ಹುಬ್ಬಳ್ಳಿಯಲ್ಲಿ ಸಿಎಎ ಜನಜಾಗೃತಿ ಮಹಾಸಮಾವೇಶ- ಅಮಿತ್ ಶಾ ಸ್ವಾಗತಕ್ಕೆ ಸಜ್ಜು

ಹುಬ್ಬಳ್ಳಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ನಾಳೆ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ಟ್ರಾಧ್ಯಕ್ಷ ಅಮಿತ್ ಶಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಹಾ ಸಮಾವೇಶಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಾಣಿಜ್ಯ ನಗರಿ ಸಂಪೂರ್ಣ ಕೇಸರಿ ಮಯವಾಗಿದೆ‌.

ಕೇಸರಿ ಮಯವಾದ ಹುಬ್ಬಳ್ಳಿ
ಎಲ್ಲೆಡೆ ರಾರಾಜಿಸುತ್ತಿರುವ ಬಿಜೆಪಿ ಬಾವುಟಗಳು‌. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸ್ವಾಗತ ಕೋರುವ ಬ್ಯಾನರ್ ಮತ್ತು ಕಟೌಟ್‌ಗಳು. ಕಣ್ಣು ಹಾಯಿಸಿದಲ್ಲೆಲ್ಲಾ ಕೇಸರಿ ಕಲರವ. ಇದು ವಾಣಿಜ್ಯ ನಗರ ಹುಬ್ಬಳ್ಳಿಯ ಚಿತ್ರಣ. ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನಜಾಗೃತಿ ‌ಮೂಡಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ನಗರದ ನೆಹರು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕಾಗಿ ವಿಶಾಲವಾದ ವೇದಿಕೆ ಸಿದ್ದಪಡಿಸಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಿಎಮ್ ಬಿ.ಎಸ್. ಯಡಿಯೂರಪ್ಪ, ಡಿಸಿಎಮ್ ಲಕ್ಷ್ಮಣ‌ಸವದಿ, ನಳೀನ್‌ಕುಮಾರ್ ಕಟೀಲ್, ಪ್ರಲ್ಹಾದ್ ಜೋಶಿ, ಸುರೇಶ್ ಅಂಗಡಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಬಿಜೆಪಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿರೋಧಿಗಳಿಗೆ ತಿರುಗೇಟು ನೀಡಲು ಬಿಜೆಪಿ ಸಿದ್ಧತೆ
ಸಿಎಎ ವಿರುದ್ದ ಹುಬ್ಬಳ್ಳಿಯಲ್ಲಿ ಈಗಾಗಲೇ ಹಲವು ಪ್ರತಿಭಟನೆಗಳು ನಡೆದಿವೆ. ವಿರೋಧಿಗಳಿಗೆ ಉತ್ತರ ಕೊಡುವಂತಹ ಮಹಾ ಸಮಾವೇಶ ನಡೆಸಲು ಬಿಜೆಪಿ ಸನ್ನದ್ಧವಾಗಿದೆ. ಹುಬ್ಬಳ್ಳಿ- ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಲಕ್ಷಾಂತರ ಜನರನ್ನು ಸೇರಿಸಿ ಸಿಎಎ ವಿರೋಧಿಗಳಿಗೆ ತಿರುಗೇಟು ನೀಡಲು ಬಿಜೆಪಿ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಜನರಿಗೆ, ಅದರಲ್ಲೂ ಯುವ ಸಮುದಾಯಕ್ಕೆ ತಪ್ಪು ಮಾಹಿತಿ ನೀಡಿವೆ. ಜನರಲ್ಲಿ ಜಾಗೃತಿ ಮೂಡಿಸಲು ಖುದ್ದಾಗಿ ಅಮಿತ್ ಶಾ ಆಗಮಿಸುತ್ತಿದ್ದು, ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ಕರೆತರಲಾಗುವುದು ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಪ್ರತಿಭಟನೆಯ ಬೆದರಿಕೆ- ನಗರದಲ್ಲಿ ಖಾಕಿ ಕಣ್ಗಾವಲು
ಇನ್ನೊಂದೆಡೆ ಗೋಬ್ಯಾಕ್ ಅಮಿತ್ ಶಾ ಹೋರಾಟ ನಡೆಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ಸಿಎಎ ಮತ್ತು ಎನ್‌ಆರ್‌ಸಿ ಜಾರಿ ವಿರೋಧಿಸಿ ಕಪ್ಪು ಬಟ್ಟೆ ಪ್ರದರ್ಶಿಸುವುದಾಗಿ ಕಾಂಗ್ರೆಸ್ ಮುಖಂಡರು ಈಗಾಗಲೆ ಘೋಷಿಸಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಕಾರ್ಯಕ್ರಮ ನಡೆಯುವ ನೆಹರು ಮೈದಾನದ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ಮೂರು ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ನಗರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಸೂಕ್ಷ್ಮ ಸ್ಥಳಗಳಲ್ಲಿ ತಪಾಸಣೆ ನಡೆಯುತ್ತಿದೆ. ಹೋಟೆಲ್ ಲಾಡ್ಜ್ ಗಳಿಗೆ ಬಂದು ಹೋಗುವವವರ ಮೇಲೆ ನಿಗಾವಹಿಸಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್‌. ದಿಲೀಪ್ ತಿಳಿಸಿದ್ದಾರೆ.

ಬಿಜೆಪಿ ನಾಯಕರಿಂದ ಮಹತ್ವದ ಸಭೆ ಸಾಧ್ಯತೆ
ಅಮಿತ್ ಶಾ ಅವರು ನಾಳೆ ಸಂಜೆ ನಾಲ್ಕು ಗಂಟೆಗೆ ಹುಬ್ಬಳ್ಳಿಗೆ ಬರಲಿದ್ದಾರೆ. ಜನಜಾಗೃತಿ ಸಮಾವೇಶದ ನಂತರ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ರಾತ್ರಿ ‌ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಸಂಪುಟ ವಿಸ್ತರಣೆ, ಅರ್ಹ ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳಿವೆ. ಒಟ್ಟಾರೆ ಅಮಿತ್ ಶಾ ಆಗಮನ ಹುಬ್ಬಳ್ಳಿಯಲ್ಲಿ ಸಂಚಲನ ಸೃಷ್ಟಿಸಿದೆ.