BSY vs Shaw : ಫೆಬ್ರವರಿ 27 ಹುಟ್ಟುಹಬ್ಬದ ನೆಪ; ಹೈಕಮಾಂಡ್‍ಗೆ ತಟ್ಟಲಿದೆಯೇ ತಾಪ!?

ಫೆಬ್ರವರಿ 27 ಯಡಿಯೂರಪ್ಪನವರ ಹುಟ್ಟುಹಬ್ಬದ ದಿನ. ಅವತ್ತು ಲಕ್ಷಾಂತರ ಜನರನ್ನು ಸೇರಿಸಿ ಅದ್ದೂರಿ ಸಮಾವೇಶ ನಡೆಸಲು ಯಡ್ಯೂರಪ್ಪ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಉಪಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸಿಕೊಂಡು ಸರ್ಕಾರವನ್ನು ಸೇಫ್ ಮಾಡಿದ ನಂತರವೂ ಹೈಕಮಾಂಡ್ ತನ್ನತ್ತ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಈ ಶಕ್ತಿ ಪ್ರದರ್ಶನ ಎನ್ನಲಾಗುತ್ತಿದೆ. ತಮ್ಮ ಇಮೇಜ್ ಬಿಲ್ಡ್ ಮಾಡುವುದಕ್ಕಾಗಿಯೇ ಹೈದ್ರಾಬಾದ್ ಮೂಲದ ಜಾಹೀರಾತು ತಂಡವೊಂದರ ಜೊತೆ ಒಪ್ಪಂದ ಮಾಡಿಕೊಂಡಿರುವ ಯಡ್ಡಿ ಇಡೀ ಸಮಾವೇಶವನ್ನು ಗ್ರ್ಯಾಂಡ್ ಸಕ್ಸಸ್ ಮಾಡಲು ಒಂದು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಗೆ ದುಬಾರಿ ಮೊತ್ತಕ್ಕೆ ಗುತ್ತಿಗೆ ಕೊಟ್ಟಿರುವ ಸುದ್ದಿಯೂ ಹೊರಬರುತ್ತಿದೆ….

ಕನಕಪುರ ಬಂಡೆಯಂತಿದ್ದ ಮೈತ್ರಿ ಸರ್ಕಾರವನ್ನೇ ತಲೆಕೆಳಗಾಗಿಸಿದ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯ ಸಂಕಟ ಯಾಕಿಷ್ಟು ಬಾಧಿಸುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಬಿಜೆಪಿ ಆಂತರಿಕ ವಲಯದಲ್ಲಿ ಸಾಕಷ್ಟು ಮನಸ್ತಾಪಗಳು ಎದ್ದು ಕಾಣುತ್ತವೆ. ಯಡಿಯೂರಪ್ಪ ಸಿಎಂ ಆದಾಗಿನಿಂದ ಒಂದಲ್ಲಾ ಒಂದು ತೊಡಕುಗಳು ಎದುರಾಗುತ್ತಲೇ ಇವೆ. ಬಲಭೀಮನಂತಿದ್ದ ಎದುರಾಳಿ ಪಕ್ಷಗಳನ್ನ ಸೋಲಿಸಿ ಸುಣ್ಣವಾಗಿಸಿದ ಮೇಲೆ ಯಡಿಯೂರಪ್ಪನವರ ಹಾದಿ ಹೂವಿನ ಹಾಸಿಗೆ ಆಗುವ ಬದಲಿಗೆ ಕಲ್ಲುಮುಳ್ಳಿನಿಂದ ತುಂಬಿಹೋಗಿದೆ.

ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರದ ಶಾಸಕರನ್ನ ಸೆಳೆಯುವಲ್ಲಿ ಯಶಸ್ವಿಯಾದ ಬಿಎಸ್‍ವೈ ಅದ್ಯಾಕೋ ಬಿಜೆಪಿ ಹೈಕಮಾಂಡ್ ಸೆಳೆಯುವಲ್ಲಿ ವಿಫಲರಾದಂತೆ ಕಾಣುತ್ತದೆ. ಬಿಎಸ್‍ವೈ ಅಧಿಕಾರಕ್ಕೆ ಬಂದಾಗಿನಿಂದ ಹೈಕಮಾಂಡ್ ಸಹಕಾರ ಸಹನೀಯವಾಗಿಲ್ಲ. ಇದು ಬಿಎಸ್‍ವೈ ತಾಳ್ಮೆಯನ್ನ ದಿನದಿಂದ ದಿನಕ್ಕೆ ಪರೀಕ್ಷೆಗೆ ಒಡ್ಡಿದೆ.

ಎಸ್… ಮೈತ್ರಿ ಸರ್ಕಾರ ಬೀಳಿಸಿದ ಯಡಿಯೂರಪ್ಪ ಸಿಎಂ ಪಟ್ಟಕ್ಕೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಹೈಕಮಾಂಡ್ ಕೊಂಚ ಸಮಯ ತೆಗೆದುಕೊಂಡ್ರು ಬಿಎಸ್‍ವೈಗೆ ಸಿಎಂ ಸ್ಥಾನ ಕೊಟ್ಟಿತು. ಇದರ ಮಧ್ಯೆ ಬಿರುಗಾಳಿಯಂತೆ ಬಂದ ಪ್ರವಾಹ ಸಿಎಂ ಕುರ್ಚಿಯನ್ನೇ ಅಲುಗಾಡಿಸಿಬಿಡ್ತು. ಒಂದುಕ್ಷಣ ಸಿಎಂ, ರಾಜ್ಯದಲ್ಲಿ ಏನಾಗ್ತಿದೆ ಅನ್ನೋದನ್ನ ಊಹೆ ಮಾಡಿಕೊಳ್ಳೋದು ಅದಕ್ಕೆ ಪರಿಹಾರ ಕಂಡುಕೊಳ್ಳೋದು ಕೂಡ ಕಷ್ಟ ಸಾಧ್ಯವಾಗಿ ಹೋಯ್ತು.

ಇದರ ಮಧ್ಯೆ ಸಚಿವಸಂಪುಟ ವಿಸ್ತರಣೆ ಬೇರೆ ಆಗಿರಲಿಲ್ಲ. ವಿರೋಧ ಪಕ್ಷಗಳು ಜನರ ನೆರವಿಗಾಗಿ ನಿಲ್ಲುವುದಕ್ಕಿಂತ ಸಮಯವನ್ನ ರಾಜಕೀಯ ಕೆಸರೆರೆಚಾಟಕ್ಕೆ ಬಳಕೆ ಮಾಡಿಕೊಳ್ಳಲು ಶುರು ಮಾಡಿದ್ವು. ಭೀಕರ ಪ್ರವಾಹಕ್ಕೆ ನಲುಗಿದ ರಾಜ್ಯದ ಜನರ ಸ್ಥಿತಿಗಳನ್ನ ಆಲಿಸುವುದಕ್ಕಿಂತ ಸಚಿವ ಸ್ಥಾನದ ಗುಂಗೇ ಅಧಿಕವಾಗಿಹೋಗಿತ್ತು. ಒಂದು ಕಡೆ ರಾಜ್ಯದ ಜನತೆಯ ನರಳಾಟ, ಇನ್ನೊಂದು ಕಡೆ ಸಚಿವ ಸ್ಥಾನಕ್ಕಾಗಿ ಅಭ್ಯರ್ಥಿಗಳ ಪರದಾಟ, ಮತ್ತೊಂದು ಕಡೆ ಇದ್ಯಾವುದನ್ನ ಲೆಕ್ಕಿಸದ ಹೈಕಮಾಂಡ್ ಹೀಗೆ ಈ ಮೂರು ದಿಕ್ಕುಗಳು ಸಿಎಂ ಕುರ್ಚಿಯನ್ನೇ ಅಲುಗಾಡಿಸಿಬಿಟ್ಟಿದ್ವು.

ಸಚಿವ ಸಂಪುಟ ವಿಸ್ತರಣೆಗೂ ಅಸ್ತು ಎನ್ನದ ಅಮಿತ್ ಶಾ, ಇತ್ತ ಪರಿಹಾರ ಕೊಡಲು ಸಿದ್ಧವಿರದ ಪ್ರಧಾನಿ ಮೋದಿ ಇವರಿಬ್ಬರ ನಡುವೆ ಸೊರಗಿದ ಯಡಿಯೂರಪ್ಪನವರಿಗೆ ರಾಜ್ಯದ ಜನ ಹಾಗೂ ವಿರೋಧ ಪಕ್ಷಗಳ ವಾಗ್ದಾಳಿಗಳಿಗೆ ತಲೆ ಕೊಡಲೇಬೇಕಾದಂತ ಸ್ಥಿತಿ ಬಂದೊದಗಿತ್ತು. ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ರಾಜ್ಯದ ಜನತೆಯ ಕಷ್ಟಕಾಲಕ್ಕೆ ಆಗಲಿಲ್ಲವಲ್ಲ ಅನ್ನೋ ಸಂಕಟ. ಕೇಂದ್ರ ಸರ್ಕಾರ ಕಷ್ಟಕಾಲಕ್ಕೆ ನೆರವಾಗಲಿಲ್ಲ ಎನ್ನುವ ಬೇಸರ. ಹೀಗೆ ಬಿಎಸ್‍ವೈಗೆ ಒಂದಲ್ಲಾ ಎರಡಲ್ಲಾ ದಾರಿಯುದ್ಧಕ್ಕೂ ಪ್ರತಿಪಕ್ಷಗಳಿಗಿಂತಲೂ ಹೆಚ್ಚು ಅಡೆತಡೆ ಉಂಟುಮಾಡಿದ್ದು ಬಿಜೆಪಿ ಹೈಕಮಾಂಡ್.

ಅನರ್ಹರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದ ಬಿಎಸ್‍ವೈಗೆ ಅಡ್ಡಗಾಲು ಹಾಕಿದ್ದು ಬಿಜೆಪಿಯ ಮೂಲ ಶಾಸಕರು. ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು ಎನ್ನುವುದಾಗಿ ಒಬ್ಬೊಬ್ಬರಾಗಿ ತಮ್ಮ ಇಂಗಿತವನ್ನ ವ್ಯಕ್ತಪಡಿಸಲು ಮುಂದಾದ್ರು. ರಾಜ್ಯದ ಸಚಿವ ಸ್ಥಾನದ ಆಕಾಂಕ್ಷಿಗಳು ಒಂದು ಕಡೆ ಇರಲಿ ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿಗೆ ಕೊಡಲು ಹಿಂದೇಟು ಹಾಕುತ್ತಲೇ ಇದೆ. ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ನೀಡುವ ಬದಲಿಗೆ ಮನವೊಲಿಕೆ ಬಳಿಕ 8 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಹೇಳುತ್ತಿದೆ. ಈ ರೀತಿಯ ಹೈಕಮಾಂಡ್ ವರ್ತನೆಯಿಂದ ಸಿಎಂ ಸ್ಥಿತಿ ಅತಂತ್ರವಾಗಿದೆ. ಮಾತಿನ ಪ್ರಕಾರ ಶಾಸಕರಿಗೆ ಸಚಿವ ಸ್ಥಾನ ಕೊಡದಿದ್ದರೆ ಅಧಿಕಾರಕ್ಕೆ ಮತ್ತೆ ಕುತ್ತು ಬರುವ ಆತಂಕದಲ್ಲಿ ಸಿಎಂ ಹೈಕಮಾಂಡ್ ವಿರುದ್ಧ ಒಳಗೊಳಗೇ ಕೆಂಡ ಕಾರುತ್ತಿರುವಂತೆ ಕಾಣುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕಾದರೆ ಬಿಜೆಪಿ ಹೈಕಮಾಂಡ್‍ನ ಅಸಹಕಾರದ ವಿರುದ್ಧ ತೊಡೆ ತಟ್ಟಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪನವರಿಗೆ ಬಂದಿದೆ. ಅದಕ್ಕೆ ಕೊನೆಗೂ ಯಡಿಯೂರಪ್ಪ ಮುಂದಾಗಿದ್ದಾರೆ.

ಅಷ್ಟಕ್ಕೂ ಹೈಕಮಾಂಡ್‍ಗೆ ಬಿಎಸ್‍ವೈ ಮೇಲೆ ಯಾಕಿಷ್ಟು ಸಿಟ್ಟು… ಅಂದರೆ ಅಮಿತ್ ಶಾ ಮತ್ತು ಮೋದಿಯವರದ್ದೇ ಒಂದು ದಿಕ್ಕು ಆದರೆ, ಯಡಿಯೂರಪ್ಪ ಅವರದ್ದೇ ಇನ್ನೊಂದು ದಿಕ್ಕು. ತಾವು ಹೇಳಿದಂತೆ ಕೇಳಿಕೊಂಡಿರುವ ಮುಖ್ಯಮಂತ್ರಿ ಬೇಕೆಂದು ಮೋದಿ-ಶಾ ಬಯಸಿದರೆ, ಅನರ್ಹರಿಗೆ ಸಚಿವಸ್ಥಾನ ಕೊಡುವುದು ಸೇರಿದಂತೆ ಹಲವು ವಿಷಯಗಳಲ್ಲಿ ಯಡಿಯೂರಪ್ಪನವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿಯೇ ರಾಜ್ಯದಲ್ಲಿ ಲಿಂಗಾಯತರ ಸಂಪೂರ್ಣ ಬೆಂಬಲ ಪಡೆದಿರುವ ಬಿಎಸ್‍ವೈಯನ್ನ ಕೈಬಿಡಲೂ ಆಗದೇ ಇತ್ತ ಇವರು ಸೂಚಿಸುವ ಪಕ್ಷಾಂತರಗೊಂಡ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡಲು ಆಗದೇ ಅಸಹಕಾರ ತೋರುತ್ತಿದ್ದಾರೆ ದಿಲ್ಲಿ ನಾಯಕರು.

ಇಷ್ಟಾದರೂ ಮರಳಿ ಯತ್ನವ ಮಾಡಲು ಸಿಎಂ ಬಿಎಸ್‍ವೈ ದೆಹಲಿ ಹೈಕಮಾಂಡ್ ಮನವೊಲಿಕೆಗೆ ಮುಂದಾದರೆ ಅಮಿತ್ ಶಾ ಭೇಟಿಗೆ ಅವಕಾಶವನ್ನೆ ನೀಡುತ್ತಿಲ್ಲಾ. ಮೂಲತಃ ಮೋದಿ ಮತ್ತು ಶಾ ಕಂಪನಿಯಷ್ಟು ಕೋಮುವಾದಿಯಾಗಿರದ ಯಡ್ಡಿಗೆ ತನ್ನು ಜಾತಿಯ ಬೆಂಬಲವನ್ನು ಉಳಿಸಿಕೊಳ್ಳಬೇಕು ಜೊತೆಗೆ ಕೊಟ್ಟ ಮಾತನ್ನು ಸಹ… ಹಾಗಾಗಿ ಯಡಿಯೂರಪ್ಪ ಹೈಕಮಾಂಡ್‍ಗೆ ಬಿಸಿಮುಟ್ಟಿಸಲು ಯೋಜನೆ ರೂಪಿಸುತ್ತಿದ್ದಾರೆ.

ಅದೆಂದರೆ ದಿಲ್ಲಿ ನಾಯಕರನ್ನ ಕಂಟ್ರೋಲ್‍ಗೆ ತರಲು ಮತ್ತು ರಾಜ್ಯದಲ್ಲಿ ತಮ್ಮ ಅಸ್ತಿತ್ವ ಕಾಯ್ದಿರಿಸಲು ಸಿಎಂ ಬಿಎಸ್‍ವೈ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಮಾವೇಶ ಮಾಡುವ ಮೂಲಕ ತಮಗಿರುವ ಜನ ಬೆಂಬಲವನ್ನು ಪ್ರದರ್ಶನ ಮಾಡಲು ಯೋಚಿಸುತ್ತಿದ್ದಾರೆ. ಜೊತೆಗೆ ತಮ್ಮ ಇಮೇಜ್ ಬಿಲ್ಡ್ ಮಾಡುವುದಕ್ಕಾಗಿಯೇ ಹತ್ತು ಹಲವು ರೀತಿಯಲ್ಲಿ ಜಾಹೀರಾತು ನೀಡಲು ಖಾಸಗಿ ತಂಡವೊಂದರ ಜೊತೆ ಯಡ್ಡಿ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಮೂಲಕ ಮುಂದಿನ ತಿಂಗಳು ಫೆ.27ಕ್ಕೆ ಯಡಿಯೂರಪ್ಪನವರ ಹುಟ್ಟುಹಬ್ಬದ ದಿನ ಕರ್ನಾಟಕದಲ್ಲಿ ಬಹುದೊಡ್ಡ ಶಕ್ತಿ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಬಿಜೆಪಿಯಲ್ಲಿನ ಃSಙ ಬಣ ದೊಡ್ಡ ಪ್ಲಾನ್ ಅನ್ನು ಹಾಕಿಕೊಂಡಿದ್ದು, ಅದಕ್ಕಾಗಿ ಕಾರ್ಯಯೋಜನೆ ಮಾಡುತ್ತಿದೆ..

ಈ ಕಾರ್ಯಕ್ರಮಕ್ಕೆ ಕೇಂದ್ರದ ನಾಯಕರಿಗೆ ಆಹ್ವಾನ ಕೊಡುತ್ತಾರ? ಇಲ್ಲವಾ ಎಂಬುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ. ಆದರೆ ರಾಜ್ಯದ ಮೂಲೆ-ಮೂಲೆಗಳಿಂದ ತಮ್ಮ ಬೆಂಬಲಿಗರನ್ನು ಸೇರಿಸಿ ನಾನು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಲ್ಲೆ ಎಂಬ ಸಂದೇಶ ಕೊಡಲು ತಯಾರಿ ನಡೆಸಿದ್ದಾರೆ. ಆ ಮೂಲಕ ಯಡ್ಡಿ ಹೈಕಮಾಂಡ್‍ಗೆ ಮತ್ತು ಪಕ್ಷದಲ್ಲಿ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವವರಿಗೆ ಈಗಲೂ ತಾನೊಬ್ಬ ಮಾಸ್ ಲೀಡರ್ ಎಂಬ ಸ್ಪಷ್ಟ ಸಂದೇಶ ನೀಡಲು ಮುಂದಾಗಿದ್ದಾರೆ. ನನ್ನೊಂದಿಗೆ ಸಹಕರಿಸಿ ಇಲ್ಲದಿದ್ದಲ್ಲಿ ತಾನು ಮತ್ತೆ ಬಂಡೆದ್ದರೆ ಅದಕ್ಕೆ ನೀವೆ ಹೊಣೆಗಾರರು ಎಂದು ಮೈಕೊಡವಲು ಯಡ್ಡಿ ಸಿದ್ಧರಾಗಿದ್ದಾರೆ. ಇದಕ್ಕಾಗಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ನಾನು ಕೈಕಟ್ಟಿ ಕೂರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ…? ಅದಕ್ಕೆ ಸಿಎಂ ತಲೆ ಬಾಗ್ತಾರ..? ಅರ್ಹರಿಗೆ ದಿಲ್ಲಿ ನಾಯಕರ ನಿರ್ಧಾರ ಒಪ್ಪಿಗೆ ಆಗುತ್ತಾ..? ಒಂದು ವೇಳೆ ಆಗದೇ ಹೋದರೆ ಬಿಎಸ್ ವೈ ಹುಟ್ಟುಹಬ್ಬಕ್ಕೆ ಯಾವ ಶಕ್ತಿ ಪ್ರದರ್ಶನ ಮಾಡಲಿದ್ದಾರೆ..? ಈ ಮೂಲಕ ಮೋದಿ – ಶಾ ಜೋಡಿಗೆ ಬಿಎಸ್‍ವೈ ಶಾಕ್ ಹೇಗಿರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ…..