ಖಾಲಿಯಾಗುತ್ತಿರುವ ಕರ್ನಾಟಕದ ಖಜಾನೆ, BSY ಕೈಕಟ್ಟಿಹಾಕಿರುವ ಹಣಕಾಸಿನ ಮುಗ್ಗಟ್ಟು…

ಹಲವಾರು ನಿರೀಕ್ಷೆಗಳೊಂದಿಗೆ ಕಳೆದ ವರ್ಷ ಅಧಿಕಾರದ ಗದ್ದುಗೆ ಏರಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಮೆಚ್ಚಿನ ಯೋಜನೆಗಳನ್ನು ಜಾರಿಗೆ ತರಲು ಕೈಕೈ ಹಿಸುಕಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ.


ಖಾಲಿಯಾಗುತ್ತಿರುವ ಖಜಾನೆ ಯಡಿಯೂರಪ್ಪನವರ ಆಸೆಗಳಿಗೆ ತಣ್ಣೀರು ಎರಚಿದೆ. ಕೇಂದ್ರದಿಂದ ಬರಬೇಕಾದ ತೆರಿಗೆ ಬಾಕಿ ಮತ್ತು ಪರಿಹಾರ ಅನುದಾನದ ಬಿಡುಗಡೆಯಲ್ಲಿನ ವಿಳಂಬ, ಕಳೆದ ವರ್ಷಾಂತ್ಯಕ್ಕೆ ರಾಜ್ಯವನ್ನು ಕಾಡಿದ ನೆರೆ ಸ್ಥಿತಿ ಮತ್ತು ಹಿಂದಿನ ಸರಕಾರದ ಸಾಲಮನ್ನಾ ಯೋಜನೆಗಳಿಂದಾಗಿ ಖಜಾನೆ ತುಂಬುದವುದೇ ಕಷ್ಟವಾಗಿದೆ.

ಹೀಗಿರುವಾಗ ಹೊಸ ಯೋಜನೆಗಳನ್ನು ಜಾರಿಗೆ ತರುವುದಾದರೂ ಹೇಗೆ. ಅವುಗಳಿಗೆ ಹಣ ಒದಗಿಸುವುದು ಹೇಗೆ ಎಂಬ ಚಿಂತೆ ಬಿಎಸ್ವೈ ಅವರನ್ನು ಕಾಡುತ್ತಿದೆ ಎಂದು ವರದಿಗಳು ಹೇಳಿವೆ.

ಮೈತ್ರಿ ಸರಕಾರದ 42 ಸಾವಿರ ರೂ ಸಾಲಮನ್ನಾ ಜೊತೆಗೆ ಬಿಎಸ್ವೈ ಅವರು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿ ರೈತರಿಗೆ ನಾಲ್ಕು ಸಾವಿರ ರೂಗಳ ಹೆಚ್ಚುವರಿ ನೆರವು ನಿಡುವುದಾಗಿ ಘೋಷಿಸಿದರಲ್ಲದೇ ನೆರೆಯಲ್ಲಿ ಮನೆ ಕಳೆದುಕೊಂವರಿಗೆ ಐದು ಲಕ್ಷ ರೂಗಳ ನೆರವನ್ನೂ ಘೋಷಣೆ ಮಾಡಿದ್ದರು. ಇವೆಲ್ಲವೂ ರಾಜ್ಯದ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ.

ಇನ್ನು ಈ ಬಾರಿ ರಾಜ್ಯದ ತೆರಿಗೆ ಸಂಗ್ರಹ ಸಹ ಕುಂಠಿತಗೊಂಡಿದ್ದು, ಶೇ. 70ರಷ್ಟು ಮಾತ್ರ ತೆರಿಗೆ ಸಂಗ್ರಹ ವರದಿಯಾಗಿದ್ದು, ಇದು ಈ ಬಾರಿಯ ಬಜೆಟ್ ಕಸರತ್ತನ್ನು ಮತ್ತಷ್ಟು ಜಟಿಲಗೊಳಿಸಿದೆ ಎಂದು ಮೂಲಗಳನ್ನು ಉದ್ಧರಿಸಿ ಆಂಗ್ಲ ಪತ್ರಿಕೆ ವರದಿ ಮಾಡಿದೆ.