ಗಂಡಸರ ಬಗೆಗಿನ 5 ಸತ್ಯಗಳು…ಹೆಂಗಸರಿಗಾಗಿ ಮಾತ್ರ !

“ನಾನು ಇತ್ತೀಚೆಗೆ ಸಿಕ್ಕಾಪಟ್ಟೆ ಟೆನ್ಶನ್ ನಲ್ಲಿದ್ದೀನಿ. ಪರ್ಸನಲ್ ಕೆಲಸಗಳಿಗೆ ಸಮಯವೇ ಕೊಡಲು ಸಾಧ್ಯವಾಗ್ತಿಲ್ಲ. ಖಾಸಗಿ ಬದುಕಿನಲ್ಲಿ ಯಾವಾಗಲೂ ರಗಳೆಯೇ. ಇನ್ಮೇಲೆ ಕೆಲಸದ ಮೇಲೆ ಜಾಸ್ತಿ ನಿಗಾ ವಹಿಸ್ತೀನಿ. ಆಗಲೇ ಜೀವನದಲ್ಲಿ ಉದ್ಧಾರ ಆಗೋದು”. ಸಾಮಾನ್ಯವಾಗಿ ಹುಡುಗರು/ಗಂಡಸರು ಈ ರೀತಿಯ ಮಾತುಗಳನ್ನು ಆಗಾಗ ಆಡುತ್ತಿರುತ್ತಾರೆ.

ನೇರವಾಗಿ ‘ನನಗೆ ಈ ಸಂಬಂಧದಲ್ಲಿ ಮುಂದುವರೆಯಲು ಆಸಕ್ತಿ ಇಲ್ಲ’ ಎಂದು ಹೇಳಲು ಧೈರ್ಯವಿಲ್ಲದವರು ಈ ಬಗೆಯ ಸುತ್ತಿ ಬಳಸಿ ಮಾತುಗಳನ್ನು ಹೆಚ್ಚಾಗಿ ಆಡುತ್ತಾರೆ. ಮಾತಿನ ಒಳಮರ್ಮ ತಿಳಿಯಬೇಕಾದರೆ ಗಂಡಸರ ಬಗೆಗಿನ ಈ 5 ಸತ್ಯಗಳನ್ನು ಪ್ರತಿಯೊಬ್ಬ ಹೆಣ್ಣೂ ತಿಳಿದುಕೊಳ್ಳಲೇಬೇಕು.

  1. ಡಿನ್ನರ್ ಪ್ಲಾನ್ ಅವನು ಮಾಡುತ್ತಿಲ್ಲವಾ? ಹಾಗಾದ್ರೆ ಇದು ಮೊದಲ ಸೂಚನೆ

ಒಂದು ಸಲ ಸರಿ, ಎರಡು ಸಲ ಸರಿ…ಆದ್ರೆ ಪ್ರತೀ ಬಾರಿಯೂ ಹೊರಗೆ ಸುತ್ತಾಡುವ, ಡಿನ್ನರ್ ಡೇಟ್ ಗೆ ಹೋಗುವ ಪ್ಲಾನ್ ನೀವೇ ಮಾಡುತ್ತಿದ್ದೀರಾ? ಹಾಗಾದ್ರೆ ಸ್ವಲ್ಪ ನಿಗಾ ವಹಿಸಲೇಬೇಕು. ಪ್ರೀತಿಸುವ ಅಥವಾ ಜೊತೆಗೆ ಇರಬಯಸುವ ಗಂಡಸು ಪ್ರತೀ ಬಾರಿಯೂ ಜೊತೆಗೆ ಸಮಯ ಕಳೆಯಲು ಕಾರಣಗಳನ್ನು ಹುಡುಕುತ್ತಾನೆ, ಸನ್ನಿವೇಶಗಳನ್ನು ಸೃಷ್ಟಿಸುತ್ತಾನೆ. ಆದ್ರೆ ಇದ್ಯಾವುದೂ ನಡೆಯುತ್ತಿಲ್ಲ ಎಂದರೆ ಅವನಿಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಅರ್ಥ.

2. ನಿಮ್ಮ ಫೋನಿಗೆ ಅವನ ಕರೆ, ಮೆಸೇಜ್ ಮೊದಲಿಗಿಂತ ಕಡಿಮೆಯಾಗಿದ್ಯಾ? ಎಚ್ಚೆತ್ತುಕೊಳ್ಳಿ

ಫೋನ್ ಹೇಗೆ ಬಳಸುವುದು ಎನ್ನುವುದನ್ನು ಗಂಡಸರಿಗೆ ಹೇಳಿಕೊಡಬೇಕಾಗಿಲ್ಲ. 24 ಗಂಟೆಯೂ ಫೋನಿನಲ್ಲೇ ಮುಳುಗಿರುವ ಅವರು ನಿಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ, ಮೆಸೇಜ್ ಗಳಿಗೆ ಉತ್ತರ ಬರುತ್ತಿಲ್ಲ ಎಂದರೆ ಸ್ವಲ್ಪ ಯೋಚಿಸಲೇಬೇಕು. ಬ್ಯುಸಿಯಾಗಿದ್ದೆ, ಮೀಟಿಂಗ್ ನಲ್ಲಿದ್ದೆ ಎನ್ನುವ ಕಾರಣಗಳೆಲ್ಲಾ ಯಾವಾಗಲೂ ನಂಬಲರ್ಹವಲ್ಲ.

3. ನಿಮ್ಮ ಇಷ್ಟಕಷ್ಟಗಳ ಬಗ್ಗೆ ಅವನಿಗೆ ಗಮನವಿಲ್ಲವಾ?

“ಪಾಪ, ಇತ್ತೀಚೆಗೆ ಆಫೀಸಿನಲ್ಲಿ ಅವನಿಗೆ ತುಂಬಾ ಕೆಲಸ. ಸುಸ್ತಾಗಿರ್ತಾನೆ…ಹಾಗಾಗಿ ಇದೆಲ್ಲದರ ಬಗ್ಗೆ ಗಮನ ಹರಿಸೋಕೆ ಆಗಿರುವುದಿಲ್ಲ” ಎನ್ನುವುದು ಹೆಂಗಸರು ತಮಗೆ ತಾವೇ ಕೊಟ್ಟುಕೊಳ್ಳುವ ಸಮಾಧಾನದ ಉತ್ತರ. ಆದ್ರೆ ನಿಮ್ಮ ಇಷ್ಟಗಳ ಪರಿಚಯವಿದ್ದರೂ ಅದರ ಬಗ್ಗೆ ಆತನ ಗಮನ ಇಲ್ಲವೆಂದರೆ ಈ ಸಂಬಂಧ ಮುಗಿಸಲು ಆತ ರೆಡಿಯಾಗಿದ್ದಾನೆ ಎನ್ನುವುದೇ ಅರ್ಥ.

4. ಸಾರ್ವಜನಿಕವಾಗಿ ನಿಮ್ಮ ಗೌರವದ ಬಗ್ಗೆ ಅವನಿಗೆ ಕಾಳಜಿಯಿಲ್ಲವಾ?

ಅವನು ನಿಜವಾಗಲೂ ನಿಮ್ಮನ್ನು ಪ್ರೀತಿಸುತ್ತಿದ್ರೆ ನಿಮ್ಮನ್ನು ಖುಷಿಯಾಗಿಡಲು ಎಲ್ಲಾ ಪ್ರಯತ್ನಗಳನ್ನೂ ಮಾಡೇ ಮಾಡ್ತಾನೆ. ಆದ್ರೆ ಸಾರ್ವಜನಿಕವಾಗಿ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತಿದ್ರೂ ಅವನು ಸುಮ್ಮನಿದ್ದಾನಾ? ಅಥವಾ ಕಾಲೆಳೆಯುವ ನೆಪದಲ್ಲಿ ಎಲ್ಲರೆದುರು ಅವನು ನಿಮ್ಮನ್ನು ಅವಮಾನಿಸುತ್ತಿದ್ದಾನಾ? ಹಾಗಾದರೆ ಅವನು ನಿಮ್ಮನ್ನು ದೂರವಿಡೋ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿರುವುದು ಪಕ್ಕಾ ಎಂದುಕೊಳ್ಳಿ.

5. ನಿಮ್ಮ ಮದುವೆ ತಾರೀಖು ಮುಂದೆ ಹೋಗುತ್ತಿದೆಯಾ? ಗಮನಿಸಿ

ಇದು ಸಂಬಂಧದ ಅಂತ್ಯದ ಕೊನೆಯ ಕರೆಗಂಟೆ. ಎಲ್ಲಾ ಪ್ರೇಮಿಗಳೂ ಮದುವೆಯಾಗುವ ಕನಸು ಕಂಡಿರ್ತಾರೆ. ಆದ್ರೆ ತಾವು ಅಂದುಕೊಂಡ ಸಮಯಕ್ಕೆ ಮದುವೆಯಾಗುವುದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ಹಾಗಂತ ಪ್ರತೀ ಬಾರಿಯೂ ಒಂದೊಂದು ಕಾರಣ ಕೊಟ್ಟು ಮದುವೆಯನ್ನು ಆತ ಮುಂದೆ ಹಾಕುತ್ತಲೇ ಇದ್ದಾನಾ? ನೀವು ಸ್ವಲ್ಪ ಹುಷಾರಾಗಿರಿ. ಪ್ರೀತಿಸಿದಾಗ ಇದ್ದ ಆಸಕ್ತಿ ಮದುವೆಯಾಗಲು ಇಲ್ಲ ಎಂದರೆ ಆತನ ಮನಸ್ಸು ಮತ್ತೆಲ್ಲೋ ನಿಂತಿದೆ ಎಂದೇ ಅರ್ಥ.

ಇವೆಲ್ಲವೂ ಸಂಬಂಧವನ್ನು ಕೊನೆಗಾಣಿಸಲು ಹವಣಿಸುವ ಗಂಡಸಿನ ನಡವಳಿಕೆಗಳು. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ರೆ ಸಂಬಂಧ ಮುರಿಯಲು ನೆಪ ಹುಡುಕದೇ ಬದುಕನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸಲು ಸಹಕಾರಿಯಾಗುವುದು ಗ್ಯಾರಂಟಿ.

Comments are closed.