ಮಂಗಳೂರಿನಲ್ಲಿ ಬಾಂಬ್ ಪತ್ತೆ ಹಿನ್ನೆಲೆ : ರಾಜ್ಯದಾದ್ಯಂತ ಹೈ ಅಲರ್ಟ್

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆ ರಾಜದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸೂಕ್ಷ್ಮ ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸ್ ಬಿಗಿಬಂದೋಬಸ್ತ್, ಅನುಮಾನ ಬಂದಲ್ಲಿ ವಿಚಾರಣೆ ಹಾಗೂ ಪರಿಶೀಲನೆ ಮಾಡುವ ಕ್ರಿಯೆ ನಡೆಯುತ್ತಿದೆ.

ಹಾವೇರಿಯಲ್ಲಿ ಕಟ್ಟೆಚ್ಚರ ವಹಿಸಿದ ಪೊಲೀಸ್ ಇಲಾಖೆ ವಹಿಸಿದೆ. ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕೋರ್ಟ್, ಜನದಟ್ಟಣೆ ಪ್ರದೇಶದಲ್ಲಿ ಶ್ವಾನದಳ ಹಾಗೂ ಬಾಂಬ್ ಸಿಷ್ಕ್ರೀಯ ದಳದಿಂದ ಪರಿಶೀಲನೆ ಮಾಡಲಾಗುತ್ತಿದೆ.ಆರು ಜನ ಪೊಲೀಸ್ ಸಿಬ್ಬಂದಿಯಿಂದ  ಅನುಮಾನಾಸ್ಪದ ವ್ಯಕ್ತಿಗಳು, ಅನುಮಾಮಾಸ್ಪದ ವಸ್ತುಗಳ ಪರಿಶೀಲನೆ ಮಾಡಲಾಗುತ್ತಿದೆ.

ಬಾಗಲಕೋಟೆಯಲ್ಲೂ ಹೈ ಅಲಟ್೯ ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರ, ಪರಿಶೀಲನೆ ಮಾಡಲಾಗುತ್ತಿದ್ದು,  ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್ಕಿಂಗ್ ಮಾಡಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿ, ವಸ್ತುಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಎಸ್.ಪಿ. ಲೋಕೇಶ್ ಸ್ಪಷ್ಟಪಡಿಸಿದ್ದಾರೆ.

ಕೊಡಗಿನ ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಾಗಿದೆ. ಜಿಲ್ಲೆಯ ಏಕೈಕ ಜಲಾಶಯ ಹಾರಂಗಿಗೂ ಭದ್ರತೆ ಹೆಚ್ಚಿಸಲಾಗಿದೆ.
ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲಿದೆ ಎಂದು ಕೊಡಗು ಎಸ್ಪಿ ಸುಮನ್ ಡಿ ಪಿ ಮಾಹಿತಿ ನೀಡಿದ್ದಾರೆ.

ಹಾಸನ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಪರಿಶೀಲನೆ ನಡೆದಿದ್ದು, ಜಿಲ್ಲೆಯಾದ್ಯಂತ ಜಿಲ್ಲೆಯ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣಗಳಲ್ಲಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ವಿಶ್ವ ವಿಖ್ಯಾತ ಬೇಲೂರಿನ ಚನ್ನಕೇಶವ ದೇವಾಲಯದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ, ಜನಸಂದಣಿ ಪ್ರದೇಶದಲ್ಲಿ‌ ಪೊಲೀಸರು ಗಸ್ತು ಇದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಶ್ವಾನದಳದಿಂದ ಪ್ರಯಾಣಿಕರ ಬ್ಯಾಗ್‌ಗಳ ಪರಿಶೀಲನೆ ಮಾಡಲಾಗುತ್ತಿದೆ.  ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ,  ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಭದ್ರತೆಯ ಕುರಿತು ವಿಮಾನ ನಿಲ್ದಾಣದಲ್ಲಿ ಪೊಲೀಸ್ ಆಯುಕ್ತ ಆರ್. ದಿಲೀಪ್ ಸಭೆ ನಡೆಸುತ್ತಿದ್ದಾರೆ.

ಮೈಸೂರು‌ ನಗರ ಪೊಲೀಸ್ ಆಯಕ್ತರಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ಮಾಡುವಂತೆ, ಗುಪ್ತದಳ ಇಲಾಖೆಯಿಂದ ತಕ್ಷಣ ಮಾಹಿತಿ ರವಾನೆ ಮಾಡುವಂತೆ, ಪ್ರವಾಸಿ ತಾಣಗಳು ಸೇರಿದಂತೆ ಇತರೆಡೆ ಹೈ ಅರ್ಲಟ್ ಇರುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣರಿಂದ ಸೂಚನೆ ನೀಡಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿಪ್ರದೇಶದಲ್ಲಿ ವಾಹನಗಳ ತಪಾಸಣೆ ಜೊತೆಗೆ ಚಿಕ್ಕಮಗಳೂರು-ದಕ್ಷಿಣ ಕನ್ನಡಕ್ಕೆ ತೆರಳೋ ವಾಹನಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೊಟ್ಟಿಗೆಹಾರ ಸೇರಿದಂತೆ ಗಡಿ ಭಾಗದಲ್ಲಿ ತೀವ್ರ ಪೊಲೀಸ್ ಕಟ್ಟೆಚ್ಚರ ವಹಿಸಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಬಂದೊಬಸ್ತ್ ಮಾಡಲಾಗಿದ್ದು, ಬಾಂಬ್ ಪತ್ತೆ ಹಾಗೂ ಶ್ವಾನದಳದಿಂದ ಪರಿಶೀಲನೆ ಮಾಡಲಾಗುತ್ತಿದೆ. ಪೊಲೀಸ್ ಸಿಬ್ಬಂದಿಯಿಂದ ಪ್ರಯಾಣಿಕರ ಬ್ಯಾಗ್, ಮೂಟೆಗಳ ಪರಿಶೀಲನೆ ಮಾಡಿದರೆ,  ಬಾಂಬ್ ಪತ್ತೆ ದಳವರು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದು ರೊಟೀನ್ ಗಸ್ತು ಕಾರ್ಯ ಎಂದು ವಿಜಯಪುರ ಎಸ್ಪಿ ಪ್ರಕಾಶ ಅಮ್ರಿತ್ ನಿಕ್ಕಂ ದೂರವಾಣಿ ಮೂಲಕ ಮಾಹಿತಿ ಕೊಟ್ಟಿದ್ದಾರೆ.