Fact Check: ಸಿದ್ದರಾಮಯ್ಯರಿಗೆ ಏಕವಚನದಲ್ಲಿ ನಿಂದಿಸಿದ ಇಬ್ರಾಹಿಂ ಎಂದು ಈಶ್ವರಪ್ಪಗೆ ಬೈದಿದ್ದ ವಿಡಿಯೋವನ್ನು ತಿರುಚಲಾಗಿದೆ!

“ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ನಡುವೆ ಜಟಾಪಟಿ ನಡೆದಿದೆ. ಇಬ್ರಾಹಿಂ ಅವರು ಸಿದ್ದರಾಮಯ್ಯರಿಗೆ ಏಕವಚನದಲ್ಲಿ ನಿಂದಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದ ಸತ್ಯಾ-ಸತ್ಯತೆಯನ್ನು ಈ ಲೇಖನದ ಮೂಲಕ ತಿಳಿಯೋಣ.

“ಹೇಯ್‌ ಕೂತ್ಕೊಳಲೇ ಕೂಲಿ ಕೆಲ್ಸಕ್ಕೆ ಬಂದೋನು ನೀನು” ಎಂದು ಸಿ.ಎಂ. ಇಬ್ರಾಹಿಂ ಸಿದ್ದರಾಮಯ್ಯ ಅವರಿಗೆ ಹೇಳುತ್ತಿರುವಂತೆ ಈ ವಿಡಿಯೊದಲ್ಲಿ ಭಾಸವಾಗುತ್ತದೆ. ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಾ, “ನಾನು ರಾಜಕಾರಣಕ್ಕೆ ಬಂದಾಗ ನೀನು ನೀನು ಚಡ್ಡಿನೇ ಹಾಕಿಲ್ಲ” ಎಂದು ಹೇಳಿದಂತೆ ಭಾಸವಾಗುತ್ತದೆ. ಹೀಗೆ ಈ ಇಬ್ಬರು ಕಾಂಗ್ರೆಸ್ ನಾಯಕರು ಜಗಳ ಆಡಿಕೊಂಡಿದ್ದಾರೆ ಎಂದು ಹಲವರು ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ತಿರುಚಿದ (ಎಡಿಟ್ ಮಾಡಿದ) ವಿಡಿಯೋವಾಗಿದೆ. ಇದನ್ನು ಹಲವಾರು ಜನ ಹಂಚಿಕೊಂಡಿರುವುದನ್ನು ಕೆಳಗೆ ಕಾಣಬಹುದು.

ತಕ್ಷಣಕ್ಕೆ ನೋಡಿದರೆ ಕಾಂಗ್ರೆಸ್‌ ನಾಯಕರು ಜಗಳ ಆಡಿದ್ದಾರೆಂದೇ ಅನಿಸುತ್ತದೆ. ಆದರೆ ವಾಸ್ತವ ಬೇರೆ ಇದೆ. ಇಬ್ಬರು ಕಾಂಗ್ರೆಸ್‌ ನಾಯಕರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಕುರಿತು ಮಾತನಾಡುತ್ತಿದ್ದಾರೆ ಎಂಬುದು ಮಾಧ್ಯಮಗಳ ವರದಿಗಳಿಂದ ಸ್ಪಷ್ಟವಾಗುತ್ತದೆ.

ಇಬ್ರಾಹಿಂ ಹಾಗೂ ಸಿದ್ದರಾಮಯ್ಯ ಅವರ ಮಾತಿನ ಹಿನ್ನೆಲೆಯನ್ನು ಸುವರ್ಣ ಸುದ್ದಿವಾಹಿನಿ ಪ್ರಸಾರ ಮಾಡಿದೆ. ಹಂಚಿಕೊಂಡಿರುವ ವಿಡಿಯೊದಲ್ಲಿ ಕೆಲವು ಪದಗಳನ್ನು ಮ್ಯೂಟ್ ಮಾಡಿರುವುದನ್ನು ಗುರುತಿಸಬಹುದು.

ಸುವರ್ಣ ವರದಿ ಹೇಳುವುದೇನು?

“ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಆತ್ಮೀಯ ಸ್ನೇಹಿತರು. ಇವರಿಬ್ಬರ ನಡುವೆ ಚರ್ಚೆ ಸಾಮಾನ್ಯ. ಮತ್ತೆ ಇವರಿಬ್ಬರ ನಡುವೆ ಸ್ವಾರಸ್ಯಕರ ಚರ್ಚೆ ನಡೆದಿದೆ. ಪರಿಷತ್‌ನಲ್ಲಿ ಸರ್ಕಾರವನ್ನು ಝಾಡಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಪರಿಷತ್‌ನಲ್ಲಾದ ಈಶ್ವರಪ್ಪ ಅವರೊಂದಿಗಿನ ಜಗಳವನ್ನು ಇಬ್ರಾಹಿಂ ಪ್ರಸ್ತಾಪಿಸಿದ್ದಾರೆ. ಪರಿಷತ್‌ನಲ್ಲಿ ಸಚಿವ ಈಶ್ವರಪ್ಪ ಅವರು ರೋಲೆಕ್ಸ್‌ ವಾಚ್ ಪ್ರಕರಣದ ಕುರಿತು ಪ್ರಸ್ತಾಪ ಮಾಡಿದರು. ಈ ವೇಳೆ ಈಶ್ವರಪ್ಪನವರಿಗೆ ಝಾಡಿಸಿದೆ ಎಂದು ಸಿ.ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಚರ್ಚಿಸಿದರು” ಎಂದು ವರದಿ ಹೇಳುತ್ತದೆ.

ಕೆ.ಎಸ್‌.ಈಶ್ವರಪ್ಪ ಹಾಗೂ ಸಿ.ಎಂ.ಇಬ್ರಾಹಿಂ ಅವರು ವಿಧಾನಪರಿಷತ್‌ನಲ್ಲಿ ಚರ್ಚೆ ಮಾಡಿರುವುದನ್ನೂ ದೃಶ್ಯ ಮಾಧ್ಯಮಗಳು ವರದಿ ಮಾಡಿವೆ. ಟಿ.ವಿ.9 ಕನ್ನಡ ಸುದ್ದಿ ವಾಹಿನಿ ಮಾಡಿರುವ ವರದಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು. ಪರಿಷತ್‌ನಲ್ಲಿ ನಡೆದ ಚರ್ಚೆಯನ್ನು ಇಬ್ರಾಹಿಂ ಅವರು ಸಿದ್ದರಾಮಯ್ಯನವರಿಗೆ ತಿಳಿಸುತ್ತಿದ್ದರು ಎಂಬುದು ವಾಸ್ತವವಾಗಿದೆ. ಆದರೆ ಇದೇ ವಿಡಿಯೋವನ್ನು ಕಾಂಗ್ರೆಸ್ ನಾಯಕರ ಏಕವಚನದ ಜಗಳ ಎಂದು ತಿರುಚಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Fact Check: ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪುಹಣ ಹೊಂದಿರುವವರ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿಲ್ಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights