Cricket Ind vs NZ : ಸಂಘಟಿತ ಆಟದ ಫಲ ದಾಖಲೆಯ ಸರಣಿ ಜಯ – ರೋಹಿತ್ ಶರ್ಮಾ..

ನ್ಯೂಜಿಲೆಂಡ್ ವಿರುದ್ಧ ಐದನೇ ಏಕದಿನ ಪಂದ್ಯದಲ್ಲಿ ಭಾರತ 35 ರನ್ ಜಯ ಸಾಧಿಸಿದ್ದು, ಸರಣಿಯನ್ನು 4-1 ರಿಂದ ವಶಕ್ಕೆ ಪಡೆದಿದೆ.

ನಾಯಕ ರೋಹಿತ್ ಶರ್ಮಾ ಪಂದ್ಯದ ಬಳಿಕ ಮಾತನಾಡಿ, ಹ್ಯಾಮಿಲ್ಟನ್ ನ ಸೋಲಿನ ಬಳಿಕ ಪುಟಿದೇಳುವುದು ಅನಿವಾರ್ಯವಾಗಿತ್ತು. ಐದನೇ ಪಂದ್ಯದಲ್ಲಿ ಸಂಘಟಿತ ಆಟ ಫಲ ನೀಡಿದೆ ಎಂದು ತಿಳಿಸಿದ್ದಾರೆ.

ಪಟಪಟನೇ ನಾಲ್ಕು ವಿಕೆಟ್ ಗಳು ಉರುಳಿದಾಗ, ಯಾರಾದರು ವಿಕೆಟ್ ಕಾಯ್ದುಕೊಂಡು ಆಡುವುದು ಅನಿವಾರ್ಯವಾಗಿತ್ತು. ಈ ಜವಾಬ್ದಾರಿಯನ್ನು ಅನುಭವಿ ಅಂಬಟಿ ರಾಯುಡು ಹಾಗೂ ವಿಜಯ್ ಶಂಕರ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಕೇದಾರ್ ಜಾದವ್ ತಂಡದ ಮೊತ್ತ ಹಿಗ್ಗಿಸುವಲ್ಲಿ ನೆರವಾಗಿದ್ದಾರೆ. ಬೌಲರ್ ಗಳು ಉತ್ತಮ ಪ್ರದರ್ಶನ ನೀಡಿ ಜಯದಲ್ಲಿ ಮಿಂಚಿದ್ದಾರೆ ಎಂದು ಆಟಗಾರರ ಬೆನ್ನು ತಟ್ಟಿದರು.

ಮಧ್ಯಮ ಕ್ರಮಾಂಕಿತ ಅಂಬಟಿ ರಾಯುಡು (90 ರನ್ ) ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (45 ರನ್) ಸಮಯೋಚಿತ ಆಟದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಭಾರತ 35 ರನ್ ಗಳ ಜಯ ಸಾಧಿಸಿದ್ದು, ಸರಣಿಯನ್ನು 4-1 ರಿಂದ ಗೆದ್ದು ಬೀಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರೋಹಿತ್ ಪಡೆ 49.5 ಓವರ್ ಗಳಲ್ಲಿ 252 ರನ್ ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ 44.1 ಓವರ್ ಗಳಲ್ಲಿ 217 ರನ್ ಗಳಿಗೆ ಸರ್ವಪತನ ಕಂಡಿತು.

253 ರನ್ ಗುರಿ ಬೆನ್ನಟ್ಟಿದ ಕಿವೀಸ್ ತಂಡದ ಆರಂಭ ಕಳಪೆಯಾಗಿತ್ತು. ಹ್ಯಾನ್ರಿ ನಿಕೋಲ್ಸ್‍ (8), ಕಾಲಿನ ಮನ್ರೋ (24) ಹಾಗೂ ರಾಸ್ ಟೇಲರ್ (1) ಬೇಗನೆ ವಿಕೆಟ್ ಒಪ್ಪಿಸಿದರು. 38 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಜಿಲೆಂಡ್ ಗೆ ಕೇನ್ ವಿಲಿಯಮ್ಸನ್ (39) ಹಾಗೂ ಟಾಮ್ ಲಾಥಮ್ (37) ಆಧಾರವಾದರು. ಈ ಜೋಡಿ ತಂಡಕ್ಕೆ 67 ರನ್ ಜೊತೆಯಾಟದ ಕಾಣಿಕೆ ನೀಡಿತು.

ಕಾಲಿನ್ ಡಿ ಗ್ರ್ಯಾಂಡ್ ಹೋಮ್ (11) ರನ್ ಕಲೆ ಹಾಕುವಲ್ಲಿ ಎಡವಿದರು. 7ನೇ ವಿಕೆಟ್ ಗೆ ಜೇಮ್ಸ್ ನೀಶಾಮ್ ಹಾಗೂ ಮಿಚೆಲ್ ಸ್ಯಾಂಟನರ್ ಜೋಡಿ ತಂಡದ ಸ್ಕೋರ್ ಗೆ 41 ರನ್ ಸೇರಿಸಿತು. ನೀಶಾಮ್, ಧೋನಿ ಚಾಣಕ್ಯ ನಡೆಗೆ ಬಲಿಯಾದರು. ಕೆಳ ಕ್ರಮಾಂಕಿತರು ರನ್ ಕಲೆ ಹಾಕಲಿಲ್ಲ. ಪರಿಣಾಮ ನ್ಯೂಜಿಲೆಂಡ್ ತಂಡ 217 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಯಜುವೇಂದ್ರ ಚಹಾಲ್ ಮೂರು, ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಬ್ಲ್ಯೂ ಬಾಯ್ಸ್ ರೋಹಿತ್ ಶರ್ಮಾ (2), ಶಿಖರ್ ಧವನ್ (6), ಶಭ್ ಮನ್ ಗಿಲ್ (7), ಮಹೇಂದ್ರ ಸಿಂಗ್ ಧೋನಿ (1) ರನ್ ಕಲೆ ಹಾಕುವಲ್ಲಿ ಎಡವಿದರು. 18 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಟೀಮ್ ಇಂಡಿಯಾಗೆ ಮಧ್ಯಮ ಕ್ರಮಾಂಕದ ಅಂಬಟಿ ರಾಯುಡು ಹಾಗೂ ವಿಜಯ್ ಶಂಕರ್ ಆಧಾರವಾದರು. ಈ ಜೋಡಿ ತಂಡದ ಮೊತ್ತವನ್ನು 100 ರನ್ ಗಳ ಗಡಿ ದಾಟಿಸಿತು. ಅಲ್ಲದೆ ಸಂಕಷ್ಟದಲ್ಲಿದ್ದ ತಂಡಕ್ಕೆ 98 ರನ್ ಸೇರಿಸಿತು. ವಿಜಯ್ ಶಂಕರ್ ಇಲ್ಲದ ರನ್ ಕದಿಯಲು ಹೋಗಿ ಔಟ್ ಆದರು.

ಐದನೇ ವಿಕೆಟ್ ಗೆ ಅಂಬಟಿ ಹಾಗೂ ಕೇದಾರ್ ಜಾದವ್ 74 ರನ್ ಸೇರಿಸಿದರು. 90 ರನ್ ಗಳಿಸಿ ಮುನ್ನುಗುತ್ತಿದ್ದಾಗ ಅಂಬಟಿ ಔಟ್ ಆದರು. ಕೇದಾರ್ ಜಾದವ್ ಹೆನ್ರಿ ಎಸೆತವನ್ನು ತಪ್ಪಾಗಿ ತಿಳಿದು ಬೋಲ್ಡ್ ಆದರು.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಘನತೆಗೆ ತಕ್ಕ ಆಟವಾಡಿದರು. 22 ಎಸೆತಗಳಲ್ಲಿ ಪಾಂಡ್ಯ 2 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಅಂತಿಮವಾಗಿ ಟೀಮ್ ಇಂಡಿಯಾ 252 ರನ್ ಗಳಿಗೆ ಆಲೌಟ್ ಆಯಿತು. ಮ್ಯಾಟ್ ಹೆನ್ರಿ 4 ಹಾಗೂ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ 49.5 ಓವರ್ ಗಳಲ್ಲಿ 252

ನ್ಯೂಜಿಲೆಂಡ್ 44.1 ಓವರ್ ಗಳಲ್ಲಿ 217 ರನ್

Leave a Reply