ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಕ್ರೂರ ದಾಳಿ – ದೆಹಲಿ ಪೊಲೀಸರಿಗೆ ಉದ್ಧವ್‌ ಎಚ್ಚರಿಕೆ!

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಳೆದ ರಾತ್ರಿ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಕ್ರೂರ ದಾಳಿಯನ್ನು 26/11 ಮುಂಬೈ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ. ಕಬ್ಬಿಣದ ಸರಳುಗಳಂತಹ ಶಸ್ತ್ರಗಳಿಂದ ಮುಖವಾಡ ಧರಿಸಿದ ಗೂಂಡಾಗಳು ನಡೆಸಿರುವ ಹಿಂಸಾತ್ಮಕ ದಾಳಿಯನ್ನು “ಹೇಡಿತನ” ಎಂದು ಅವರು ಕರೆದಿದ್ದಾರೆ.

ದೆಹಲಿ ಪೊಲೀಸರು ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ವರ್ತಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವ ಹಾಗೆ ಮಾಡಬೇಕು. ಈ ರೀತಿ ಮಾಡಲು ವಿಫಲವಾದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಫಲವಾಗಿದ್ದೀರಿ ಎಂದೇ ಅರ್ಥ ಎಂದು ಉದ್ಧವ್‌ ಎಚ್ಚರಿಕೆ ನೀಡಿದ್ದಾರೆ.

“ಯುವಕರು ಭಯಭೀತರಾಗಿದ್ದಾರೆ ಮತ್ತು ಕೋಪಗೊಂಡಿದ್ದಾರೆ. ನಾವೆಲ್ಲರೂ ಒಗ್ಗೂಡಿ ಅವರಲ್ಲಿ ವಿಶ್ವಾಸ ಮೂಡಿಸಬೇಕಾಗಿದೆ. ನಮ್ಮ ಯುವಜನರು ಹೇಡಿಗಳಲ್ಲ. ಯುವಜನರನ್ನು ಪ್ರಚೋದಿಸುವ ಮೂಲಕ ಬಾಂಬ್ ಸ್ಫೋಟಿಸಬೇಡಿ. ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸದಿದ್ದರೆ, ಅವರ ಕಠೋರ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತಿದೆ ಎಂದು ಠಾಕ್ರೆ ಹೇಳಿದ್ದಾರೆ.

2008 ರಲ್ಲಿ ಮುಂಬೈನ ಪ್ರಮುಖ ಸ್ಥಳಗಳ ಮೇಲೆ ಮೂರು ದಿನಗಳ ಕಾಲ ಭಯೋತ್ಪಾದಕರು ದಾಳಿ ಮಾಡಿದ್ದರು. ಇದರಿಂದ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ.

ಇನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಜೆನ್‌ಎನ್‌ಯು ಹಿಂಸೆಯನ್ನು ಖಂಡಿಸಿದ್ದಾರೆ. “ಈ ಹಿಂಸೆಯು ಭಿನ್ನಾಭಿಪ್ರಾಯದ ಪ್ರತಿ ಧ್ವನಿಯನ್ನು ನಿಗ್ರಹಿಸಲು ಮತ್ತು ವಶಪಡಿಸಿಕೊಳ್ಳಲು ಸರ್ಕಾರವು ಎಂತಹ ಮಟ್ಟಕ್ಕೂ ಹೋಗಬಹುದು ಎಂಬುದರ ಕಠೋರ ಜ್ಞಾಪನೆಯಾಗಿದೆ” ಎಂದು ಅವರು ಹೇಳಿದ್ದಾರೆ.

ಭಾರತದ ಯುವಜನರ ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ಪ್ರತಿದಿನ ನಿಗ್ರಹಿಸಲಾಗುತ್ತಿದೆ. ಆಡಳಿತಾರೂಢ ಮೋದಿ ಸರ್ಕಾರವನ್ನು ಸಕ್ರಿಯವಾಗಿ ಬೆಂಬಲಿಸುವ ಗೂಂಡಾಗಳು ಭಾರತದ ಯುವಜನರ ಮೇಲೆ ನಡೆಸಿದ ಭಯಾನಕ ಹಿಂಸಾಚಾರವು ಶೋಚನೀಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಪಿ ಚಿದಂಬರಂ ಮಾತನಾಡಿ ಜೆಎನ್‌ಯು ಹಿಂಸಾಚಾರದ ಈ ಘಟನೆಯು ಬಹುಶಃ ನಾವು ಅರಾಜಕತೆಗೆ ವೇಗವಾಗಿ ಇಳಿಯುತ್ತಿದ್ದೇವೆ ಎಂಬುದಕ್ಕೆ ಅತ್ಯಂತ ಸಾಕ್ಷಿಯಾಗಿದೆ. ಇದು ಕೇಂದ್ರ ಸರ್ಕಾರ, ಗೃಹ ಸಚಿವ, ಲೆಫ್ಟಿನೆಂಟ್‌ ಗರ್ವನರ್‌ ಮತ್ತು ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ ದೆಹಲಿಯಲ್ಲಿರುವ ಭಾರತದ ಅಗ್ರಗಣ್ಯ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದೆ ಸಂಭವಿಸಿದೆ ಎಂದು ಅಸಮಾಧಾಣ ವ್ಯಕ್ತಪಡಿಸಿದ್ದಾರೆ.

ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಾತನಾಡಿ ಮುಖವಾಡದ ದಾಳಿಕೋರರು ದೆಹಲಿಯ ಜೆಎನ್‌ಯು ಕ್ಯಾಂಪಸ್‌ಗೆ ಹೇಗೆ ಪ್ರವೇಶಿಸಿದರು ಮತ್ತು ಯೋಜಿತ ರೀತಿಯಲ್ಲಿ ಹೇಗೆ ದಾಳಿ ಮಾಡಿದರು ಎಂಬುದನ್ನು ದೇಶ ಮತ್ತು ಜಗತ್ತು ನೋಡಿದೆ. ನ್ಯಾಯಯುತ ತನಿಖೆ ಅಗತ್ಯವಿದೆ ಏಕೆಂದರೆ ಇದರ ಹಿಂದೆ ಮುಖ್ಯ ಸಂಚುಕೋರ ಯಾರು ಎಂದು ನಾವು ತಿಳಿದುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.