Cricket : ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ – ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ

ಗಯಾನಾ: ಉಪನಾಯಕ ಅಜಿಂಕ್ಯಾ ರಹಾನೆ ಶತಕ ಹಾಗೂ ಮಧ್ಯಮ ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಯ ನೆರವಿನಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ 318 ರನ್ನುಗಳ ಭರ್ಜರಿ ಜಯ ದಾಖಲಿಸಿದೆ.

ಮೊದಲ ಸರದಿಯಲ್ಲಿ 75 ರನ್ ಮುನ್ನಡೆ ಪಡೆದ ಭಾರತವು ಎರಡನೇ ಸರದಿಯಲ್ಲಿ ಪಂದ್ಯ ಪರುರಷ ರಹಾನೆ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 343 ರನ್ ಗಳಿಸಿ ಡಿಕ್ಲೇರ್‍ ಮಾಡಿತು. ಪಂದ್ಯ ಗೆಲ್ಲಲು 419 ರನ್ ಗುರಿ ಪಡೆದ ವಿಂಡೀಸ್ ತಂಡವು ತನ್ನ ಎರಡನೇ ಸರದಿಯಲ್ಲಿ ಕೇವಲ 100 ರನ್ನುಗಳಿಗೆ ಮುದುಡಿಕೊಂಡಿತು.

ಭಾರೀ ಸವಾಲಿನ ಎದಿರು ವಿಂಡಿಸಿಗರು ಮಖು ಕವಿದಂತಾದರು. ಕೇವಲ 8 ಓವರ್‍ ಎಸೆದ ಬುಮ್ರಾ ನಾಲ್ಕು ಮೇಡನ್ ಸೇರಿದಂತೆ 7 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ವಿಂಡೀಸ್ ನಡ ಕತ್ತರಿಸಿದರು. ಪರಿಣಾಮ ಭಾರತದ ಖಾತೆಗೆ 60 ಅಂಕ ಸಂದಾಯವಾಯಿತು.

ಎರಡನೇ ಸರದಿಯಲ್ಲಿ ವಿಂಡೀಸ್ ಪರ ಬಾಲಂಗೋಚಿಗಳಾದ ರೋಚ್ 38 ರನ್ ಮಾಡಿದರೆ ಕಮಿನ್ಸ್ 19 ರನ್ ಗಳಿಸಿದ್ದೇ ಅಧಿಕ ಮೊತ್ತವಾಯಿತು. ಚೇಸ್ 12 ರನ್ ಗಳಿಸಿದ್ದು ಬಿಟ್ಟರೇ ಉಳಿದ ವಿಂಡಿಸ್ ದಾಂಡಿಗರು ಎರಡಂಕಿ ಮೊತ್ತ ತಲುಪಲಿಲ್ಲ.

ಇದಕ್ಕೆ ಮುನ್ನ ಮೂರು ವಿಕೆಟ್ ನಷ್ಟಕ್ಕೆ 185 ರನ್ನುಗಳ ಮೊತ್ತದಿಂದ ತನ್ನ ಎರಡನೇ ಸರದಿ ಮುಂದುವರಿಸಿದ ಭಾರತವು 7 ವಿಕೆಟ್ ಕಳೆದುಕೊಂಡು 343 ರನ್ ಗಳಿಸಿದ್ದಾಗ ಇನಿಂಗ್ಸ್ ಘೋಷಿಸಿಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ ಭಾರತದ ಆಪದ್ಬಾಂಧವನಾಗಿದ್ದ ರಹಾನೆ ದ್ವಿತೀಯ ಸರದಿಯಲ್ಲಿ 102 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ 93 ರನ್ ಗಳಿಸಿ ಶತಕ ವಂಚಿತರಾದರು. ಈ ಜೋಡಿಯು ಐದನೇ ವಿಕೆಟ್ಟಿಗೆ 135 ರನ್ ಜೊತೆಯಾಟ ನಿಭಾಯಿಸಿತು. ವಿಂಡೀಸ್ ಪರ ಚೇಸ್ ನಾಲ್ಕು ವಿಕೆಟ್ ಕಿತ್ತರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights