ಬಿಜೆಪಿಗೆ ಸೇರ್ಪಡೆಯಾದ ಬ್ಯಾಡ್ಮಿಂಟಲ್ ತಾರೆ : ಕಮಲದ ಪರ ಚುನಾವಣಾ ಪ್ರಚಾರ ಸಾಧ್ಯತೆ

ಬ್ಯಾಡ್ಮಿಂಟಲ್ ತಾರೆ ಸೈನಾ ನೆಹ್ವಾಲ್ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಂದ ಸೈನಾ ನೆಹ್ವಾಲ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದರು. ಸೈನಾ ಜೊತೆಗೆ ಅವರ ಸಹೋದರಿ ಚಂದ್ರಾಂಶು ಕೂಡ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ಬ್ಯಾಡ್ಮಿಂಟನ್ ಆಟಗಾರ್ತಿ ಬಿಜೆಪಿ ಸೇರ್ಪಡೆಗೊಂಡಿದ್ದು, ದೆಹಲಿಯ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ನಾನು ದೇಶಕ್ಕಾಗಿ ಹಲವು ಪದಕಗಳನ್ನು ಗೆದ್ದುಕೊಂಡಿದ್ದೇನೆ. ನಾನು ಕಠಿಣ ಪರಿಶ್ರಮ ಪಡುವ ವ್ಯಕ್ತಿಯಾಗಿದ್ದು, ಕಠಿಣ ಪರಿಶ್ರಮ ಪಡುವ ವ್ಯಕ್ತಿಗಳನ್ನು ನಾನು ಇಷ್ಟ ಪಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಕಠಿಣ ಪರಿಶ್ರಮ ಪಡುವ ವ್ಯಕ್ತಿ. ಹೀಗಾಗಿ ಇವರ ಜೊತೆ ಸೇರಿಕೊಂಡು ದೇಶಕ್ಕಾಗಿ ಕೆಲಸ ಮಾಡಬೇಕೆಂಬ ಆಸೆಯಿದೆ ಎಂದು ಹೇಳಿದರು.

ಹರ್ಯಾಣ ಮೂಲದ ಸೈನಾ ನೆಹ್ವಾಲ್ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸುವ ಸಾಧ್ಯತೆಯಿದೆ. ದೆಹಲಿ ಚುನಾವಣೆ ಫೆ.8 ರಂದು ನಡೆಯಲಿದೆ.