JNU ವಿದ್ಯಾರ್ಥಿಗಳ ಮೇಲಿನ ಹಿಂಸೆ ಖಂಡಿಸಿ ಜೆಎನ್‌ಯುಗೆ ತೆರಳಿ ಹೋರಾಟನಿರತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ ಖ್ಯಾತ ಚಿತ್ರನಟಿ ದೀಪಿಕಾ ಪಡುಕೋಣೆಯ ದಿಟ್ಟತನಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಅಲ್ಲದೇ ನಿನ್ನೆ ಸಂಜೆಯಿಂದ ದೀಪಿಕಾ ಹೆಸರು ಟ್ವಿಟ್ಟರ್‌ನಲ್ಲಿ ಸತತವಾಗಿ ಟಾಪ್‌ ಟ್ರೆಂಡಿಂಗ್‌‌ನಲ್ಲಿದೆ.

ಜೆಎನ್‌ಯು ಭೇಟಿಗೂ ಮುನ್ನ ದೀಪಿಕಾ ಜೆಎನ್‌ಯು ಹಿಂಸೆ ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿ “ಈ ದಾಳಿಗಳಿಂದ ನಾವು ಭಯಗೊಂಡಿಲ್ಲ ಎಂಬುದಕ್ಕೆ ಹೆಮ್ಮೆಯಾಗುತ್ತದೆ” ಎಂದು ಪ್ರತಿಕ್ರಿಯಿಸಿದ್ದರು.

ನಿಮ್ಮ ಒಗ್ಗಟ್ಟು ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಿಮ್ಮನ್ನು ಇಂದು ನಿಂದಿಸಬಹುದು ಅಥವಾ ಟ್ರೋಲ್ ಮಾಡಬಹುದು, ಆದರೆ ನಿಮ್ಮ ಧೈರ್ಯ ಮತ್ತು ಭಾರತದ ಕಲ್ಪನೆಯ ಪರ ನಿಂತಿದ್ದಕ್ಕಾಗಿ ಇತಿಹಾಸವು ನಿಮ್ಮನ್ನು ನೆನಪಿಸಿಕೊಳ್ಳುತ್ತದೆ. ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ದೀಪಿಕಾ ಪಡುಕೋಣೆ ಎಂದು ಕನ್ಹಯ್ಯ ಕುಮಾರ್‌ ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆಯ ಧೈರ್ಯ ಮತ್ತು ಬದ್ಧತೆಯನ್ನು ಮೆಚ್ಚಲೇಬೇಕು. ಜೆಎನ್‌ಯು ಪ್ರವೇಶಿಸಿ ದಾಳಿಗೆ ಒಳಗಾದವರ ಜತೆ ನಿಲ್ಲುವುದು ಅಷ್ಟು ಸುಲಭವಲ್ಲ, ಅದೂ ದೀಪಿಕಾರಂಥ ಸೆಲೆಬ್ರಿಟಿಗಳಿಗೆ.‌ ದ್ವೇಷಭಕ್ತರು ಇನ್ನು ಮುಂದೆ ದೀಪಿಕಾ ಅವರನ್ನು ತುಳಿಯಲು ಸಾಧ್ಯವಿರುವ ಎಲ್ಲ‌ ಮಾರ್ಗಗಳನ್ನೂ ತುಳಿಯಲಿದ್ದಾರೆ. ಇದು ದೀಪಿಕಾ ಅವರಿಗೆ ಗೊತ್ತಿಲ್ಲದ ವಿಷಯವೇನಲ್ಲ. ನನ್ನ ಸಿನಿಮಾ ಬಿಡುಗಡೆಗೆ ಸಿದ್ಧವಿದೆ, ಮಾತಾಡಿದರೆ ನಿರ್ಮಾಪಕರಿಗೆ ನಷ್ಟ ಎಂದು ಅಜಯ್ ದೇವಗನ್‌ ಇತ್ತೀಚಿಗೆ ಹೇಳಿದ್ದ ನೆನಪು.‌ ಖಾನ್ ಗಳ‌ ಪೈಕಿ ನಿಜಕ್ಕೂ ಮಾತನಾಡುವ ಎದೆಗಾರಿಕೆ‌ ಇದ್ದ ಅಮೀರ್ ಖಾನ್‌ ಕೂಡ‌ ಸುಮ್ಮನಿದ್ದಾರೆ.‌ ಇಂಥ ಸಂದರ್ಭದಲ್ಲಿ ದೀಪಿಕಾ ತಮ್ಮ ಜೀವನದ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಅವರ ಕುರಿತು ಗೌರವದ ಜತೆ ಹೆಮ್ಮೆ ಮೂಡುತ್ತಿದೆ ಎಂದು ಪತ್ರಕರ್ತರಾದ ದಿನೇಶ್‌ ಕುಮಾರ್‌ ದಿನೂ ಅಭಿಪ್ರಾಯಪಟ್ಟಿದ್ದಾರೆ.

ದೀಪಿಕಾ ಪಡುಕೋಣೆ, ಮುದೊಂದು ದಿನ ಭಾರತದ ಇತಿಹಾಸ ಸದಾಕಾಲವೂ ನಿಮ್ಮನ್ನು ನೆನಪಿನಲ್ಲಿಟ್ಟಿರುತ್ತದೆ. ಸತ್ಯದ ಜೊತೆ ನ್ಯಾಯದ ಜೊತೆ ನಿಂತ ನಿಮ್ಮ ನಿಲುವಿನ ಕಾರಣಕ್ಕಾಗಿ, ಧನ್ಯವಾದ ಎಂದು ಶಂಕರ್‌ ಸಿಹಿಮೂಗೆ ತಿಳಿಸಿದ್ದಾರೆ.

ಜೆ ಎನ್ ಯು ಪರವಾಗಿ ತನ್ನ ಬೆಂಬಲವನ್ನು ಘೋಷಿಸಲು ಇವತ್ತು ದೀಪಿಕಾ ಪಡುಕೋಣೆ ಜೆ ಎನ್ ಯುವಿಗೆ ಬಂದಿದ್ದರು. ಅವರಿಗೆ ಕೃತಜ್ಞತೆಗಳು. ಜೆ ಎನ್ ಯು ಹೊಸ ತಲೆಮಾರಿನ ಕನಸು. ಅದನ್ನು ಯಾರೂ ನಾಶ ಮಾಡಲಾರರು ಎಂದು ಅಲ್ಲಿಯ ಪ್ರಾಧ್ಯಾಪಕರಾದ ಪ್ರೊ.ಪುರುಷೋತ್ತಮ್‌ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಜನವರಿ 10ರಂದು ದೀಪಿಕಾ ಪಡುಕೋಣೆಯವರ ಮಹತ್ವದ ಚಪಾಕ್‌ ಚಿತ್ರ ಬಿಡುಗಡೆಯಾಗುತ್ತಿದೆ. ಅವರು ಜೆಎನ್‌ಯುಗೆ ಬೆಂಬಲ ಕೊಟ್ಟಿದ್ದಕ್ಕೆ ಆ ಚಿತ್ರವನ್ನು ನೋಡಬಾರದು ಎಂದು ಕೆಲವರು ಬಲಪಂಥೀಯರು ಹುಯಿಲು ಹಬ್ಬಿಸಲು ಮುಂದಾಗಿದ್ದಾರೆ. ಅದಕ್ಕೆ ಸಾಕಷ್ಟು ವಿರೋಧ ಬಂದಿದ್ದು, ಲಕ್ಷಾಂತರ ಜನ ದೀಪಿಕಾ ಬೆಂಬಲಕ್ಕೆ ನಿಂತಿದ್ದಾರೆ. ಅದಕ್ಕೆ ಖ್ಯಾತ ಯುವಚಿಂತಕ ಧೃವ್‌ ರಾಠೀ ಕೊಟ್ಟ ಉತ್ತರ ಕೆಳಗಿನಂತಿದೆ.

ಭಕ್ತರು ಬಹಿಷ್ಕರಿಸಲು ಪ್ರಯತ್ನಿಸಿದ ಚಿತ್ರಗಳ ಪಟ್ಟಿ

– ಪದ್ಮಾವತ್ (₹ 580 ಕೋಟಿ ಲಾಭ)
– ಪಿಕೆ (₹ 850 ಕೋಟಿ ಲಾಭ)
– ದಂಗಲ್ (2000 ಕೋಟಿ ಲಾಭ)
– ವೀರೆ ಡಿ ವೆಡ್ಡಿಂಗ್ (₹ 140 ಕೋಟಿ ಲಾಭ)

ಈಗ ಚಪಾಕ್‌ ಸಿನೆಮಾ ಕೂಡ ಸೂಪರ್ ಸೂಪರ್ ಹಿಟ್ ಆಗಲು ಕಾಯಿರಿ.. ಎಂದು ಛೇಡಿಸಿದ್ದಾರೆ.

ಆಕಾಶ್‌ ಬ್ಯಾನರ್ಜಿಯವರು ಕಾಳಜಿಯುತ ಮಾತುಗಳು ಈ ಟ್ವೀಟ್‌ನಲ್ಲಿದ್ದರೆ ಮತ್ತೊಬ್ಬ ಕನ್ನಡಿಗ ಡೂಡಲ್‌ಗಾರ ಅರವಿಂದ ತೆಗ್ಗಿನಮಠ ರಚಿಸಿದ ಸರಳ ಚಿತ್ರ ವೈರಲ್‌ ಆಗಿದೆ.

ಇನ್ನು ನಿನ್ನೆ ಸಂಜೆಯಿಂದ ಇಂದಿನವರೆಗೂ ಟ್ವಿಟ್ಟರ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ತುಂಬಿಹೋಗಿದ್ದಾರೆ. ಟಾಪ್‌ ಟ್ರೆಂಡಿಂಗ್‌ನಲ್ಲಿದ್ದು ಮನೆಮಾತಾಗಿದ್ದಾರೆ. ಆಕೆ ಕನ್ನಡತಿಯಾಗಿರುವುದರಿಂದಲೂ ಕನ್ನಡಿಗರೂ ಸಹ ಪ್ರೀತಿಯಿಂದ ಅಭಿನಂದಿಸಿದ್ದಾರೆ.

Donate