ಮಕ್ಕಳನ್ನೇ ಪಕ್ಷಕ್ಕಿಂತ ಮೇಲು ಎಂಬಂತೆ ಬಿಂಬಿಸಿದ್ದು ಕಾಂಗ್ರೆಸ್‌ ಗೆ ಹಿನ್ನಡೆ : ರಾಹುಲ್

ಲೋಕಸಭೆ ಚುನಾವಣೆಯಲ್ಲಿ ಮೂವರು ಹಿರಿಯ ನಾಯಕರು ತಮ್ಮ ಮಕ್ಕಳನ್ನೇ ಪಕ್ಷಕ್ಕಿಂತ ಮೇಲು ಎಂಬಂತೆ ಬಿಂಬಿಸಿದರು. ಇದು ಪಕ್ಷಕ್ಕೆ ಹಾನಿ ಉಂಟು ಮಾಡಿತು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ಹಲವು ಬಾರಿ ಸಿಟ್ಟಾದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ, ನನ್ನ ಸೋದರ ಒಂಟಿಯಾಗಿ ಹೋರಾಟ ನಡೆಸುತ್ತಿರುವಾಗ ನೀವೆಲ್ಲ ಎಲ್ಲಿದ್ದಿರಿ? ಯಾರೂ ಬೆಂಬಲ ನೀಡಲಿಲ್ಲ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.

ನನ್ನ ಬಳಿಕ ನೆಹರೂ ಕುಟುಂಬದ ಯಾರೂ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆಏರಬಾರದು ಎಂದೂ ರಾಹುಲ್ ಹೇಳಿದ್ದಾರೆ ಎನ್ನ ಲಾಗಿದ್ದು, ಪ್ರಿಯಾಂಕಾರನ್ನು ಅಧ್ಯಕ್ಷೆಯನ್ನಾಗಿ ಮಾಡಬೇಕು ಎಂಬ ಧ್ವನಿಯನ್ನೂ ಈ ಮೂಲಕ ಉಡುಗಿಸಿದ್ದಾರೆ. 4 ಗಂಟೆ ನಡೆದ ಸಭೆಯಲ್ಲಿ ಪ್ರಿಯಾಂಕಾ ಉಪಸ್ಥಿತರಿದ್ದರು. ಆದರೆ ರಾಹುಲ್ ಮಧ್ಯ ದಲ್ಲೇ ಸಿಟ್ಟಾಗಿ ಎದ್ದು ಹೋದರು. ರಾಹುಲ್ ರಾಜೀ ನಾಮೆ ನೀಡಲು ನಿರ್ಧರಿಸಿದ್ದೇನೆ ಎಂದಾಗ ಕೆಲವು ಮುಖಂಡರು ಮನವೊಲಿ ಸಲು ಪ್ರಯತ್ನಿಸಿದರು. ಈ ವೇಳೆ ರಾಹುಲ್ ಒಂಟಿಯಾಗಿ ಹೋರಾಡುತ್ತಿದ್ದಾಗ ನೀವು ಎಲ್ಲಿ ಹೋಗಿದ್ದಿರಿ ಎಂದು ಪ್ರಿಯಾಂಕಾ ಕೇಳಿದ್ದಾರೆ. ಅಲ್ಲದೆ ಪಕ್ಷದ ಸೋಲಿಗೆ ಕಾರಣರಾದ ಎಲ್ಲರೂ ಈ ರೂಮಿನಲ್ಲೇ ಕುಳಿತಿದ್ದೀರಿ ಎಂದೂ ಬೈದಿದ್ದಾರೆ. ರಫೇಲ್ ವಿವಾದ ಮತ್ತು ಚೌಕಿದಾರ್‌ ಚೋರ್‌ ಹೈ ಕ್ಯಾಂಪೇನ್‌ನಲ್ಲಿ ರಾಹುಲ್ರನ್ನು ಯಾರೂ ಬೆಂಬಲಿಸಿಲ್ಲ ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹಿರಿಯ ನಾಯಕರಾದ ಪಿ.ಚಿದಂಬರಂ, ಮಧ್ಯಪ್ರದೇಶ ಸಿಎಂ ಕಮಲ್ ನಾಥ್‌ ಮತ್ತು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ತಮ್ಮ ಮಕ್ಕಳೇ ಪಕ್ಷಕ್ಕಿಂತ ಮುಖ್ಯ ಎಂಬಂತೆ ವರ್ತಿಸಿದರು ಎಂದಿದ್ದಾರೆ. ಚಿದಂಬರಂ ಪುತ್ರ ಕಾರ್ತಿ ಹಾಗೂ ಕಮಲ್ನಾಥ್‌ ಪುತ್ರ ನಕುಲ್ ಗೆದ್ದಿದ್ದಾರೆ. ಗೆಹ್ಲೋಟ್ ಪುತ್ರ ವೈಭವ್‌ ಸೋಲುಂಡಿದ್ದಾರೆ. ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸಲು ನಾವು ಶ್ರಮಿಸಬೇಕು ಎಂದು ಗುಣಾ ಕ್ಷೇತ್ರದಲ್ಲಿ ಸೋಲುಂಡ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದಾಗ, ಹಿರಿಯ ನಾಯಕರೇ ಈ ರೀತಿ ವರ್ತಿಸಿದರೆ ಹೇಗೆ ಬಲಪಡಿಸಲು ಸಾಧ್ಯ. ಚಿದಂಬರಂ ಅವರಂತೂ ಪುತ್ರನಿಗೆ ಟಿಕೆಟ್ ನೀಡದಿದ್ದರೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಕುಟುಕಿದ್ದಾರೆ.

ಇನ್ನೊಂದೆಡೆ ಕಮಲ್ ನಾಥ್‌, ತನ್ನ ಪುತ್ರನಿಗೆ ಟಿಕೆಟ್ ನೀಡದಿದ್ದರೆ ಹೇಗೆ ನಾನು ಸಿಎಂ ಆಗಿ ಮುಂದುವರಿಯಲಿ ಎಂದೂ ಕೇಳಿದ್ದರು. ಗೆಹ್ಲೋಟ್ ತನ್ನ ಪುತ್ರನ ಪ್ರಚಾರದಲ್ಲೇ ಸಮಯ ಕಳೆದರು. ರಾಜ್ಯದ ಇತರ ಭಾಗಗಳನ್ನು ನಿರ್ಲಕ್ಷಿಸಿದರು ಎಂದು ಆರೋಪಿಸಿದ್ದಾರೆ.

Leave a Reply