆಸ್‌ನಲ್ಲಿ ಯುವ ಮತ್ತು ಹಳೆಯ ನಾಯಕರ ನಡುವೆ ಶೀಲತ ಸಮರ!

ನಗರಸಭೆ ವಕೀಲ ಛಾಯಾ ಅವರು ನ್ಯಾಯಾಲಯಕ್ಕೆ, “ಕೆಲವು ತಪ್ಪು ಕಲ್ಪನೆಯಡಿಯಲ್ಲಿ ಮನವಿ ಸಲ್ಲಿಸಲಾಗಿದೆ. ಎಲ್ಲಾ ಮಾಂಸಾಹಾರದ ಗಾಡಿಗಳನ್ನು ತೆಗೆದುಹಾಕಬೇಕು ಎಂದು ಯಾವುದೇ ಸೂಚನೆ ನೀಡಿಲ್ಲ. ರಸ್ತೆಯ ಮೇಲಿನ ಅತಿಕ್ರಮಣ, ಇದು ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಅಥವಾ ಪಾದಚಾರಿಗಳಿಗೆ ತೊಂದರೆಯಾಗುವ ಗಾಡಿಗಳನ್ನು ತೆಗೆದು ಹಾಕಲಾಗಿದೆ” ಎಂದು ಹೇಳಿದ್ದಾರೆ.

ಆದರೆ, ಮಾಂಸಾಹಾರ ಮಾರಾಟಗಾರರನ್ನು ಗುರಿಯಾಗಿಸಿಕೊಂಡು ಅತಿಕ್ರಮಣ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆಯೇ ಎಂದು ನ್ಯಾಯಮೂರ್ತಿ ವೈಷ್ಣವ್ ಪ್ರಶ್ನಿಸಿದ್ದಾರೆ.

ಛಾಯಾ ಅವರ ಹೇಳಿಕೆಯನ್ನು ಅನುಸರಿಸಿ, ನ್ಯಾಯಮೂರ್ತಿ ವೈಷ್ಣವ್, “ಏನನ್ನಾದರೂ ಅನುಷ್ಠಾನಗೊಳಿಸುವ ನೆಪದಲ್ಲಿ, ಉದಾಹರಣೆಗೆ, ವಸ್ತ್ರಪುರ ಕೆರೆಯ ಸುತ್ತಲೂ ರಾತ್ರಿ ಹೊತ್ತಲ್ಲಿ ಮೊಟ್ಟೆ ಮತ್ತು ಆಮ್ಲೆಟ್ ಮಾಡುವ ವ್ಯಾಪಾರಿಗಳಿದ್ದರೆ ಅಧಿಕಾರದಲ್ಲಿ ಇರುವ ಪಕ್ಷವು ಅದನ್ನು ತಿನ್ನಬಾರದು ಎಂದು ನಿರ್ಧರಿಸುತ್ತದೆ, ಅವುಗಳನ್ನು ನಿಲ್ಲಿಸಲು ಬಯಸುತ್ತವೆ…ನೀವು ಅವುಗಳನ್ನು ಎತ್ತಿಕೊಂಡು ತೆಗೆದುಕೊಂಡು ಹೋಗುತ್ತೀರಾ? ಪ್ರಾಮಾಣಿಕವಾಗಿ ಹೇಳಿ.” ಎಂದು ಹೇಳಿದ್ದಾರೆ.

“ನೀವು ಅದನ್ನು ಏಕೆ ಮಾಡುತ್ತೀರಿ? ನಿಮ್ಮ ಕಾರ್ಪೊರೇಷನ್ ಕಮಿಷನರ್ ಅವರನ್ನು ಇಲ್ಲಿಯೇ ಬರುವಂತೆ ಕೇಳಿ…ಜನರನ್ನು ಮನಬಂದಂತೆ ಎತ್ತಿಕೊಂಡು ಹೋಗುತ್ತೀರಲ್ಲ, ಎಷ್ಟು ಧೈರ್ಯ ನಿಮಗೆ?” ಎಂದು ನ್ಯಾಯಮೂರ್ತಿ ವೈಷ್ಣವ್‌ ಕಿಡಿ ಕಾರಿದ್ದಾರೆ.

ಆದರೆ ವಕೀಲ ಛಾಯಾ ಅವರು ನ್ಯಾಯಾಲಯದ ಮಾತನ್ನು ನಿರಾಕರಿಸಿ, ಫುಟ್‌ಪಾತ್‌ಗಳ ಫೋಟೋಗಳನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವೈಷ್ಣವ್, “ಅತಿಕ್ರಮಣಗಳಿದ್ದರೆ, ಅದ್ನನು ತೆರವುಗೊಳಿಸಬೇಕು, ಆದರೆ ಜಪ್ತಿ ಮಾಡಬೇಡಿ. ಯಾಕೆಂದರೆ ಇಂದು ಬೆಳಿಗ್ಗೆ ಯಾರಾದರೂ, ‘ನಾಳೆಯಿಂದ ನನ್ನ ಸುತ್ತಲೂ ಮೊಟ್ಟೆಯ ತಿನಿಸುಗಳು ಬೇಡ’ ಎಂದು ಹೇಳಿಕೆ ನೀಡುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಲೈಂಗಿಕ ಕಿರುಕುಳ: ಗುಜರಾತ್‌ ಜಿಲ್ಲಾಧಿಕಾರಿ ಅಮಾನತು – ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights