ಬಾಂಬರ್ ಆದಿತ್ಯರಾವ್ ನನ್ನ ಮಂಗಳೂರಿಗೆ ಕರೆದೊಯ್ಯಲು ಕೋರ್ಟ್ ಅನುಮತಿ..

ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಿರುವ ಆದಿತ್ಯ ರಾವ್ ನನ್ನು ಪೊಲೀಸರು ಇಂದು 1ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದರು. ಮಂಗಳೂರು ಪೊಲೀಸರಿಗೆ ಆದಿತ್ಯರಾವ್ ನನ್ನು ಹಸ್ತಾಂತರಿಸುವ ಪ್ರಕ್ರಿಯೆಗಳ ಬಳಿಕ ಪೊಲೀಸರು ಬಿಗಿಭದ್ರತೆಯಲ್ಲಿ ಆರೋಪಿ ಆದಿತ್ಯರಾವ್ ನನ್ನು ಕೋರ್ಟ್ ಗೆ ಹಾಜರುಪಡಿಸಿದರು. ಈ ವೇಳೆ, ನ್ಯಾಯಾಧೀಶರು ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ಅನುಮತಿ ನೀಡಿದರು.

ಇನ್ನು ಹಲಸೂರು ಗೇಟ್ ಪೊಲೀಸರ ವಶದಲ್ಲಿದ್ದ ಆರೋಪಿ ಆದಿತ್ಯರಾವ್ ನನ್ನು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ವಿಚಾರಣೆ ನಡೆಸಿದರು. ಈ ನಡುವೆ, ಮಂಗಳೂರು ಪೊಲೀಸರಿಗೆ ಆರೋಪಿ ಆದಿತ್ಯರಾವ್ ನನ್ನು ಹಸ್ತಾಂತರಿಸುವ ಬಗ್ಗೆ ಐಎಸ್ ಡಿ ಅಧಿಕಾರಿಗಳು ಚರ್ಚೆ ನಡೆಸಿದರು. ಬಳಿಕ ಆರೋಪಿ ಆದಿತ್ಯರಾವ್ ನನ್ನು ಮಂಗಳೂರು ಪೊಲೀಸರು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದರು. ಈ ಹಿಂದೆಯೂ ಈತ ಎಲ್ಲಿಯಾದರೂ ಬಾಂಬ್ ಇಟ್ಟಿದ್ದನಾ ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಿದರು. ಈ ಮಧ್ಯೆ, ಆರೋಪಿ ಆದಿತ್ಯರಾವ್ ವಿಚಾರಣೆ ವೇಳೆ ಆತನ ಬಳಿ ಒಂದು ಮೊಬೈಲ್ ಫೋನ್, ಎರಡು ಸಿಮ್ ಕಾರ್ಡ್ ಹಾಗೂ ಒಂದು ಪರ್ಸ್ ಪತ್ತೆಯಾಗಿದೆ.

ಇನ್ನು ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇರಿಸಿದ ಬಳಿಕ ಆರೋಪಿ ಆದಿತ್ಯ ರಾವ್ ಶಿವಮೊಗ್ಗಕ್ಕೆ ತೆರಳಿದ್ದ. ಶಿವಮೊಗ್ಗದಿಂದ ಕಳೆದ ರಾತ್ರಿ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಬೆಂಗಳೂರಿಗೆ ಧಾವಿಸಿದ್ದಾನೆ. ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಆತ ಬೆಂಗಳೂರಿಗೆ ತಲುಪಿದ್ದು, ಬೆಳಗ್ಗೆ 8 ಗಂಟೆಯವರೆಗೆ ಮಿಂಟೋ ಆಸ್ಪತ್ರೆ ಆವರಣದಲ್ಲಿ ವಿಶ್ರಾಂತಿ ಪಡೆದಿದ್ದ. ಆ ಬಳಿಕ ಆತ ಶರಣಾಗಿದ್ದ…