ಬಿಎಸ್‌ವೈ ಬೆನ್ನಲ್ಲೇ ಮತ್ತಷ್ಟು ಮಂದಿಯ ಕ್ಷೇತ್ರ ಚೇಂಜ್ : ಆರು ನಾಯಕರಿಗೆ ಅಮಿತ್ ‘ಶಾ’ಕ್

ಬೆಂಗಳೂರು : ಲಿಂಗಾಯತ ಪಾಲಿಟಿಕ್ಸ್ ಮೂಲಕ ಬಿಜೆಪಿಗೆ ಟಾಂಗ್ ಕೊಡಲು ಹೊರಟಿದ್ದ, ಕಾಂಗ್ರೆಸ್ಗೆ ಬಿಜೆಪಿ ಶಾಕ್ ಮೇಲೆ ಶಾಕ್ ನೀಡತೊಡಗಿದೆ. ಅಮಿತ್ ಶಾ ನೀಡ್ತಿರೋ ಶಾಕ್‌ನಿಂದ ಕಾಂಗ್ರೆಸ್ ಅಷ್ಟೇ ಅಲ್ಲ, ಖುದ್ದು ಬಿಜೆಪಿ ನಾಯಕರೇ ದಂಗಾಗಿ ಹೋಗಿದ್ದಾರೆ.

ಸಮೀಕ್ಷೆ ವರದಿಗಳನ್ನು ಗಮನಿಸಿ ರಣತಂತ್ರ ರೂಪಿಸುತ್ತಿರುವ ಶಾ, ರಾಜ್ಯ ನಾಯಕರಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಕೆಲವೊಂದು ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿ, ರಾಜಕಾರಣ ನಡೆಸ್ತಿದ್ದ, ಹಿರಿಯ ನಾಯಕರನ್ನು ಎತ್ತಂಗಡಿ ಮಾಡುವ ಸೂಚನೆ ನೀಡಿದ್ದಾರೆ. ದಿ ನ್ಯೂಸ್ ಪಿಂಟ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಯಡಿಯೂರಪ್ಪ ಅಷ್ಟೇ ಅಲ್ಲ, ಹಲವು ದಿಗ್ಗಜ ನಾಯಕರ ಕ್ಷೇತ್ರ ಬದಲಾವಣೆಗೆ ಅಮಿತ್ ಶಾ ಮುಂದಾಗಿದ್ದಾರೆ.

ಉತ್ತರ ಪ್ರದೇಶ ಮಾದರಿ ರಣತಂತ್ರ ರೂಪಿಸಿರುವ ಶಾ- ಮೋದಿ ಜೋಡಿ,  ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ. ಜೊತೆಗೆ ಕ್ಷೇತ್ರ ಬದಲಾವಣೆಯೂ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಬೆಂಗಳೂರಿನ 6 ಪ್ರಭಾವಿ ಶಾಸಕರ ಕ್ಷೇತ್ರ ಬದಲಾವಣೆಯಾಗಲಿದೆ ಎಂದು ದಿ ನ್ಯೂಸ್ ಪಿಂಟ್‌ಗೆ ಖಚಿತ ಮೂಲಗಳು ಮಾಹಿತಿ ನೀಡಿವೆ.

ಕಾಪ್ಸ್ ಸಮೀಕ್ಷಾ ವರದಿ ಇಟ್ಟುಕೊಂಡಿರುವ  ಅಮಿತ್ ಶಾ,  ಪಕ್ಷ ಮತ್ತು ಸಿದ್ಧಾಂತದ ಅನ್ವಯ ನಾಯಕತ್ವ ರೂಪಿಸಲಾರಂಭಿಸಿದ್ದಾರೆ. ಬಹುಸಂಖ್ಯಾತ ವೀರಶೈವ ಲಿಂಗಾಯತ ಮತದಾರರಿರುವ ಉತ್ತರ ಕರ್ನಾಟಕದಿಂದ ಬಿಎಸ್ ವೈ ಸ್ಪರ್ಧೆಗೆ ಈಗಾಗಲೇ ಸೂಚನೆ ನೀಡಿದ್ದಾರೆ.

ಬಹುಸಂಖ್ಯಾತ ಒಕ್ಕಲಿಗ ಜನಾಂಗದ ಮತದಾರರಿರುವ ಮಂಡ್ಯ ಅಥವಾ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಷೇತ್ರದಿಂದ ಆರ್ ಅಶೋಕ ಸ್ಪರ್ಧಿಸಲಿದ್ದಾರೆ.   ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಗೆ ಒಕ್ಕಲಿಗ ಬಾಹುಳ್ಯದ ಹಾಸನ ಜಿಲ್ಲೆಯ ಕ್ಷೇತ್ರದಿಂದ ಸ್ಪರ್ಧೆಗೆ ಸೂಚನೆ ನೀಡಲಿದ್ದಾರೆ. .

ಲಿಂಗಾಯತ ಮಠಗಳಲ್ಲಿ ತನ್ನದೇ ಹಿಡಿತ ಹೊಂದಿರುವ ವಿ ಸೋಮಣ್ಣ ಗುಂಡ್ಲುಪೇಟೆಗೆ ಶಿಫ್ಟ್ ಆಗಲಿದ್ದಾರೆ.  ಹಿಂದುಳಿದ ವರ್ಗಗಳ ನಾಯಕ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಿಂದ ಕೊಪ್ಪಳ ಜಾಗ ಬದಲಾಯಿಸಬೇಕಿದೆ. ಇನ್ನು ಪ್ರತಿಪಕ್ಷ ನಾಯಕ  ಜಗದೀಶ್ ಶೆಟ್ಟರ್ ಗದಗ್ ಜಿಲ್ಲೆಯಿಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಬೆಂಗಳೂರಿನ ಮತ್ತೊಬ್ಬ ಪ್ರಭಾವಿ ಮುಖಂಡ ಅರವಿಂದ ಲಿಂಬಾವಳಿ ಬಾಗಲಕೋಟೆ ಬಸ್ ಹತ್ತಲಿದ್ದಾರೆ. ನಾರಾಯಣ ಸ್ವಾಮಿ ವೈ ಎ ಶ್ರೀನಿವಾಸ ಪುರಕ್ಕೂ, ರಘು ಎಸ್ ಪುಲಿಕೇಶಿ ನಗರಕ್ಕೂ ಸೀಟು ಬದಲಾಯಿಸಲಿದ್ದಾರೆ. ಮಲ್ಲೇಶ್ವರಂನ ಶಾಸಕ ಡಾ ಅಶ್ವಥ್ ನಾರಾಯಣ ಬ್ಯಾಟರಾಯನಪುರದಿಂದ ಸ್ಪರ್ಧೆಗೆ ಇಳಿಯಬೇಕಾದೀತು.  ಸತೀಶ್ ರೆಡ್ಡಿ ಬಿಟಿಎಂ ಲೇಔಟ್, ಮುನಿರಾಜು ಯಲಹಂಕದಿಂದ ಸ್ಪರ್ಧಿಸಲು ತಯಾರಿ ನಡೆಸುವಂತೆ ಅಮಿತ್ ಶಾ ಸೂಚನೆ ನೀಡಲಿದ್ದಾರೆ. ಇವತ್ತು ರಾತ್ರಿ ಅಥವಾ ನಾಳೆಯೊಳಗೆ ಇವರಿಗೆಲ್ಲಾ ಅಧಿಕೃತ ಸೂಚನೆ ರವಾನೆಯಾಗಲಿದೆ ಎಂದು ನ್ಯೂಸ್ ಪಿಂಟ್ ಗೆ ಕೇಂದ್ರೀಯ ಬಿಜೆಪಿಯ ಮೂಲಗಳು ಖಚಿತ ಪಡಿಸಿವೆ.