BSY cabinet : ಸಂಪುಟ ವಿಸ್ತರಣೆ – ವರಿಷ್ಠರ ನಿಲುವು ತಂದಿದೆ ಯಡಿಯೂರಪ್ಪಗೆ ತಲೆನೋವು..

ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಅನರ್ಹ ಶಾಸಕರಿಗೆ ಮಂತ್ರಿಗಿರಿ ಕಲ್ಪಿಸಲು ಬಿಜೆಪಿ ವರಿಷ್ಠರು ಅಡ್ಡಗಾಲು ಹಾಕಿರುವುದರಿಂದ ಸಂಪುಟ ವಿಸ್ತರಣೆ ವಿಳಂಬವಾಗಿದೆ ಎಂಬ ಹೇಳಲಾಗುತ್ತಿದೆ.


ಪಕ್ಷಾಂತರಿಗಳ ಜೊತೆಗೆ ಪಕ್ಷ ನಿಷ್ಟರಿಗೂ ಅವಕಾಶ ನೀಡಬೇಕು ಎಂಬುದು ಹೈಕಾಮಾಂಡ್ ನಿಲುವಾಗಿದೆ. ಆದರೆ ಸರಕಾರ ರಚನೆಗೆ ಕಾರಣರಾದ ಎಲ್ಲ ಪಕ್ಷಾಂತರಿಗಳಿಗೂ ಸಚಿವ ಸ್ಥಾನ ನೀಡುವುದಾಗಿ ಯಡಿಯೂರಪ್ಪನವರು ಖುದ್ದು ವಾಗ್ದಾನ ನೀಡಿದ್ದಾರೆ. ಈಗ ಯಾವುದೇ ಕಾರಣಕ್ಕೂ ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

ಈ ಉಭಯ ಸಂಕಟಕ್ಕೆ ಪರಿಹಾರ ಸಿಗದ ಕಾರಣ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಬಗ್ಗೆ ನೇರವಾಗಿ ದಿಲ್ಲಿ ಪ್ರಭುಗಳ ಜೊತೆ ಚರ್ಚೆ ಮಾಡಲು ಬಿಎಸ್ವೈ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉಪ ಚುನಾವಣೆ ಗೆದ್ದ ಪಕ್ಷಾಂತರಿಗಳ ಪೈಕಿ ಆರೇಳು ಮಂದಿಗೆ ಸಚಿವ ಸ್ಥಾನ ನೀಡಿ ಉಳಿದ ಸ್ಥಾನಗಳಿಗೆ ಪಕ್ಷ ನಿಷ್ಟರನ್ನು ಪರಿಗಣಿಸಿ ಎಂದು ವರಿಷ್ಠರು ಹೇಳಿದ್ದಾರೆ. ಇದರ ಜೊತೆಗೇ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟ ಸಹ ವಿಸ್ತರಣೆಯ ಕೆಲಸಕ್ಕೆ ತಡೆಗೋಡೆಯಾಗಿ ಪರಿಣಮಿಸಿದೆ ಎಂದು ಮೂಲಗಳು ಹೇಳುತ್ತಿವೆ.