ಕೊರೋನಾ ಭೀತಿ; ಐಪಿಎಲ್‌ಗೆ ವಿದೇಶಿ ಆಟಗಾರರೂ ಇಲ್ಲ, ಪ್ರೇಕ್ಷಕರೂ ಇಲ್ಲ

ಕೊರೊನವೈರಸ್ ಭೀತಿಯ ಕಾರಣದಿಂದ ವಿದೇಶಿಗರಿಗೆ (ರಾಜತಾತ್ರಿಂಕ ಮತ್ತು ಉದ್ಯೋಗ ಸಂಬಂಧಿ ಕೆಲವು ವಿಭಾಗಗಳನ್ನು ಹೊರತುಪಡಿಸಿ) ವೀಸಾ ನೀಡುವುದನ್ನು ಸರ್ಕಾರ ನಿರ್ಬಂಧಿಸಲಾಗಿದೆ. ಇದರಿಂದಾಗಿ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ – 2020) ಗೆ ವಿದೇಶಿ ಆಟಗಾರರು ಏಪ್ರಿಲ್‌ 15ರ ವರೆಗೆ ದೇಶಕ್ಕೆ ಬರುವುದು ಕಷ್ಟವಾಗಿದೆ. ಇದರಿಂದ ಐಪಿಲ್‌ಗೆ ದೊಡ್ಡ ಸಂಕಷ್ಟ ಈ ಬಾರಿ ಎದುರಾಗಿದೆ. ಅಲ್ಲದೆ, ಕ್ರಿಕೆಟ್‌ ಪ್ರೇಮಿಗಳೂ ಗುಂಪುಗಳಲ್ಲಿ ಬೆರೆಯಲು ಹೆದರುತ್ತಿರುವುದರಿಂದ ಪ್ರೇಕ್ಷಕರಿಲ್ಲದೇ ಐಪಿಎಲ್‌ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.

ಕೊರೊನವೈರಸ್ ಹರಡುತ್ತಿರುವ ಕಾರಣ ದೊಡ್ಡ ದೊಡ್ಡ ಸಭೆ, ಜನಸಂದಣಿಗಳನ್ನು ನಿರ್ಭಂದಿಸಬೇಕಾಗಿದೆ. ಹಾಗಾಗಿ ಈ ಬಾರಿ ಪ್ರೇಕ್ಷಕರಿಲ್ಲದೇ ಐಪಿಎಲ್‌ ನಡೆಸಲು ಚರ್ಚೆ ನಡೆಸಲಾಗುತ್ತಿದೆ. ನೇರ ಪ್ರಸಾರ ಮಾತ್ರ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ.

ಐಪಿಎಲ್ ಆಡಳಿತ ಮಂಡಳಿಯು ಮಾರ್ಚ್ 14 ರಂದು ಸಭೆ ಸೇರಿ ಪಂದ್ಯಾವಳಿಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಟಿಐ ವರದಿಯ ಪ್ರಕಾರ, ಭಾರತಕ್ಕೆ ವೀಸಾ ಅಮಾನತುಗೊಳಿಸಿರುವ ಕಾರಣ ಏಪ್ರಿಲ್ 15 ರವರೆಗೆ ವಿದೇಶಿ ಆಟಗಾರರಿಗೆ ಪಂದ್ಯಾವಳಿಯಲ್ಲಿ ಆಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

ಐಪಿಎಲ್ 2020 ಮಾರ್ಚ್ 29 ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ.