ಪ್ರತಿಭಟನಾನಿರತ ಮುಸ್ಲಿಮರ ವಿರುದ್ಧ ಕೋಮುವಾದಿ ಹೇಳಿಕೆ ನೀಡಿದ ಪೊಲೀಸ್ ಅಧಿಕಾರಿ..!

ಪಶ್ಚಿಮ ಉತ್ತರ ಪ್ರದೇಶದ ಸೂಕ್ಷ್ಮ ಪಟ್ಟಣವಾದ ಮೀರತ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಿಎಎ ವಿರೋಧಿ ಪ್ರತಿಭಟನಾನಿರತ ಮುಸ್ಲಿಮರ ವಿರುದ್ಧ ಕೋಮುವಾದಿ ಹೇಳಿಕೆ ನೀಡಿರುವುದು ವಿಡಿಯೋದಲ್ಲಿ ಚಿತ್ರೀಕರಣವಾಗಿದ್ದು ವಿವಾದ ಉಂಟುಮಾಡಿದೆ.

ಕಳೆದ ಶುಕ್ರವಾರ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾಗ ಮೀರತ್‌ ನಗರದ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅಖಿಲೇಶ್ ನಾರಾಯಣ್ ಸಿಂಗ್ “ಕಪ್ಪು ಮತ್ತು ಹಸಿರು ಬ್ಯಾಂಡ್‌ ಧರಿಸಿರುವವರು ಯಾರು? ಅವರಿಗೆ ಪಾಕಿಸ್ತಾನಕ್ಕೆ ಹೋಗಲು ಹೇಳು” ಎಂದು ನಿಂದಿಸಿದ್ದಾರೆ.

ನಿಮಗೆ ಇಲ್ಲಿರಲಿ ಇಷ್ಟವಿಲ್ಲದಿದ್ದರೆ ಪಾಕಿಸ್ತಾನಕ್ಕೆ ಹೋಗಿ, ನೀವು ಇಲ್ಲಿಗೆ ಬಂದು ಅಲ್ಲಿರುವವರನ್ನು ಹೊಗಳಿದರೆ ನಾವು ಸುಮ್ಮನಿರಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ನಾನು ಇಲ್ಲಿನ ಪ್ರತಿಯೊಬ್ಬರನ್ನು ಮನೆಯಿಂದ ಜೈಲಿಗೆ ಅಟ್ಟುತ್ತೇನೆ, ನಿಮ್ಮೆಲ್ಲರನ್ನು ನಾಶಮಾಡುತ್ತೇನೆ ಎಂದು ಸಹ ಪೊಲೀಸರು ಹೇಳಿದ್ದಾರೆ.

ಅಲ್ಲಿದ್ದ ಮೂವರು ಮುಸ್ಲಿಮರು ಪೊಲೀಸರ ಮಾತುಗಳಿಗೆ ಮರುಮಾತಾಡದೆ ಸುಮ್ಮನಿರುವುದು ಕಂಡುಬಂದಿದೆ. ಅವರು ಹು ಅಂತಷ್ಟೇ ಹೇಳಿದ್ದಾರೆ. ಈ ರೀತಿಯಾಗಿ ಪೊಲೀಸರು ದೌರ್ಜನ್ಯವೆಸಗಿರುವುದು ಸರಿಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಹಾಗಾಗಿ ಹಾಗೆ ಹೇಳಿದೆವು ಅಷ್ಟೇ ಎಂದು ಪೊಲೀಸರು ಜಾರಿಕೊಂಡಿದ್ದಾರೆ.

ಕಳೆದ ವಾರ ಸಹ ಎರಡು ನಿಮಿಷದ 30 ಸೆಕೆಂಡ್‌ನ ವಿಡಿಯೋವೊಂದರಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಹಿಂಸಾಚಾರ ನಡೆಯುತ್ತಿರುವ ರಸ್ತೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಅತ್ಯಂತ ನಿಂದನೀಯ ಮತ್ತು ಕೋಮು ಭಾಷೆಯನ್ನು ಬಳಸಿರುವುದು ಸಹ ಕಂಡುಬಂದಿದೆ.

“ನಾವು ನಿಮ್ಮನ್ನು ಭಾರತದಲ್ಲಿ ಉಳಿಯಲು ಬಿಡುವುದಿಲ್ಲ” ಎಂದು ಪೊಲೀಸ್‌ ಕೂಗಿ ಹೇಳುತ್ತಿರುವುದು ಕಂಡುಬಂದಿದೆ. ಏನೇ ಆದರೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಆಂದೋಲನಗಳ ವಿರುದ್ಧ ತಮ್ಮ ಸರ್ಕಾರದ ದಬ್ಬಾಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಕ್ರಮದಿಂದ ಪ್ರತಿಭಟನಾಕಾರರು ಸುಮ್ಮನಾಗಿದ್ದಾರೆ ಎಂದು ಅವರು ಹೇಳಿದ್ದಾರೆ.