ಲಾಕ್‌ಡೌನ್: ಮುಚ್ಚಿರುವ ಶಾಲೆಗಳಲ್ಲಿ ನಿರಾಶ್ರಿತರಿಗೆ ತಾತಾಲ್ಕಿಕ ಆಶ್ರಯ ನೀಡಲು ಒತ್ತಾಯ

ಲಾಕ್‌ಡೌನ್‌ ಒಂದು ದಿನ ಕಳೆದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಅಷ್ಟರಲ್ಲಿ ದೇಶಾದ್ಯಂತ ಲಕ್ಷಾಂತರ ಜನತೆ ಅದರಲ್ಲೂ ವಲಸೆ ಕಾರ್ಮಿಕರು ಊಟ ವಸತಿಯಿಲ್ಲದೇ ಪರಿತಪಿಸುತ್ತಿರುವ ವಿಡಿಯೋಗಳು ಪ್ರಜ್ಞಾವಂತರ ಮನಸಾಕ್ಷಿಯನ್ನು ಕಲಕುತ್ತಿವೆ. ಅವರಿಗೆ ಸರ್ಕಾರ ಕೂಡಲೇ ತಾತ್ಕಾಲಿಕ ವ್ಯವಸ್ಥೆ ಮಾಡಬೇಕೆಂಬ ಕೂಗು ಜೋರಾಗಿ ಕೇಳಿಬಂದಿದೆ. ಅದಕ್ಕೆ ಕಾರ್ಯಸಾಧುವಾದ ಪರಿಹಾರವನ್ನು ಸಹ ಹಲವರು ಸೂಚಿಸಿದ್ದಾರೆ.

ಲಾಕ್‌ಡೌನ್‌ ಕಾರಣಕ್ಕೆ ಶಾಲೆಗಳು ಸ್ಥಗಿತಗೊಂಡಿರುವುದರಿಂದ, ನಿರಾಶ್ರಿತ ಜನರಿಗೆ ಸ್ಥಳಾವಕಾಶ ಕಲ್ಪಿಸಲು ಅವುಗಳನ್ನು ತಾತ್ಕಾಲಿಕ ರಾತ್ರಿ ಆಶ್ರಯ ತಾಣಗಳಾಗಿ ಪರಿವರ್ತಿಸಬಹುದು ಮತ್ತು ಅವರಿಗೆ ರಾತ್ರಿಯಲ್ಲಿ ಉಳಿಯಲು ಸ್ಥಳ ನೀಡಬಹುದು. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ರವರು ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ಖ್ಯಾತ ಯೂಟ್ಯೂಬರ್‌ ಮತ್ತು ಸಾಮಾಜಿಕ ಕಾರ್ಯಕರ್ತ ಧೃವ್‌ ರಾಠೀ ಒತ್ತಾಯಿಸಿದ್ದಾರೆ.

ಲಾಕ್‌ಡೌನ್‌ ಆದ ಕಾರಣಕ್ಕೆ ದೆಹಲಿಯಿಂದ ಉತ್ತರ ಪ್ರದೇಶ ಮತ್ತು ರಾಜಸ್ಥಾನದವರೆಗೂ ಸಮಾರು 200-250 ಕಿ.ಮೀ ದೂರು ನಡೆದುಹೋಗುವ ಚಿತ್ರಗಳು ಮತ್ತು ವಿಡಿಯೋಗಳು ಮನಕಲಕಿದ್ದವು. ಅದೇ ರೀತಿ ನಿನ್ನೆ ದೆಹಲಿಯ ಯಮುನಾ ಪುಸ್ತ ಬಳಿಯೊಂದರಲ್ಲಿಯೇ 8000 ನೆಲೆಯಿಲ್ಲದ ವಲಸೆ ಕಾರ್ಮಿಕರು ಊಟಕ್ಕಾಗಿ ಸಾಲಾಗಿ ಕುಳಿತಿರುವ ವಿಡಿಯೋ ಸಹ ನೋವು ತರಿಸುತ್ತದೆ. ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳಲಾಗದ ಹೀನಾಯ ಪರಿಸ್ಥಿತಿಯಲ್ಲಿ ಆ ಜನ ದಿನದೂಡುತ್ತಿದ್ದಾರೆ.

ಈ ಬಡವರು ಆಗ್ರಾಕ್ಕೆ 250 ಕಿ.ಮೀ ಮತ್ತು ನಂತರ ಕೆಲವರು ರಾಜಸ್ಥಾನಕ್ಕೆ ಹೋಗುತ್ತಾರೆ .. ಅವರಲ್ಲಿ ಒಬ್ಬರು ಬಲ್ವೀರ್ ಎಂಬುವವರು ಎರಡು ದಿನಗಳ ಕಾಲ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಲಾಕ್‌ಡೌನ್‌ ಕಾರಣಕ್ಕೆ ಸಾಯುವುದಕ್ಕಿಂತ ಹಳ್ಳಿಗೆ ಹೋಗಿ ತಾಯಿಯ ಮುಂದೆ ಸಾಯುವುದು ಉತ್ತಮ, ಹೊಟ್ಟೆಪಾಡಿಗಾಗಿ ಬ್ರೆಡ್ ಹುಡುಕಿಕೊಂಡು ನಗರಕ್ಕೆ ಬಂದ ಅವರು ಈಗ ಮತ್ತೆ ಅದೇ ಬ್ರೆಡ್‌ಗಾಗಿ ಹಿಂತಿರುಗುತ್ತಿರುವುದು ನೋವಿನ ವಿಷಯ ಎಂದು ಸೌರಭ್‌ ಶುಕ್ಲಾ ಎಂಬುವವರು ವಿಷಾಧ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬಡಜನರ ಬಗ್ಗೆ ಕೂಡಲೇ ಕಾಳಜಿವಹಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಲಾಕ್‌ಡೌನ್‌ನ ಒಂದೇ ದಿನಕ್ಕೆ ಇಷ್ಟು ಸಮಸ್ಯೆಯಾದರೆ ಇನ್ನು 20 ದಿನ ಹೇಗೆ ಸಹಿಸುವುದು? ಹೇಗೆ ಕೊರೊನಾದಿಂದ ಜನ ಸಾಯಬಾರದೋ ಅದೇ ರೀತಿ ಹಸಿವಿನಿಂದ, ನೆಲೆಯಿಲ್ಲದೇ ಸಾಯಬಾರದು ಎಂಬುದು ಎಲ್ಲರ ಕಾಳಜಿಯಾಗಿದೆ.