ಅಲ್ಲೂ ಇಲ್ಲೂ ಎಲ್ಲೆಲ್ಲೂ ಬಾಹುಬಲಿ..ಕೊನೆಗೆ ಸೀರೆಗಳ ಮೇಲೂ ಮಾಹಿಷ್ಮತಿ ದೊರೆ !

ಅಬ್ಬಬ್ಬಾ ಎಲ್ಲೆಲ್ಲೂ ಬಾಹುಬಲಿ ಸಿನಿಮಾದ್ದೇ ಸೌಂಡು. ಏಪ್ರಿಲ್ 28ಕ್ಕೆ ತೆರೆಗಪ್ಪಳಿಸಿದ ಬಾಹುಬಲಿ ದಿ ಕನ್ಕ್ಲೂಷನ್ ಸಿನಿಮಾ ಅಕ್ಷರಶಃ ಬಾಕ್ಸಾಫೀಸ್ನಲ್ಲಿ ಸುನಾಮಿ ಸೃಷ್ಟಿಸಿದೆ. ಮೊದಲ ದಿನವೇ 100ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದ ಸಿನಿಮಾ ವಾರಾಂತ್ಯದಲ್ಲಿ ಮತ್ತಷ್ಟು ಜೋರಾಗಿ ಸದ್ದು ಮಾಡ್ತಿದೆ.

ಎಸ್. ಎಸ್ ರಾಜಮೌಳಿ ಕನಸ್ಸಿನ ಕೂಸಾದ ಬಾಹುಬಲಿ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನ ಹುಸಿಗೊಳಿಸದೇ ಭರಪೂರ ಮನರಂಜನೆ ಕೊಡ್ತಿದೆ. ಬಾಹುಬಲಿ ಸಿನಿಮಾಗಿರೋ ಕ್ರೇಝ್ ಅನ್ನ ಎನ್ಕ್ಯಾಶ್ ಮಾಡ್ಕೊಂಡು ಮಾರ್ಕೆಟ್ಗೆ ಬಾಹುಬಲಿ ಸೀರೆಗಳನ್ನ ಪರಿಚಯಿಸಲಾಗಿದೆ. ಬಾಹುಬಲಿ ಸಿನಿಮಾ ಪೋಸ್ಟರ್ಗಳನ್ನ ಪ್ರಿಂಟ್ ಮಾಡಿರೋ ಈ ಸೀರೆಗಳಿಗೆ ತೆಲುಗು ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ವ್ಯಕ್ತವಾಗ್ತಿದೆ.

ಬಾಹುಬಲಿ ಈಗ ಕೇವಲ ಸಿನಿಮಾ ಅಲ್ಲ. ಅದೊಂದು ಬ್ರಾಂಡ್. ಈ ಬ್ರಾಂಡ್ ನೇಮ್ ಅನ್ನ ಕೆಲ ಕಂಪೆನಿಗಳು ತಮಗೇ ಬೇಕಾದ ರೀತಿಯಲ್ಲಿ ಬಳಸಿಕೊಳ್ತಿವೆ. ಅದಕ್ಕೆ ಬಾಹುಬಲಿ ಸೀರೆಗಳು ಲೇಟೆಸ್ಟ್ ಎಕ್ಸಾಂಪಲ್. ಬರೀ ತೆಲುಗು ರಾಷ್ಟ್ರಗಳಲ್ಲಿ ಮಾತ್ರವಲ್ಲದೇ ಮುಂಬೈನಲ್ಲೂ ಮಹಿಳೆಯರು ಬಾಹುಬಲಿ ಸೀರೆಗಳಿಗೆ ಮಾರು ಹೋಗಿದ್ದಾರೆ. ಬಾಹುಬಲಿ, ದೇವಸೇನಾ ಬಿಲ್ಲಿ ಬಾಣ ಹಿಡಿದು ನಿಂತಿರೋ ಚಿತ್ರದ ಪೋಸ್ಟರ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಇದೇ ಪೋಸ್ಟರ್ಗಳನ್ನ ಬಾಹುಬಲಿ ಸೀರೆಗಳನ್ನ ಮೇಲೆ ಮುದ್ರಿಸಲಾಗಿದೆ.

ಶುಕ್ರವಾರ ಬಿಡುಗಡೆಯಾಗಿರೋ ಬಾಹುಬಲಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ತಿದ್ದು, ಸೆಲೆಬ್ರೆಟಿಗಳು ಸಹ ಸಿನಿಮಾ ನೋಡಿ ಬಾಹುಬಲಿ ಟೀಂ ಪ್ರಯತ್ನಕ್ಕೆ ಹ್ಯಾಟ್ಸಾಫ್ ಅಂತಿದ್ದಾರೆ. ದೇಶವಿದೇಶದಲ್ಲಿ ಬಾಹುಬಲಿ ಮೇನಿಯಾ ಜೋರಾಗಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿಬಂದಿರೋ ಈ ಸಿನಿಮಾ ವಿಶ್ವ ಚಿತ್ರಜಗತ್ತು ಭಾರತೀಯ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಬಾಹುಬಲಿ ಸಿನಿಮಾ ಮುಂದೆ ಯಾವ ಯಾವ ದಾಖಲೆಗಳನ್ನ ಮುರಿಯುತ್ತೋ ನೋಡ್ಬೇಕು.

Comments are closed.