ಫ್ಯಾಕ್ಟ್‌ಚೆಕ್ : ಪಾಕಿಸ್ತಾನದಲ್ಲಿ ಹೋಳಿ ಹಬ್ಬ ಆಚರಿಸಿದಕ್ಕೆ ಹಿಂದೂ ವೈದ್ಯರನ್ನು ಕೊಲ್ಲಲಾಯಿತೇ?
ಇವರು ಪಾಕಿಸ್ತಾನದ ಟಾಪ್ ಕ್ಲಾಸ್ ಹಿಂದೂ ಚರ್ಮರೋಗ ತಜ್ಞ ಡಾ.ಧರ್ಮದೇವ್ ರಾಠಿ. ಇವರನ್ನು ಹೋಳಿ ಹಬ್ಬ ಆಚರಿಸಿದಕ್ಕೆ ಅವರದ್ದೇ ಕಾರಿನ ಮುಸ್ಲಿಂ ಡ್ರೈವರ್ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.
ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದು ಹೋಳಿ ಹಬ್ಬ ಆಚರಿಸಿದ್ದ ಕಾರಣಕ್ಕೆ ಹಿಂದೂ ವೈದ್ಯರನ್ನು ಅಮಾನುಷವಾಗಿ ಕೊಂದುಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ವೈರಲ್ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಇಂಡಿಯಾ ಟುಡೇ ಸೇರಿದಂತೆ ಕೆಲವು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದು, ಖ್ಯಾತ ಚರ್ಮರೋಗ ವೈದ್ಯರಾಗಿದ್ದ ಧರಮ್ ದೇವ್ ಎಂಬುವವರನ್ನು ಪಾಕಿಸ್ತಾನದ ಹೈದರಾಬಾದ್ನ ಮನೆಯಲ್ಲಿ ತಮ್ಮ ಚಾಲಕನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಾರಿನಲ್ಲಿ ತಮ್ಮ ಮನೆಗೆ ಹೋಗುವಾಗ ಧರಮ್ ದೇವ್ ಮತ್ತು ಕಾರು ಚಾಲಕನ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಮಾತಿಗೆ ಮಾತು ಬೆಳೆದು, ಜಗಳ ಅತಿರೇಕಕ್ಕೆ ಹೋಗಿ ತಾಳ್ಮೆ ಕಳೆದುಕೊಂಡ ಚಾಲಕ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಡಾಕ್ಟರ್ ಮನೆಯಲ್ಲಿದ್ದ ಅಡುಗೆ ಭಟ್ಟ ಪೊಲೀಸರ ಮುಂದೆ ನೀಡಿದ ಹೇಳಿಕೆ ಆಧಾರದ ಮೇಲೆ ಚಾಲಕನನ್ನು ಖೈರ್ಪುರ್ನಲ್ಲಿರುವ ತನ್ನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆ ವಿವರ :
ಕಾರಿನಲ್ಲಿ ಜಗಳವಾಡಿಕೊಂಡು ಮನೆಗೆ ಬಂದ ಚಾಲಕ, ಅಡುಗೆ ಕೋಣೆಗೆ ನುಗ್ಗಿ ಚಾಕು ತೆಗೆದುಕೊಂಡು ಡಾಕ್ಟರ್ ಕತ್ತು ಸೀಳಿ ಪರಾರಿಯಾದನು ಎಂದು ಅಡುಗೆ ಭಟ್ಟ ಹೇಳಿಕೆ ನೀಡಿದ್ದಾನೆ. ಆರೋಪಿ ಕಾರು ಚಾಲಕನನ್ನು ಹನೀಫ್ ಲೆಗ್ಹರಿ ಎಂದು ಗುರುತಿಸಲಾಗಿದೆ. ಖೈರ್ಪುರ್ನಲ್ಲಿರುವ ತನ್ನ ಮನೆಯಲ್ಲಿ ಇರುವಾಗ ಆತನನ್ನು ಪಾಕ್ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪಾಕ್ ಪೊಲೀಸರಿಗೆ ಪಾಕಿಸ್ತಾನದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಗೈನ್ ಚಾಂದ್ ಎಸ್ಸರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಡಾಕ್ಟರ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಈ ಹತ್ಯೆಗೆ ಹೋಳಿ ಹಬ್ಬದ ಆಚರಣೆ ಎಂದು ಎಲ್ಲಿಯೂ ವರದಿಯಾಗಿಲ್ಲ.
ಹತ್ಯೆಯ ಆರೋಪಿಯನ್ನು ಬಂಧಿಸಿರುವ ಪಾಕಿಸ್ತಾನದ ಹೈದರಬಾದ್ ನಗರದ ಪೊಲೀಸರು ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಹೋಳಿ ಹಬ್ಬದ ಆಚರಣೆ ಮಾಡಿದಕ್ಕೆ ಹಿಂದೂ ವೈದ್ಯರನ್ನಯ ಹತ್ಯೆ ಮಾಡಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಲಾಟರಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆಯನ್ನು ತಮಿಳುನಾಡಿನದ್ದು ಎಂದು ತಪ್ಪಾಗಿ ಹಂಚಿಕೆ