ಕೊರೊನ ವೈರಸ್ ವಿರುದ್ಧ ಎಚ್ಚರಿಕೆ ನೀಡಿದ್ದ ವೈದ್ಯರ ಕುಟುಂಬಕ್ಕೆ ತಪ್ಪೊಪಿಗೆ ತಿಳಿಸಿದ ಚೈನಾ ಸರ್ಕಾರ

ಕೊರೊನ ವೈರಸ್ ಬಗ್ಗೆ ಮೊದಲಿಗೇ ಎಚ್ಚರ ನೀಡಿದ್ದ ವೈದ್ಯರ ಬಗ್ಗೆ ಚೈನಾ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಆ ವೈದ್ಯರು ನಂತರ ಅದೇ ಸೋಂಕಿಗೆ ಬಲಿಯಾಗಿದ್ದರು. ಸಾಮಾನ್ಯವಾಗಿ ಯಾವುದೇ ಟೀಕೆಯನ್ನು ಸಹಿಸಿಕೊಳ್ಳದ ಆಡಳಿತ ಕಮ್ಯುನಿಸ್ಟ್ ಪಕ್ಷ ಈಗ ತನ್ನ ತಪ್ಪನ್ನು ಒಪ್ಪಿಕೊಂಡು ವೈದ್ಯರ ಕುಟುಂಬಕ್ಕೆ ಕ್ಷಮಿಸುವಂತೆ ಕೋರಿಕೊಂಡಿದೆ.

ಡಾ. ಲಿ ವೆನ್ಲಿಯಾಂಗ್ ಅವರಿಗೆ ವುಹಾನ್ ಪೊಲೀಸ್ ಪಡೆ ಹಾಕಿದ್ದ ಬಂಧನದ ಬೆದರಿಕೆ ಮತ್ತು ಇತರ ಕ್ರಮಗಳನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಪಕ್ಷದ ಉನ್ನತ ಶಿಸ್ತು ಸಮಿತಿ ಹೇಳಿದೆ.

ಲಿ ಕುಟುಂಬಕ್ಕೆ ಕ್ಷಮೆ ಕೇಳಿರುವುದಾಗಿ ತಿಳಿಸಿರುವ ಸಮಿತಿ, ಈ ಪ್ರಕರಣವನ್ನು ಸರಿಯಾಗಿ ನಿಭಾಯಿಸದ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದೆ.

ಚೈನಾ ಕಮ್ಯುನಿಸ್ಟ್ ಸರ್ಕಾರ ಸಾಂಕ್ರಾಮಿಕ ರೋಗಗಳ ಹರಡುವಿಕೆ, ಪ್ರಕೃತಿ ವಿಕೋಪ, ವಿತ್ತೀಯ ಹಗರಣಗಳು ಮತ್ತು ಕಾರ್ಖಾನೆಗಳಲ್ಲಿ ಆಗುವ ಅಪಘಾತಗಳ ಮಾಹಿತಿಯನ್ನು ಮತ್ತು ಅದರ ಬಗೆಗಿನ ದೂರುಗಳನ್ನು ಗೌಪ್ಯವಾಗಿಟ್ಟು ಜನರನ್ನು ದಾರಿ ತಪ್ಪಿಸುತ್ತದೆ ಎಂಬ ಕೂಗು ಲಿ ಅವರ ಸಾವಿನ ನಂತರ ಹೆಚ್ಚಾಗಿತ್ತು.

ಒಂದು ತಿಂಗಳ ಹಿಂದೆ ವುಹಾನ್ ನಗರದಲ್ಲಿ ಕೊರೊನ ಸೋಂಕಿತರ ಸಂಖ್ಯೆ ತುತ್ತತುದಿಗೆ ತಲುಪಿ, ಈಗ ನಿಯಂತ್ರಣಕ್ಕೆ ಬಂದು ಕಳೆದ ಎರಡು ದಿನಗಳಿಂದ ಪ್ರಾದೇಶಿಕವಾಗಿ ಯಾವುದೇ ಹೊಸ ಸೋಂಕಿತ ಪ್ರಕರಣ ದಾಖಲಾಗದೆ ಉಳಿದಿದೆ. ಚೈನಾದಲ್ಲಿ ಕೊರೊನ ಸೋಂಕಿಗೆ ಮೂರು ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸುಮಾರು 80 ಸಾವಿರ ಜನ ಸೋಂಕು ತಗುಲಿ ಗುಣಮುಖರಾಗಿದ್ದಾರೆ.

ಹೊಸ ರೋಗದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಎಚ್ಚರಿಕೆ ನೀಡಿದ್ದಕ್ಕೆ ಲಿ ಅವರನ್ನು ಒಳಗೊಂಡಂತೆ ಎಂಟು ಜನ ವೈದ್ಯರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಈ ಕ್ರಮವನ್ನು ನಂತರ ಚೈನಾದ ಸುಪ್ರೀಂ ಕೋರ್ಟ್ ಟೀಕಿಸಿತ್ತು ಆದರೆ ಚೈನಾ ಆಡಳಿತ ಪಕ್ಷ ಮಾತ್ರ ಸೋಂಕಿನ ಮಾಹಿತಿ ತಡೆಹಿಡಿದು ಹೆಚ್ಚು ಹರಡದಂತೆ ನೋಡಿಕೊಂಡಿತ್ತು.

ಈ ಹಿಂದೆಯೂ ಸಾರ್ಸ್ ರೋಗ ವ್ಯಾಪಕವಾಗಿ ಹರಡಿದ್ದಾಗ ಚೈನಾ ಆಡಳಿತ ಪಕ್ಷದ ಬಗ್ಗೆ ಇದೇ ಟೀಕೆಗಳು ಕೇಳಿಬಂದಿದ್ದವು.

2018ರಲ್ಲಿ ಚೈನಾ ಸಂವಿಧಾನವನ್ನೇ ಬದಲಾಯಿಸಿದ್ದ ಸದ್ಯದ ಚೈನಾ ಮುಖ್ಯಸ್ಥ ಕ್ಸಿ, ಎರಡು ಅವಧಿಗೆ ಮಾತ್ರ ಅಧಿಕಾರ ವಹಿಸಿಕೊಳ್ಳುವ ನಿಯಮವನ್ನು ಬದಲಿಸಿ, ತಮ್ಮಿಚ್ಚೆಯವರೆಗೂ ಮುಖ್ಯಸ್ಥನಾಗಿ ಉಳಿಯುವಂತೆ ತಿದ್ದುಪಡಿ ಮಾಡಿಕೊಂಡಿದ್ದರು.