ಉಪಗ್ರಹ ಉಡಾವಣೆಯನ್ನೀಗ ಪ್ರತ್ಯಕ್ಷ ನೋಡಬಹುದು: ಮೊದಲ ಬಾರಿಗೆ ವ್ಯವಸ್ಥೆ ಕಲ್ಪಿಸಿದೆ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯನ್ನು ಸಾರ್ವಜನಿಕರ ಸನಿಹಕ್ಕೆ ಒಯ್ಯುವ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದೆ. ಬಾಹ್ಯಾಕಾಶ ಆಸಕ್ತರಿನ್ನು ಉಪಗ್ರಹ, ಕ್ಷಿಪಣಿ ಉಡಾವಣೆ ಕಾರ್ಯವನ್ನು ಪ್ರತ್ಯಕ್ಷವಾಗಿ ಕಣ್ತುಂಬಿಕೊಳ್ಳಬಹುದಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ದ್ವೀಪದಲ್ಲಿರುವ ಸತೀಶ್ ಧವನ್ ಕೇಂದ್ರದಲ್ಲಿ ಈ ಸಂಬಂಧ ಇಸ್ರೋ ವ್ಯವಸ್ಥೆ ಕಲ್ಪಿಸಿದೆ.

5,000 ಮಂದಿಗೆ ಕುಳಿತುಕೊಂಡು ಉಡ್ಡಯನ ವೀಕ್ಷಿಸಲು ಅನುಕೂಲವಾಗುವಂತಹ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಈ ಗ್ಯಾಲರಿಯು ಎರಡು ಲಾಂಚ್‌ಪ್ಯಾಡ್‌ಗಳ ಮುಖ ಮಾಡಿದೆ. ಇದು ರಾಕೆಟ್ ಹಾಗೂ ಅದರ ಉಡ್ಡಯನದ ಸ್ಪಷ್ಟ ನೋಟ ಒದಗಿಸಲಿದೆ ಎಂದು ಇಸ್ರೋ ಪ್ರಕಟಿಸಿದೆ. ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಈ ಗ್ಯಾಲರಿಯ ಉದ್ಘಾಟನೆ ನಡೆಸಲಿದ್ದು, ಮಾ.31ರಂದು ಸಾರ್ವಜನಿಕರಿಗೆ ತೆರೆದುಕೊಳ್ಳಲಿದೆ.

ಸೋಮವಾರ ಏ.1ರಂದು ಪಿಎಸ್ಎಲ್‌ವಿ-ಸಿ45 ರಾಕೆಟ್ ಡಿಆರ್‌ಡಿಒದ ಪ್ಲೇಲೋಡ್ ಎಮಿಸ್ಯಾಟ್ ಮತ್ತು 28 ವಿದೇಶಿ ಉಪಗ್ರಹಗಳೊಂದಿಗೆ ನಭಕ್ಕೆ ಏರಲಿದೆ. ಇದು ಸಾರ್ವಜನಿಕರು ವೀಕ್ಷಣೆಗೆ ಲಭ್ಯವಾಗಲಿರುವ ಪ್ರಥಮ ಉಡ್ಡಯನವಾಗಲಿದೆ.

ಅಮೆರಿಕದ ನಾಸಾ ಸಂಸ್ಥೆಯೂ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿದ್ದು, ಅದೇ ನಿಟ್ಟಿನಲ್ಲಿ ಇಸ್ರೋ ಕೂಡಾ ಹೆಜ್ಜೆಯಿಟ್ಟಿದೆ. ಉಡ್ಡಯನ ವೀಕ್ಷಿಸಲು ಅಪೇಕ್ಷಿಸುವ ಸಾರ್ವಜನಿಕರು ಮುಂಚಿತವಾಗಿ ಇಸ್ರೋ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ಸಂದರ್ಶಕರಿಗೆ ಕನಿಷ್ಠ 10 ವರ್ಷ ವಯಸ್ಸಾಗಿರಬೇಕು. ವಿಡಿಯೋ ಕ್ಯಾಮರಾ, ಫೋನ್ ಕೊಂಡೊಯ್ಯಲು ಅವಕಾಶ ಇರುವುದಿಲ್ಲ. ಆನ್‌ಲೈನ್‌ನಲ್ಲಿ ನೋಂದಣಿ ಬಳಿಕ ಸಿಗುವ ಎಂಟ್ರಿ ಪಾಸ್ ಅನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ಅನ್ನು ಪ್ರವೇಶದ ವೇಳೆ ತೋರಿಸಬೇಕು.

Leave a Reply