ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಕೋರ್ಟ್‌ಗೆ ವಕೀಲ ರಾಜೇಶ್ ಭಟ್ ಶರಣಾಗತಿ!
ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ, ಪ್ರಕರಣ ದಾಖಲಾದ ಬಂತರ ನಾಪತ್ತೆಯಾಗಿದ್ದ ಆರೋಪಿ ವಕೀಲ ಕೆ. ಎಸ್. ಎನ್. ರಾಜೇಶ್ ಭಟ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಆಂಬ್ಯಲೆನ್ಸ್‌ನಲ್ಲಿ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಂದ ಅವರು ಕೋರ್ಟ್‌ನಲ್ಲಿ ಶರಣಾಗಿದ್ದಾರೆ.
ಕಾನೂನು ಪದವಿ ಪಡೆಯುತ್ತಿದ್ದ ವಿದ್ಯಾರ್ಥಿನಿ ಇಂಟರ್ನ್‌ಶಿಪ್‌ಗಾಗಿ ವಕೀಲ ರಾಜೇಶ್ ಕಚೇರಿಗೆ ಬಂದಿದ್ದರು. ಈ ವೇಳೆ ಆಕೆಗೆ ವಕೀಲ ಲೈಂಗಿಕ ಕಿರುಕುಳ ನೀಡಿದ್ದರು. ಅಲ್ಲದೆ, ದೂರು ನೀಡದಂತೆ ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿನಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 19 ರಂದು ದೂರು ದಾಖಲಿಸಿದ್ದರು.
ದೂರು ನೀಡಿದ ಬೆನ್ನಲ್ಲೇ ವಕೀಲ ರಾಜೇಶ್ ನಾಪತ್ತೆಯಾಗಿದ್ದರು. ಹೀಗಾಗಿ, ಆತನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು, ನ್ಯಾಯಾಲಯದ ಮೂಲಕ ಆತನ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ, ಲುಕ್ಔಟ್ ನೋಟೀಸ್ ಜಾರಿಗೊಳಿಸಲಾಗಿತ್ತು. ಈ ನಡುವೆ, ಅನಾರೋಗ್ಯದ ಕಾರಣ ನೀಡಿ ಆತ ಮಧ್ಯಂತರ ಜಾಮೀನು ಪಡೆಯಲು ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ, ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಹಾಯ ಮಾಡಿದ್ದ ಆರೋಪಿಯ ಪತ್ನಿ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಪತ್ನಿಯ ಬಂಧನವಾದರೂ ಆರೋಪಿ ಸುಳಿವಿರಲಿಲ್ಲ. ಇದೀಗ ಎರಡು ತಿಂಗಳ ಬಳಿಕ ಆರೋಪಿ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ.
ಆತನಿಗೆ ನ್ಯಾಯಾಂಗ ಬಂಧನ ವಿಧಿಸಿರುವ ಕೋರ್ಟ್ ಚಿಕಿತ್ಸೆ, ಆತನಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿದೆ.
ಇಂದು ಆತನ ಪ್ರಧಾನ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು, ಪೊಲೀಸರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಮಂಡನೆ: ವಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ!