ಕುವೆಂಪುರವರು ಹುಟ್ಟಿದ ದಿನ ಡಿ.29ರಂದು ಕರ್ನಾಟಕದಲ್ಲಿ ವಿಶಿಷ್ಠ ಕಾರ್ಯಕ್ರಮ..

‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಟ್ಯಾಗ್‌ಲೈನ್ ಜೊತೆಗೆ, ಡಿಸೆಂಬರ್ 29ರಂದು ಕುವೆಂಪುರವರು ಹುಟ್ಟಿದ ದಿನ ಕರ್ನಾಟಕದಲ್ಲಿ ವಿಶಿಷ್ಠ ಕಾರ್ಯಕ್ರಮ ನಡೆಯುತ್ತಿದೆ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಜೊತೆಗೂಡಿ “ಸಹಸ್ರ ಸಹಭೋಜನ” ಕರ್ನಾಟಕದ ಸಾವಿರ ಕಡೆಗಳಲ್ಲಿ ಸಂವಿಧಾನದ ಮುನ್ನುಡಿಯ ಓದು ಮತ್ತು ಜೊತೆಗೆ ಸಹಭೋಜನ ಮಾಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮ ಊರಿನಲ್ಲಿಯೂ ಕೂಡ ನಡೆಸಬಹುದು ಎಂಬುದಾಗಿ ಕರೆ ನೀಡಲಾಗಿದೆ.

ನಮ್ಮ ಪ್ರೀತಿಯ ಭಾರತವನ್ನು ವಿಭಜಿಸಲು ಬಿಡುವುದಿಲ್ಲ ಎಂದು ಘೋಷಿಸಿರುವ ಈ ಕಾರ್ಯಕ್ರಮವು ಯಾವ ಸಂಘಟನೆ, ಒಕ್ಕೂಟಗಳ ಬ್ಯಾನರ್ ಅಡಿಯಲ್ಲೂ ನಡೆಯುವುದಿಲ್ಲ. ಜನ ಸ್ವಪ್ರೇರಣೆಯಿಂದ ದೇಶದ ಸಹಬಾಳ್ವೆ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ಈ ಕಾರ್ಯಕ್ರಮ ನಡೆಯುತ್ತಿದ್ದು ವಿಶ್ವಮಾನವ ಸಂದೇಶ ಸಾರಿದ ಕುವೆಂಪುರವರ ಜನ್ಮದಿನದಂದೇ ಕರ್ನಾಟಕದಾದ್ಯಂತ ನಡೆಯುತ್ತಿದೆ. ಕನಿಷ್ಠ ಒಂದು ಸಾವಿರ ಕಡೆ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ.

ಆಯೋಜಕರ ಮತ್ತು ಆ ಊರಿನ ಸಾಧ್ಯತೆಗೆ ತಕ್ಕಂತೆ ಕಾರ್ಯಕ್ರಮದ ಗಾತ್ರ ಹಾಗೂ ಜೊತೆಗೂಡಿ ಏನು ತಿನ್ನಬಹುದು ಎಂಬುದನ್ನು ನಿಗದಿ ಮಾಡಿಕೊಳ್ಳಬಹುದು. ಆದರೆ ಸಂವಿಧಾನ ಓದು, ವಿವಿಧ ಧರ್ಮ ಹಾಗೂ ಜಾತಿಗಳ ಜನರು ಇರುವಂತೆ ನೋಡಿಕೊಳ್ಳಬೇಕು. ದೊಡ್ಡ ಊರುಗಳಲ್ಲಿ ಒಂದೇ ಕಡೆ ನಡೆಯಬೇಕೆಂದೇನಿಲ್ಲ. ಎಷ್ಟು ಬೇಕಾದರೂ ನಡೆಯಬಹುದು. ಕೆಲವರ ಮನೆಗಳಲ್ಲಿ, ಸಭಾಂಗಣಗಳಲ್ಲಿ, ಮೈದಾನಗಳಲ್ಲಿ ಎಲ್ಲಿ ಬೇಕಾದರೂ ಮಾಡಬಹುದು. ಕನಿಷ್ಠ 10 ಜನದಿಂದ 10,000 ಜನರವರೆಗೆ ಎಷ್ಟು ಜನರಾದರೂ ಸೇರಬಹುದು ಎಂದು ಕರೆ ನೀಡಲಾಗಿದೆ.

ಇದರ ಪರಿಣಾಮ (ಅಂದರೆ ಸಂವಿಧಾನದ ಮುನ್ನುಡಿಯನ್ನು ಗಟ್ಟಿಯಾಗಿ ಸಾಮೂಹಿಕವಾಗಿ ಓದುವುದು ಮತ್ತು ಹಿಂದೂ, ಮುಸ್ಲಿಂ, ಕ್ರೈಸ್ತ ದಲಿತ, ಮಹಿಳೆಯರು, ವಿದ್ಯಾರ್ಥಿಗಳು ಒಂದೆಡೆ ಸೇರಿ ಸಹಭೋಜನ ಮಾಡುವುದು – ಒಂದೇ ದಿನ ಸಾವಿರ ಕಡೆ) ಹಲವು ರೀತಿಯದ್ದಾಗಿರುತ್ತದೆ ಎಂಬುದನ್ನು ನೀವು ಊಹಿಸಬಲ್ಲಿರಿ. ಸ್ವಾಮೀಜಿಗಳು, ಮುಲ್ಲಾಗಳು, ಎಲ್ಲಾ ಜಾತಿಯ ಜನರನ್ನೂ ಒಳಗೊಳ್ಳಬಹುದು. ಈಗಾಗಲೇ 75 ಊರುಗಳಲ್ಲಿ ನಿಗದಿಯಾಗಿದ್ದು, ಪ್ರತಿ ಗಂಟೆಗೂ ಸಂಖ್ಯೆ ಏರುತ್ತಿದೆ “ಸಹಸ್ರ ಸಹಭೋಜನ” ಫೇಸ್‌ಬುಕ್‌ ಪುಟದಲ್ಲಿ ಪ್ರಕಟಿಸಲಾಗಿದೆ.

ನೀವು ಎಲ್ಲಿಯಾದರೂ ಇದನ್ನು ಸಂಘಟಿಸಬಹುದೇ? ಹಾಗೆಯೇ ನಿಮ್ಮ ಗೆಳೆಯರು (ಯಾವ ಊರಾದರೂ ಸರಿ) ಎಲ್ಲೆಲ್ಲಿ ಸಂಘಟಿಸಬಹುದು? ಕೂಡಲೇ ತಿಳಿಸಿ. ಮಾಡುವವರ ಸಹಾಯ ಸಂಪರ್ಕಕ್ಕಾಗಿ 9353666821 ಗೆ ಸಂಪರ್ಕಿಸಬಹುದೆಂದು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಸಹಸ್ರ ಸಹಭೋಜನ ಫೇಸ್ಬುಕ್ ಪುಟ ಸಹಾ ನೋಡಬಹುದು.

ಈ ಕಾರ್ಯಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳಷ್ಟು ಜನರು ತಮ್ಮ ಊರಿನಲ್ಲಿಯೂ ಸಹ ಆಯೋಜಿಸುವುದಾಗಿ ವಾಲಂಟಿಯರ್‌ ಮಾಡಿದ್ದಾರೆ. ಇದುವೇ ದೇಶವನ್ನು ಉಳಿಸುವ ಮಾರ್ಗ ಎಂದು ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ.