6 ರಿಂದ 9ನೇ ತರಗತಿ ಮಕ್ಕಳಿಗೆ ಕೊರೋನಾ ಬರುವುದಿಲ್ಲವೇ? ಸರ್ಕಾರದ ವಿರುದ್ದ ಪೋಷಕರ ಕಿಡಿ…

ದೇಶದಲ್ಲೇ ಕೊರೋನಾಗೆ ಮೊದಲ ಸಾವು ಸಂಭವಿಸಿರುವದು ನಮ್ಮ ರಾಜ್ಯದಲ್ಲಿ.ಹೀಗಾಗಿ ವೈರಸ್ ಭೀತಿಯಿಂದ ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಪೂರ್ವಪ್ರಾಥಮಿಕ ತರಗತಿಯಿಂದ 5ನೇ ತರಗತಿ ಮಕ್ಕಳಿಗೆ ಮಾತ್ರ ರಜೆ ಘೋಷಣೆ ಮಾಡಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾ ವೈರಸ್ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ರದ್ದುಪಡಿಸಿದ್ದ ಸರ್ಕಾರ, ಬೇಸಿಗೆ ರಜೆ ಘೋಷಣೆ ಮಾಡಿದೆ. ಅಲ್ಲದೆ, 6ರಿಂದ 7ನೇ ತರಗತಿ ಮಕ್ಕಳಿಗೆ ರಜೆ ಘೋಷಣೆ ಮಾಡಿ, ಪರೀಕ್ಷೆಗಳಿಗೆ ಮಾತ್ರ ಹಾಜರಾಗಬೇಕೆಂದು ತಿಳಿಸಿತ್ತು.

ಸರ್ಕಾರದ ಈ ಕ್ರಮ ಇದೀಗ 6-9ನೇ ತರಗತಿ ಮಕ್ಕಳ ಪೋಷಕರ ಕಣ್ಣು ಕೆಂಗೆಣ್ಣಿಗೆ ಗುರಿಯಾಗಿದೆ. 6ರಿಂದ 9ನೇ ತರಗತಿಯ ಮಕ್ಕಳು ಮಕ್ಕಳಲ್ಲವೇ? ಅವರಿಗೇನು ವೈರಸ್ ಬರುವುದಿಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಪ್ರವೀಣ್ ಕುಮಾರ್ ಎಂಬುವವರು ಮಾನತಾಡಿ, ನನ್ನ ಮಗ 8ನೇ ತರಗತಿ ಓದುತ್ತಿದ್ದಾನೆ. ಅಧಿಕಾರಿಗಳು ಪರೀಕ್ಷೆಯನ್ನು ಮುಂದೂಡಬಹುದಿತ್ತು. ಇಲ್ಲವೇ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಬಹುದಿತ್ತು. ಪರೀಕ್ಷಾ ಕೊಠಡಿಯಲ್ಲಿ ಮಕ್ಕಳೆಲ್ಲರೂ ಒಂದೆಡೆ ಕುಳಿತು ಪರೀಕ್ಷೆ ಬರೆಯುತ್ತಾರೆ. ಈ ವೇಳೆ ವೈರಸ್ ಹರಡುವ ಸಾಧ್ಯತೆಗಳಿರುತ್ತವೆ. ಸರ್ಕಾರ ಈಗಾಗಲೇ ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದೆ. ಆದರೂ, ಮಕ್ಕಳು ವೈರಸ್ ಇರುವಂತರ ಸ್ಥಳಗಳನ್ನು ಮುಟ್ಟುವುದೇ ಹೆಚ್ಚು. ಸರ್ಕಾರ ಸುಮ್ಮನೆ ರಜೆ ಘೋಷಣೆ ಮಾಡುವುದು ಉತ್ತಮ. ಪರೀಕ್ಷೆಗಳಿಂದಾಗಿ ಪೋಷಕರಿಗೂ ಭಯ, ಮಕ್ಕಳ ಜೀವಕ್ಕೂ ಅಪಾಯ ಎಂದು ತಿಳಿಸಿದ್ದಾರೆ.

ಅವಳಿ ಮಕ್ಕಳ ತಾಯಿಯಾಗಿರುವ ಸಾಗರಿಕಾ ಎಂಬುವವರು ಮಾತನಾಡಿ, ಇಂತಹ ನಿರ್ಧಾರ ರಾಜ್ಯ ಸರ್ಕಾರ ಮೂರ್ಖತನವನ್ನು ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ಮುಂದುವರೆಸುವ ಅಗತ್ಯವಾದರೂ ಏನಿದೆ? ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಹೆಚ್ಚೆಚ್ಚು ಜನರಿರುವ ಪ್ರದೇಶಗಳಲ್ಲಿ ಇರುತ್ತಾರೆ. ಇದು ಆತಂಕವನ್ನು ಹೆಚ್ಚಿಸುತ್ತದೆ. ಪರೀಕ್ಷೆ ಕಡ್ಡಾಯವಾಗಿರುವುದರಿಂದ ಅವರನ್ನು ತಡೆಯಲು ನಮಗೆ ಸಾಧ್ಯವಾಗುವುದಿಲ್ಲ.

ಪರಿಸ್ಥಿತಿ ಸುಧಾರಿಸುವವರೆಗೂ ತರಗತಿ, ಪರೀಕ್ಷೆಗಳನ್ನು ರದ್ದುಪಡಿಸುವಂತೆ ಸಾಕಷ್ಟು ಪೋಷಕರು ಯಡಿಯೂರಪ್ಪ ಅವರಿಗೆ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.