ಬೆಳಗಾವಿ ಗ್ರಾಮೀಣ ಭಾಗ ಮರಾಠಿಗರಿಗೆ ಸೇರಿದ್ದು – ಶಾಸಕ ರಮೇಶ ಜಾರಕಿಹೊಳಿ

ಬೆಳಗಾವಿ ಗಡಿ ವಿವಾದವನ್ನು ಮತ್ತೊಮ್ಮೆ ಅನಗತ್ಯವಾಗಿ ಮುನ್ನೆಲೆಗೆ ತರುವ ಹುಚ್ಚು ನಾಟಕಗಳನ್ನು ಮಹಾರಾಷ್ಟ್ರದ ಶಿವಸೇನೆ ಆರಂಭಿಸಿರುವ ಹೊತ್ತಿನಲ್ಲೇ, ಇತ್ತ ಶಾಸಕ ರಮೇಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಭಾಗ ಮರಾಠಿಗರಿಗೆ ಸೇರಿದ್ದು ಎಂಬರ್ಥದ ಭಾಷಣ ಮಾಡುವ ಮೂಲಕ ಮೂರ್ಖತನ ಪ್ರದರ್ಶಿಸಿದ್ದಾರೆ.

ಮಹಾಜನ್ ಆಯೋಗದ ವರದಿ ಎಂದೋ ಬೆಳಗಾವಿ ಜಿಲ್ಲೆ ಕರ್ನಾಟಕಕ್ಕೆ ಸೇರಿದ್ದೆಂದು ಹೇಳಿಯಾಗಿದೆ. ಗಡಿಗೆ ಸಂಬಂಧಿಸಿದಂತೆ ಸುಪ್ರಿಂಕೋರ್ಟಿನಲ್ಲಿ ಮಹಾರಾಷ್ಟ್ರ ಸಲ್ಲಿಸಿರುವ ಒಂದು ಅರ್ಜಿ ದಶಕಗಳಿಂದ ಚಲನೆಯಿಲ್ಲದೇ ಮಲಗಿದೆ.

ಆದರೂ ಬೆಳಗಾವಿ ಜಿಲ್ಲೆಯ ಕೆಲ ಭಾಗಗಳಲ್ಲಿ ಮರಾಠಿಗರ ಹೆಸರಿನಲ್ಲಿ ಸ್ವಾರ್ಥ ರಾಜಕಾರಣ ಮಾಡುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಳಗಾವಿ ನಗರ ಮತ್ತು ಜಿಲ್ಲೆಯ ನೂರಾರು ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಹಾರಾಡುವ ಮೂಲಕ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿದೆ.
ಈಗ ಮಹಾರಾಷ್ಟ್ರದಲ್ಲಿ ಹೊಸ ಶಿವಸೇನೆ ನೇತೃತ್ವದ ಸರ್ಕಾರ ಬಂದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಶಿವಸೇನಾಕ್ಕೆ ಸೇರಿದ ಕೆಲವು ಸಚಿವರು ಆಗಾಗ ಬೆಳಗಾವಿ ವಿಷಯ ಪ್ರಸ್ತಾಪಿಸಿ ಶಿವಸೇನೆಯ ಕಾರ್ಯಕರ್ತರನ್ನು ಪ್ರಚೋದಿಸುತ್ತಿದ್ದಾರೆ.

ಸುಪ್ರಿಂಕೋರ್ಟಿನಲ್ಲಿರುವ ಅರ್ಜಿಯ ಕುರಿತಾಗಿ ತ್ವರಿತ ಕ್ರಮಗಳನ್ನು ಕೈಗೊಳ್ಳಲು ತಮ್ಮ ಇಬ್ಬರು ಸಚಿವರಾದ ಚುಗನ್ ಭುಜಬಲ್ ಮತ್ತು ಏಕನಾಥ್ ಶಿಂಧೆ ಅವರನ್ನು ನೇಮಿಸುವ ಮೂಲಕ ಅನಗತ್ಯ ಉಸಾಬರಿಗೆ ಕೈ ಹಾಕಿದ್ದಾರೆ. ಇದರ ಪರಿಣಾಮವಾಗಿ ಕನ್ನಡಿಗರು ಗಣನೀಯವಾಗಿ ವಾಸಿಸುವ ಮಹಾರಾಷ್ಟ್ರದ ಪ್ರದೇಶಗಳಲ್ಲಿ ಶಿವಸೇನೆ ಈಗ ಈ ವಿಷಯವನ್ನು ಎತ್ತಿ ಗಲಾಟೆಗೆ ಯತ್ನಿಸುತ್ತಿದೆ.

ಹೀಗಾಗಿಯೇ ರವಿವಾರದಂದು ಕೊಲ್ಲಾಪುರದಲ್ಲಿ ಗೂಂಡಾಗಿರಿ ಶೈಲಿಯಲ್ಲಿ ಪ್ರತಿಭಟನೆ ನಡೆಸಿದ ಶಿವಸೈನಿಕರು, ಬೆಳಗಾವಿ ಜಿಲ್ಲೆ ತಮ್ಮದೇ ಎಂದು ಕೂಗುತ್ತ, ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರ ಪ್ರತಿಕೃತಿ ದಹನ ಮಾಡಿದ್ದಾರೆ, ಕನ್ನಡ ಚಿತ್ರವೊಂದರ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸಿದ್ದಾರೆ, ಸೊಲ್ಲಾಪುರ ಮತ್ತು ಕರ್ನಾಟಕದ ನಡುವೆ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಇದು ಉದ್ಧಟತನದ ನಡವಳಿಕೆ. ಮುಖ್ಯಮಂತ್ರಿಯಾದ ನಂತರ ಅನಗತ್ಯವಾಗಿ ಬೆಳಗಾವಿ ವಿಷಯದ ಬಗ್ಗೆ ತಲೆ ಕೆಡಿಸಿಕೊಂಡ ಉದ್ಧವ್ ಠಾಕ್ರೆಯವರ ಪ್ರಚೋದನೆ ಇದರ ಹಿಂದೆ ಕೆಲಸ ಮಾಡಿದೆ. ಹೀಗಾಗಿ ಶಿವಸೈನಿಕರು ಮತ್ತೆ ಇಂತಹ ಕೃತ್ಯಕ್ಕೆ ಇಳಿಯದಂತೆ ಸಂಯಮ ಹೇಳುವ ಜವಾಬ್ದಾರಿಯೂ ಅವರದೇ.

ಇನ್ನೊಂದು ಕಡೆ ಉಪ ಮುಖ್ಯಮಂತ್ರಿಯಾಗುವ ಮಹದಾಸೆ ಹೊಂದಿರುವ ಗೋಕಾಕಿನ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಬೆಳಗಾವಿಯ ಬಹಿರಂಗ ಸಭೆಯೊಂದರಲ್ಲಿ ಮಾತನಾಡುತ್ತ, ‘ಬೆಳಗಾವಿ ಗ್ರಾಮೀಣ ಪ್ರದೇಶ ಕ್ಷೇತ್ರದಲ್ಲಿ ಮರಾಠಿಗನೇ ಶಾಸಕನಾಗಬೇಕು, ಅಂತಹ ಅಭ್ಯರ್ಥಿಗೆ ನಾನು 5 ಕೋಟಿ ರೂ. ಆಫರ್ ನೀಡುವೆ’ ಎನ್ನುವ ಮೂಲಕ ಮೂರ್ಖತನ ಪ್ರದರ್ಶಿಸಿದ್ದಾರೆ. ಅಲ್ಲಿನ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿರೋಧಿಸುವ ಭರದಲ್ಲಿ ಅವರು ರಾಜ್ಯಕ್ಕೆ ಮಾರಕವಾಗುವ ಹೇಳಿಕೆ ನೀಡಿರುವುದನ್ನು ರಾಜ್ಯದ ಎಲ್ಲ ಪಕ್ಷಗಳು ಮತ್ತು ನಾಗರಿಕರು ಖಂಡಿಸಲೇಬೇಕಾಗಿದೆ.