ರಾಜ್ಯೋತ್ಸವ ವಿಶೇಷ : ಕನ್ನಡ ಸಾಹಿತ್ಯ ಪರಂಪರೆ ಸಾಗಿ ಬಂದ ಹಾದಿ..

ಕನ್ನಡ ಸಾಹಿತ್ಯ ಎಂಬ ಬಂಗಾರದ ಕಳಸಕ್ಕೆ ಹೊಳಪು ಬರುವದು ನವಂಬರ್ ತಿಂಗಳಲ್ಲಿ ಎನ್ನಬಹುದು. ಕನ್ನಡ ಎಂಬುದು ಸುಂದರ, ಸುಲಲಿತ ಭಾಷೆ. ಅದಕ್ಕೆ ನಮ್ಮ ಕನ್ನಡ ಸಾಹಿತ್ಯದ ಮೊದಲ ಗ್ರಂಥ ಕವಿರಾಜಮಾರ್ಗದಲ್ಲಿ ಈ ರೀತಿ ಹೇಳಲಾಗಿದೆ.-


ಪದನ್ ಅರಿದು ನುಡಿಯಲುಂ ನುಡಿ

ದುದನ್ ಅರಿದು ಆರಿಯಲ್ ಆರ್ಪರ್ ಆ ನಾಡವರ್ಗಳ್

ಚದುರರ್ ನಿಜದಿಂ, ಕುರಿತೋ

ದದೆಯಂ ಕಾವ್ಯಪ್ರಯೋಗ ಪರಿಣಿತಮತಿಗಳ್

ಅಂದರೆ ಕನ್ನಡ ಜನರು ಸಂದರ್ಭಕ್ಕನುಸಾರವಾಗಿ ಮಾತನಾಡಲು ತಿಳಿದವರಷ್ಟೇ ಅಲ್ಲ, ಕಾವ್ಯ ಪ್ರಯೋಗಗಳಲ್ಲಿ ಪರಿಣಿತರು. ಜೊತೆಗೆ ಕನ್ನಡಿಗರನ್ನು ಅಭಿಮಾನದಿಂದ ಈ ರೀತಿ ವರ್ಣಿಸುತ್ತಾನೆ, ಕವಿ-

ಸುಭಟರ್ಕಳ್, ಕವಿಗಳ್, ಸುಪ್ರಭುಗಳ್, ಚೆಲ್ವಿರ್ಕಳ್, ಅಭಿಜನರ್ಕಳ್, ಗುಣಿಗಳ್, ಅಭಿಮಾನಿಗಳ್, ಅತ್ಯುಗ್ರರ್, ಗಂಭೀರ ಚಿತ್ತರ್, ವಿವೇಕಿಗಳ್, ನಾಡವರ್ಗಳ್

ಹೀಗೆ ಕವಿರಾಜ ಮಾರ್ಗದಿಂದ ಪ್ರಾರಂಭವಾದ ಬರಹ ರೂಪದ ಸಾಹಿತ್ಯ ಯಾತ್ರೆ, ಮುಂದೆ ಪಂಪನಲ್ಲಿ ಒಂದು ಅದ್ಭುತವಾದ ತಿರುವನ್ನು ಪಡೆಯಿತು. ಅದು ಮುಂಜಾನೆಯ ಸುಂದರ ಸವಿ ಬೆಳದಿಂಗಳಾಯಿತು. ಅಂದರೆ ನಮ್ಮ ಕನ್ನಡ ಸಾಹಿತ್ಯದ ಕಥನ ಪಂಪನಿಂದ ಇಲ್ಲಿಯವರೆಗೆ ಒಂದು ಸಮೃದ್ಧ ಹೆದ್ದಾರಿಯನ್ನು ನಿರ್ಮಿಸಿದೆ. ಅದರ ಈ ವೈಭವಕ್ಕೆ ತಮ್ಮದೇ ಕೊಡುಗೆ ನೀಡಿದ ಆ ವ್ಯಕ್ತಿಗಳಿಗೆ, ಆ ಕಾಲಘಟಕ್ಕೆ ಅಭಿಮಾನಪೂರ್ವಕ ಹೆಮ್ಮೆ ಪಡುವದು, ಆ ಸಾಧನೆಯ ಗತವೈಭವದ ಹೆಜ್ಜೆಗುರುತುಗಳ ಅರಿವಿನ ಪರಿಚಯ ಆಗಬೇಕಿರುವುದು ಕನ್ನಡಿಗರಾದ ನಮಗೆ ಅವಶ್ಯಕ.

ಹೀಗೆ ಸರಿ-ಸುಮಾರು ಸಹಸ್ರವರ್ಷದ ಸಮೃದ್ಧತೆಯ ಪರಿಚಯ ಸುಲಭದ ಕೆಲಸವಂತೂ ಅಲ್ಲ. ಕನ್ನಡ ಸಾಹಿತ್ಯ ೪ ಹಂತಗಳಲ್ಲಿ ಪ್ರಮುಖ ಹೊಸ-ರೂಪಗಳನ್ನು ಪಡೆದಿದೆ. ಅದು ಕವಿ ಕಾವ್ಯ ಅವರ ದೃಷ್ಠಿಕೋನಕ್ಕೆ ಅನುಗುಣವಾಗಿ ಮತ್ತು ಭಾಷೆ-ಛಂಧೋ ರೂಪಗಳಲ್ಲಿ ತನ್ನದೇ ಹೊಸ-ಹೊಸ ರೂಪಗಳೊಂದಿಗೆ ಸಾಹಿತ್ಯ ಕನ್ನಿಕೆಗೆ ಹೊಸ ಹೊಸ ರೂಪ ನೀಡುತ್ತಾ ಹೋಯಿತು. ಚಂಪೂ ಎಂಬ ಕಾವ್ಯಮಾರ್ಗದ ಶ್ರೇಷ್ಠ ಪರಂಪರೆಯ ಶ್ರೇಷ್ಠ ಪ್ರತಿನಿಧಿಯಾದ ಪಂಪನಿಂದ ಮುಂದೆ, ರನ್ನ, ಪೊನ್ನ, ರುದ್ರಭವ್ವ ನಾಗವರ್ಮ ನಯಸೇನ, ನೇಮಿಚಂದ್ರ, ಅಂಡಯ್ಯ, ಜನ್ನ, ನಾಗಚಂದ್ರ, ಹರಿಹರ, ಕ್ಷಡಕ್ಷರಿ ಇವರೂಗಳೂ ತಮ್ಮದೇ ಕೊಡುಗೆ ನೀಡಿದ್ದಾರೆ.

ನಂತರ ’ವಚನ’ ಗಳ ಕಾಲಧರ್ಮ. ಜೇಡರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವ ಅಷ್ಟೇ ಅಲ್ಲದೇ, ಜನಸಾಮಾನ್ಯರೂ & ಸ್ತ್ರೀಯರು ತಾವೂ ಕಾವ್ಯ ಸೃಷ್ಟಿ ಮಾಡಬಲ್ಲರು ಎಂಬುದನ್ನು ಸಾಧಿಸಿ ತೋರಿಸಿದರು. ಅಂತರಂಗದ ಆದರೆ ತಿಳಿಯುವಂತೆ ಅಭಿವ್ಯಕ್ತಿಸಿದರೆ ಆ ಸಾಹಿತ್ಯ ಜನಮನ ಗೆಲ್ಲಬಲ್ಲದು ಎಂಬುದನ್ನು ತೋರಿಸಿದರು. ನಂತರದ ಸಾಹಿತ್ಯರೂಪ ರಗಳೆ, ಷಟ್ಪದಿಗಳದ್ದು.

’ರಗಳೆಕವಿ’ಯೆಂದೇ ಪ್ರಸಿದ್ಧನಾದ ಹರಿಹರ ಅಧಿಕ ಸಂಖ್ಯೆಯಲ್ಲಿ ರಗಳೆ ರಚಿಸಿದನು. ಈಗ ಆಧುನಿಕ ಸಾಹಿತ್ಯದಲ್ಲಿ ಇದೇ ರಗಳೆ ’ಸರಳ ರಗಳೆ’ ಯಾಗಿ ಬೇರೆ ರೂಪ ತಾಳಿದೆ. ಷಟ್ಪದಿ ರೂಪದಲ್ಲಿ ಸಾಹಿತ್ಯ ರಚನೆ ಮುಂದಿನ ಅನೇಕ ಕವಿಗಳಿಗೆ ದಾರಿದೀಪವಾಗಿ ಕನ್ನಡ ಸಾಹಿತ್ಯದಲ್ಲಿ ’ಷಟ್ಪದಿ’ ಸಾಹಿತ್ಯ ರೂಪಕ್ಕೆ ಒಂದು ಜನದ್ರೀಂಯ ಭದ್ರವಾದ ಸ್ಥಾನ ದೊರಕಿಸಿಕೊಟ್ಟಿತು.

ಇದರ ನಂತರದ್ದು ಕೀರ್ತನೆಗಳು. ಇದರರ್ಥ-ಭಗವಂತನನ್ನು ಸುತ್ತಿಸುವದು ಹೊಗಳುವದು. ಇವು ಮುಖ್ಯವಾಗಿ ಹರಿದಾಸ ನಿರ್ಮಿತಿಗಳು. ಇದರಲ್ಲಿ ಮುಖ್ಯವಾದವರು ಅಶ್ವಿನಿ ದೇವತೆಗಳೆಂದೇ ಪ್ರಸಿದ್ಧರಾದ ಪುರಂದರ ಕನಕದಾಸರು ಅವರ ನಂತರ ವಾದಿರಾಜ, ವಿಜಯದಾಸ, ಜಗನ್ನಾಥದಾಸ, ಮುಂತಾದವರು. ನಂತರ ಪ್ರಸಿದ್ಧ ಪಡೆದವೆಂದರೆ ತ್ರಿಪದಿ ಹಾಗೂ ಸಾಂಗತ್ಯ ಕಾವ್ಯ ರೂಪಗಳು. ತ್ರಿಪದಿ ಹಳೇ ರೂಪವಾದರೂ ಸರ್ವಜ್ಞ ತ್ರಿಪದಿಯ ಸಾರ್ವಭೌಮನೇ ಆದನು. ಅಷ್ಟೇ ಅಲ್ಲ ಜನಪದ ಸಾಹಿತ್ಯದ ಅನೇಕ ಹಾಡುಗಳೂ ತ್ರಿಪದಿ ರೂಪದಲ್ಲಿದೆ. ತ್ರಿಪದಿಯಂತೆ ಸಾಂಗತ್ಯವೂ ಒಂದು ಹಾಡುಗಬ್ಬ, ಅತ್ಯಂತ ಜನಪ್ರಿಯ ಕವಿ, ರತ್ನಾಕರವರ್ಣಿ, ನಂತರ ನಂಜುಂಡಕವಿ, ಸಂಚಿಹೊನ್ನಮ್ಮ ಸಾಂಗತ್ಯದಲ್ಲಿ ಸಾಹಿತ್ಯ ರಚಿಸಿದರು.

ನಂತರದ ಕಾಲಘಟ್ಟ ಹೊಸಗನ್ನಡ ಸಾಹಿತ್ಯ ರೂಪದ್ದು. ಹೊಸಗನ್ನಡ ಸಾಹಿತ್ಯವು ಅನೇಕ ದೃಷ್ಟಿ, ಧ್ಯೇಯ, ಶೈಲಿ, ರೂಪ ಅಷ್ಟೇ ಅಲ್ಲ. ಭಾವಕೈತೆ, ಕಾದಂಬರಿ, ಪ್ರಬಂಧ, ನಾಟಕ, ಕಾವ್ಯ, ಮಹಾಕಾವ್ಯ, ಲೇಖನ ಹೀಗೆ ತನ್ನದೇ ಆದ ವಿವಿಧ ರೂಪಗಳಲ್ಲಿ ಹರಿದು ಬಂದಿದೆ. ನವೋದಯ ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಎಂದ ಚಳುವಳಿ ರೂಪದಲ್ಲಿಯೂ ಹೊಸಗನ್ನಡ ಸಾಹಿತ್ಯ ಬೆಳೆದು ಬಂದಿದೆ.

ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯ ಪ್ರಮುಖ ರೂಪದಲ್ಲಿ ತನ್ನದೇ ವಿಜೃಂಭಣಿಯಿಂದ ಶೋಭಿಸಿದೆ.

Leave a Reply