ಕುಟುಂಬ ಹೋಳು ಎಸ್ ಪಿ ಗೋಳು ಮತ್ತೆ ಬಂದ ಅಖಿಲೇಶ್

ಸಮಾಜವಾದಿ ಪಕ್ಷದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿ ಪ್ರತ್ಯೇಕ ಪಟ್ಟಿ ಬಿಡುಗಡೆ ಮಾಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಉತ್ತರಪ್ರದೇಶದ ಸಿಎಂ ಅಖೀಲೇಶ್ ಯಾದವ್ ಅವರು ಮತ್ತೆ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಸುದ್ದಿಗೋಷ್ಠಿ ನಡೆಸಿದ್ದ ಮುಲಾಯಂ ಸಿಂಗ್‌ ಯಾದವ್‌ ಸಮಾಜವಾದಿ ಪಕ್ಷದಿಂದ ಮಗ ಅಖಿಲೇಶ್‌ ಯಾದವ್‌ ಹಾಗೂ ಎಸ್‌ಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ ಗೋಪಾಲ್ ಯಾದವ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದರು.
 ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಇದ್ದು, ಚುನಾವಣೆಯ ದೃಷ್ಟಿಕೋನವನ್ನು ಇಟ್ಟುಕೊಂಡು ತಮ್ಮ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್‌ಗೋಪಾಲ್‌ ಯಾದವ್ ಅವರನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್ ಇಂದು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
ಇನ್ನೂ ನಿನ್ನೆ ಉಚ್ಛಾಟನೆಗೊಂಡ ಬಳಿಕ ಅಖಿಲೇಶ್ ಯಾದವ್ ನಡೆಸಿದ್ದ ಬೆಂಬಲಿಗರ ಸಭೆಯಲ್ಲಿ ಒಟ್ಟು 207 ಶಾಸಕರು, 53 ಅಭ್ಯರ್ಥಿಗಳು ಹಾಗೂ 37 ಎಂಎಲ್‌‌ಸಿಗಳು ಭಾಗವಹಿಸಿದ್ದರು. ಅಖಿಲೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳುವಂತೆ ಕೆಲವು ನಾಯಕರು ಮುಲಾಯಂ ಸಿಂಗ್‌ ಅವರಿಗೆ ಒತ್ತಾಯಿಸಿದ್ದರಿಂದ ಮತ್ತೆ ಇಬ್ಬರನ್ನೂ ಕೂಡ ಪಕ್ಷಕ್ಕೆ ವಾಪಾಸ್ಸು ಸೇರಿಸಿಕೊಳ್ಳಲಾಗಿದೆ.
ಒಟ್ಟಾರೆ ಉತ್ತರಪದೇಶದಲ್ಲಿ ತಂದೆ ಹಾಗೂ ಮಗನ ನಡುವಿನ ರಾಜಕೀಯ ಶೀತಲ ಸಮರ ಮುಂದುರೆದಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ. ಅಪ್ಪ ಮಗನ ವರ್ಚಸ್ಸು ಚುನಾವಣೆಯಲ್ಲಿ ಪಕ್ಷಕ್ಕೆ ಕೈಹಿಡಿಯುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.