ಪ್ರವಾಹ ಪರಿಹಾರ ಚೆಕ್‍ಗಳು ಬೌನ್ಸ್ : ಸರಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ

ರಾಜ್ಯ ಪ್ರವಾಹ ಪರಿಹಾರದ ಕುರಿತಾಗಿ ಗೊಂದಲ ಮುಂದುವರಿದಿದ್ದು ರಾಜ್ಯ ಸರಕಾರದ ವಿರುದ್ಧ ಸಂತ್ರಸ್ತರ ಆಕ್ರೋಶ ಭುಗಿಲೆದ್ದಿದೆ. ಪರಿಹಾರ ಕೊಡುವಾಗಲೂ ಸಾವಿರ ಬಾರಿ ಯೋಚಿಸಿದ ಸರ್ಕಾರ ಸದ್ಯ ನೀಡಿದ ಚೆಕ್ ಗಳು ಕೂಡ ಬೋನ್ಸ್ ಆಗಿವೆ ಎನ್ನಲಾಗುತ್ತಿದೆ.

ಹೌದು…. ನೆರೆ ಸಂತ್ರಸ್ತರಿಗೆ ಸರ್ಕಾರ ನೀಡಿದ್ದ 10 ಸಾವಿರ ಮೊತ್ತದ ಚೆಕ್‍ಗಳು ಬೌನ್ಸ್ ಆಗಿವೆ.  ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಬಂದು ಆರು ತಿಂಗಳು ಕಳೆದರೂ ಸರ್ಕಾರ ನೀಡಿದ ಕನಿಷ್ಠ 10 ಸಾವಿರ ಮೊತ್ತದ ಪರಿಹಾರ ಇನ್ನೂ ಸಿಗದೆ ಜನ ಪರದಾಡುತ್ತಿದ್ದಾರೆ.  ಗೋಕಾಕ್ ಜಿಲ್ಲಾ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕೊಟ್ಟ ಚೆಕ್‍ಗಳನ್ನು ತಡೆ ಹಿಡಿಯಲಾಗಿದೆ.

ತಾಲ್ಲೂಕಿನ ವೀರನಗಡ್ಡಿ ಗ್ರಾಮದ ಸುಮಾರು 160 ಜನ ನೆರೆ ಸಂತ್ರಸ್ತರಿಗೆ 10 ಸಾವಿರ ರೂ.ಗಳ ಚೆಕ್ ನೀಡಲಾಗಿತ್ತು. ಈ ಅವೆಲ್ಲ ಬೌನ್ಸ್ ಆಗಿವೆ. ಕನಿಷ್ಠದ ಪರಿಹಾರವೂ ಸಿಗಲಿಲ್ಲವಲ್ಲ ಎಂದು ಜನ ಅಳಲು ತೋಡಿಕೊಂಡಿದ್ದಾರೆ. ಘಟಪ್ರಭ ಪ್ರವಾಹದಿಂದಾಗಿ ಈ ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು.

ಸರ್ವೆ ಮಾಡಿ ಸುಮಾರು 600ಕ್ಕೂ ಹೆಚ್ಚು ಜನರಿಗೆ ಪರಿಹಾರ ನೀಡಲಾಗಿತ್ತು. ನಂತರ ಗ್ರಾಮ ಸಂಪೂರ್ಣವಾಗಿ ಮುಳುಗಡೆಯಾಗಿಲ್ಲ ಎಂದು ಚೆಕ್‍ನಲ್ಲಿದ್ದ ಹಣವನ್ನು ಅಧಿಕಾರಿಗಳು ವಾಪಸ್ ಪಡೆದಿದ್ದಾರೆ.  ಅರಂಭದಲ್ಲಿ ಎಲ್ಲರೂ ನೆರೆ ಸಂತ್ರಸ್ತರು ಎಂದು ಚೆಕ್ ನೀಡಿ ನಂತರ ಅಧಿಕಾರಿಗಳು ಉಲ್ಟಾ ಹೊಡೆದಿದ್ದಾರೆ. ಗ್ರಾಮ ಮುಳುಗಡೆಯಾಗಿದ್ದರಿಂದ ಇಲ್ಲಿನ ಜನ ಎಂಟು ದಿನ ಗ್ರಾಮ ತೊರೆದು ಪರಿಹಾರ ಕೇಂದ್ರಗಳಲ್ಲಿದ್ದರು. ಇದೆಲ್ಲವನ್ನು ಪರಿಶೀಲಿಸಿ ಅಧಿಕಾರಿಗಳು ಪರಿಹಾರದ ಚೆಕ್ ನೀಡಿದ್ದರು. ಆದರೆ ಈಗ ಸುಮಾರು 161 ಜನರ ಚೆಕ್‍ಗಳು ಬೌನ್ಸ್ ಆಗಿವೆ.