ದಾಖಲೆ ಮತಗಳ ಅಂತರದಿಂದ ಡಿಕೆ ಸುರೇಶ್ ಗೆಲ್ಲಿಸಿ: ಸಿಎಂ ಕುಮಾರಸ್ವಾಮಿ ಕರೆ

 ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್- ಜೆಡಿಎಸ್ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಭಾನುವಾರ ರಾತ್ರಿ ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಿಷ್ಟು…,
‘ಮೈತ್ರಿ ಸರ್ಕಾರದಲ್ಲಿ ನಾವೆಲ್ಲರೂ ಒಂದೇ. ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎಂಬ ಬೇಧಭಾವ ಇಲ್ಲ. ನಮ್ಮ ಅಭ್ಯರ್ಥಿಯ ಗೆಲುವಿಗೆ ಅವರು, ಅವರ ಅಭ್ಯರ್ಥಿ ಗೆಲುವಿಗೆ ನಾವು ಒಗ್ಗಟ್ಟಿನಿಂದ ಶ್ರಮಿಸಬೇಕು. ಇಲ್ಲಿ ಯಾವುದೇ ಗೊಂದಲ, ಅನುಮಾನಗಳಿಗೆ ಆಸ್ಪದ ಇರಬಾರದು. ರಾಜಕೀಯ ಹಾಗೂ ಮೈತ್ರಿ ಧರ್ಮ ಪಾಲನೆಯಾಗಬೇಕು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ರಾಜ್ಯ ರಾಜಕೀಯದ ದಿಕ್ಕು ದೆಸೆ ಬದಲಾಗಿದೆ. ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ನವರು ನಮ್ಮ ಪರವಾಗಿ ನಿಂತಿದ್ದಾರೆ. ನಾವೆಲ್ಲರೂ ಒಂದೇ ಎಂಬ ರೀತಿಯಲ್ಲಿ ಅವರು ನಡೆದುಕೊಂಡು ಬಂದಿದ್ದಾರೆ. ನಾವು ಕೂಡ ಅದೇರೀತಿ  ವರ್ತಿಸಬೇಕು ಮತ್ತು ಋಣ ತೀರಿಸಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಅವರ ಗೆಲವು ರಾಜ್ಯದಲ್ಲೇ ಹೊಸ ಇತಿಹಾಸ ಬರೆಯಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ದುಡಿಯೋಣ. ಪ್ರಚಾರ ಕಾರ್ಯದಿಂದ ಹಿಡಿದು ಚುನಾವಣೆ ಗೆಲುವಿನವರೆಗೂ ಪ್ರತಿ ಹಂತದಲ್ಲೂ ನಾವು ಸುರೇಶ್ ಅವರ ಬೆನ್ನಿಗೆ ನಿಲ್ಲಬೇಕು. ಸುರೇಶ್ ಅವರ ಭರ್ಜರಿ ಗೆಲುವು ನಮ್ಮೆಲ್ಲರ ಜವಾಬ್ದಾರಿ.’
ಈ ಸಭೆಯಲ್ಲಿ ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್, ಸ್ಥಳೀಯ ಸಂಸದ, ಲೋಕಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್, ಶಾಸಕರಾದ ಮುನಿರತ್ನ, ಶಿವಣ್ಣ, ಎ. ಮಂಜು, ಡಾ. ರಂಗನಾಥ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿತರರು ಭಾಗವಹಿಸಿದ್ದರು.

 

Leave a Reply

Your email address will not be published.