370ನೇ ವಿಧಿ ರದ್ದು : ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ

ಕಾಶ್ಮೀರ ಜನತೆಯ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ತೀವ್ರವಾಗಿ ಖಂಡಿಸಿದ್ದಾರೆ.

‘ಎಸ್‌ಬಿಎಸ್ ಆಸ್ಟ್ರೇಲಿಯಾ ತಮಿಳು’ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಅವರು, “ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಜನರು ತಮ್ಮ ವಿಷಯಗಳು ಮತ್ತು ಸಮಸ್ಯೆಗಳ ಬಗ್ಗೆ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೆರಿಯಾರ್ ಮೊದಲೇ ಹೇಳಿದ್ದರು. ನಿಮ್ಮ ಮನೆಯ ವ್ಯವಹಾರಗಳಲ್ಲಿ ನಾನು ಹಸ್ತಕ್ಷೇಪ ಮಾಡಬಹುದೇ? ನೀವು ಅಲ್ಲಿ ವಾಸಿಸುವವರು… ನಾನು ನಿಮ್ಮ ಬಗ್ಗೆ ಕಾಳಜಿ ವಹಿಸಬಹುದು, ಆದರೆ ನನ್ನ ನಿರ್ಧಾರಗಳನ್ನು ನಿಮ್ಮ ಮೇಲೆ ಹೇರಲು ಸಾಧ್ಯವಿಲ್ಲ ಅಲ್ಲವೇ? ಕಾಳಜಿ ತೋರುವುದು ಬೇರೆ, ತಲೆಹಾಕುವುದು ಬೇರೆ. ಇವೆರಡೂ ಬೇರೆ ಬೇರೆಯೆಂದು ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲವೇ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೆಲ್ಬೋರ್ನ್ 2019 ರ ಭಾರತೀಯ ಚಲನಚಿತ್ರೋತ್ಸವದಲ್ಲಿ ಇತ್ತೀಚೆಗೆ ತಮಿಳು ಚಿತ್ರ ‘ಸೂಪರ್ ಡಿಲಕ್ಸ್’ ಗಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ಪಡೆದ ನಟ, ಕಾಶ್ಮೀರದ ಬಗ್ಗೆ ತಾನು ಓದಿದ ವರದಿಗಳು ತನಗೆ ತುಂಬಾ ನೋವು ತಂದಿದೆ ಎಂದಿದ್ದಾರೆ. ಕಾಶ್ಮೀರದ ಹೊರಗಿನವರು ಕಾಶ್ಮೀರದ ಬಗ್ಗೆ ಕಾಳಜಿ ವಹಿಸಬಹುದು ಆದರೆ ಜಮ್ಮು ಮತ್ತು ಕಾಶ್ಮೀರದ ಪ್ರದೇಶದಲ್ಲಿನ ವ್ಯವಹಾರಗಳ ಮೇ ಮತ್ತು ಅದರ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದ್ದಾರೆ.

ಭಾನುವಾರ ಚೆನ್ನೈನಲ್ಲಿ ನಟ ರಜನಿಕಾಂತ್ ಮಾಡಿದ ಭಾಷಣದಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಮೋದಿ-ಷಾ ಜೋಡಿಯನ್ನು ಅಭಿನಂದಿಸುತ್ತಾ ಎನ್‌ಡಿಎ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಶ್ಲಾಘಿಸಿದ ಬೆನ್ನಲ್ಲೇ ವಿಜಯ್ ಸೇತುಪತಿ ಅವರು ಈ ನಿರ್ಧಾರವನ್ನು ಖಂಡಿಸಿದ್ದಾರೆ.

ನಟ ರಜನಿಕಾಂತ್ ಅವರು, “ನಿಮ್ಮ ಮಿಷನ್ ಕಾಶ್ಮೀರ ಕಾರ್ಯಾಚರಣೆಗೆ ನಿಜವಾಗಿಯೂ ನನ್ನ ಹೃತ್ಪೂರ್ವಕ ಅಭಿನಂದನೆಗಳು, ಸರ್. ನೀವು ಅದನ್ನು ನಡೆಸಿದ ರೀತಿ, ಹ್ಯಾಟ್ಸ್ ಆಫ್, ವಿಶೇಷವಾಗಿ ನೀವು ಸಂಸತ್ತಿನಲ್ಲಿ ಮಾಡಿದ ಭಾಷಣ, ಅದ್ಭುತ ಸರ್, ಅದ್ಭುತ. ಎಂದು ಮೋದಿ ಅಮಿತ್ ಶಾರನ್ನು ಕೊಂಡಾಡಿದ್ದರು.

ಹಾಗೆಯೇ ಮತ್ತೊರ್ವ ಖ್ಯಾತ ನಟ ಕಮಲ್ ಹಾಸನ್ ಸೇರಿದಂತೆ ಹಲವರು “ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಳ್ಳುವಿಕೆ ಮತ್ತು ವಿಭಜನೆಯನ್ನು ಘೋಷಿಸುವ ಮೊದಲು ಕಾಶ್ಮೀರಿ ನಾಯಕರನ್ನು ಗೃಹಬಂಧನದಲ್ಲಿರಿಸುವುದು ಮತ್ತು ಸಂವಹನ ಮಾರ್ಗಗಳನ್ನು ಕಡಿತಗೊಳಿಸಿರುವುದರ ಬಗ್ಗೆ ಅನೇಕರು ಟೀಕಿಸಿದ್ದಾರೆ.

ಕಳೆದ ವಾರ ಸಂಸತ್ತಿನಲ್ಲಿ ನಡೆದ ಕ್ರಮವನ್ನು ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆ ಸ್ವಾಗತಿಸಿದರೆ, ವಿರೋಧ ಪಕ್ಷದ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಇದನ್ನು ತೀವ್ರವಾಗಿ ಖಂಡಿಸಿವೆ.

Leave a Reply

Your email address will not be published.